ಜನಪ್ರತಿನಿಧಿಗಳು ಹಾಗೂ ಗ್ರಾಹಕರ ನಡುವಿನ ಸೇತುವೆಯಂತೆ ಕಾರ್ಯನಿರ್ವಹಿಸುತ್ತಿರುವ ಸಹಕಾರ ಸಂಘಗಳು ಭ್ರಷ್ಟಾಚಾರ ಮುಕ್ತವಾಗಿದ್ದಾಗ ಮಾತ್ರ ಸಹಕಾರಿ ಕ್ಷೇತ್ರದ ಬೆಳವಣಿಗೆ ಸಾಧ್ಯ ಎಂದು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ ಅಧ್ಯಕ್ಷ ಕೆ.ಪಿ. ಗಣಪತಿ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಜನಪ್ರತಿನಿಧಿಗಳು ಹಾಗೂ ಗ್ರಾಹಕರ ನಡುವಿನ ಸೇತುವೆಯಂತೆ ಕಾರ್ಯನಿರ್ವಹಿತ್ತಿರುವ ಸಹಕಾರ ಸಂಘಗಳು ಭ್ರಷ್ಟಾಚಾರ ಮುಕ್ತವಾಗಿದ್ದಾಗ ಮಾತ್ರ ಸಹಕಾರಿ ಕ್ಷೇತ್ರದ ಬೆಳವಣಿಗೆ ಸಾಧ್ಯ ಎಂದು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ ಅಧ್ಯಕ್ಷ ಕೆ.ಪಿ. ಗಣಪತಿ ಹೇಳಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನ ಸಂಯುಕ್ತಾಶ್ರಯದಲ್ಲಿ ನಗರದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ಜಿಲ್ಲೆಯ ಪ್ಯಾಕ್ಸ್, ಪಿಕಾರ್ಡ್ ಬ್ಯಾಂಕ್, ಎ.ಪಿ.ಸಿ.ಎಂ.ಎಸ್. ಹಾಗೂ ಜೇನು ಸಹಕಾರ ಸಂಘಗಳ ಕಾರ್ಯನಿರ್ವಾಹಕರಿಗೆ ಇತ್ತೀಚಿನ ಸಹಕಾರ ಕಾಯ್ದೆ, ಕಾನೂನು ತಿದ್ದುಪಡಿ ಮತ್ತು ಜಿಎಸ್ ಟಿ, ಆದಾಯ ತೆರಿಗೆ ಕುರಿತು ಶಿಕ್ಷಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದೆ ಸಹಕಾರಿ ಕ್ಷೇತ್ರದಲ್ಲಿ ಕೊಡಗು ಇತರರಿಗೆ ಮಾದರಿಯಾಗಿತ್ತು. ಆದರೆ ಇಂದು ಅವ್ಯವಹಾರ ನುಸುಳಿದೆ. ಈ ಬಗ್ಗೆ ಪ್ರತಿಯೊಬ್ಬರು ಆತ್ಮಾವಲೋಕನ ಮಾಡಿಕೊಳ್ಳಬೇಕು, ಸಹಕಾರಿ ಕ್ಷೇತ್ರವನ್ನು ಭ್ರಷ್ಟಾಚಾರ ಮುಕ್ತಗೊಳಿಸಬೇಕು ಮತ್ತು ಸಹಕಾರ ಸಂಘಗಳ ಬೆಳವಣಿಗೆಗೆ ಶ್ರಮಿಸಬೇಕು ಎಂದು ಕರೆ ನೀಡಿದರು.

ಸಹಕಾರ ಕ್ಷೇತ್ರದಲ್ಲಿ ಎಲ್ಲವನ್ನೂ ಕಲಿತೆ ಎಂದರೆ ತಪ್ಪಾಗುತ್ತದೆ, ನಿರಂತರ ಕಲಿಯುತ್ತಿರಬೇಕು. ಅಧಿಕಾರ ವರ್ಗ ಇಚ್ಛಾಶಕ್ತಿ ಮತ್ತು ಕಾರ್ಯಶಕ್ತಿಯನ್ನು ಪ್ರದರ್ಶಿಸಬೇಕು. ಸಂಸ್ಥೆಯಲ್ಲಿ ಯಾವುದೇ ದುರುಪಯೋಗಕ್ಕೆ ಅವಕಾಶ ಇರಬಾರದು. ಆಡಳಿತ ಮಂಡಳಿಯ ಅನುಮತಿ ಇಲ್ಲದೆ ಯಾವುದನ್ನೂ ಮಾಡಲು ಸಾಧ್ಯವಿಲ್ಲ. ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳು ಜೋಡೆತ್ತಿನಂತೆ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಸಂಘದಲ್ಲಿರುವ ವಿವಿಧ ರೀತಿಯ ನಿಧಿಗಳ ಕುರಿತು ಜ್ಞಾನ ಹೊಂದಿರಬೇಕು. ಅದರ ಉದ್ದೇಶವನ್ನು ಅರಿತು ಕಾರ್ಯ ನಿರ್ವಹಿಸಬೇಕು. ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಶಿಸ್ತು ಮತ್ತು ಸಮಯ ಪಾಲನೆ ಮಾಡುವುದು, ಸಹಕಾರ ಕ್ಷೇತ್ರದ ಕಾನೂನು ಕಾಯ್ದೆ ಅರಿತುಕೊಳ್ಳುವುದು ಅತೀ ಮುಖ್ಯ. ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಕಾಯ್ದೆಯ ಪುಸ್ತಕಗಳನ್ನು ಮನವರಿಕೆ ಮಾಡಿಕೊಳ್ಳಬೇಕು. ಸಹಕಾರ ಸಂಘಗಳು ಆಯೋಜನೆ ಮಾಡುವ ಕಾರ್ಯಕ್ರಮಗಳಿಗೆ ಸಮಯಕ್ಕೆ ಸರಿಯಾಗಿ ತೆರಳಬೇಕು. ಶಿಕ್ಷಣ ಕಾರ್ಯಕ್ರಮಗಳನ್ನು ಸದುಪಯೋಗ ಪಡಿಸಿಕೊಂಡು ದೈನಂದಿನ ಕಾರ್ಯಚಟುವಟಿಕೆಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕೆ.ಪಿ. ಗಣಪತಿ ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪಿ.ಯು. ರಾಬಿನ್ ದೇವಯ್ಯ ಅವರು ಸಹಕಾರ ಸಂಘದ ನಿಯಮಗಳು ಕಾಲ ಕಾಲಕ್ಕೆ ಬದಲಾಗುತ್ತಿದ್ದು, ಅಧಿಕಾರಿಗಳು ಇದನ್ನು ಗಮನಿಸಿ ಅರಿವು ಮೂಡಿಸಿಕೊಳ್ಳಬೇಕು. ಜಿಲ್ಲೆಯ ಎಲ್ಲಕಾರ್ಯನಿರ್ವಾಹಕರುಗಳಿಗೆ ತರಬೇತಿ ನೀಡಲಾಗುತ್ತಿದ್ದು, ಸಮಗ್ರ ಮಾಹಿತಿಯೊಂದಿಗೆ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಸಹಕಾರ ಸಂಘಗಳಿಗೆ ಕೇಂದ್ರ ಸರಕಾರ ಸಹಕಾರ ಮಂತ್ರಾಲಯವನ್ನು ಸ್ಥಾಪಿಸಿದೆ, ಇದು ದೇಶದಲ್ಲಿ ಸಹಕಾರ ಚಳವಳಿಯನ್ನು ಬಲಪಡಿಸಲು ಮತ್ತು ಸಹಕಾರ ಸಂಘಗಳಿಗೆ ಸೂಕ್ತ ನೀತಿ, ಕಾನೂನು ಚೌಕಟ್ಟು ನೀಡಲು ಸಹಕಾರಿಯಾಗಿದೆ. ಈ ಸಚಿವಾಲಯವು ಸಹಕಾರ ಸಂಘಗಳ ಅಭಿವೃದ್ಧಿಗಾಗಿ ನೀತಿಗಳನ್ನು ರೂಪಿಸುತ್ತದೆ ಮತ್ತು ಬೆಂಬಲ ನೀಡುತ್ತದೆ. ಸಹಕಾರ ಕ್ಷೇತ್ರದಲ್ಲಿ ಪ್ರತಿಯೊಬ್ಬ ಕೃಷಿಕರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಮಾರ್ಗದರ್ಶಿಯಾಗಿ ಆಡಳಿತ ಮಂಡಳಿಯನ್ನು ಅವಲಂಬಿಸಿದ್ದಾರೆ.

ಆದ್ದರಿಂದ ಅಧಿಕಾರಿಗಳು ಸಹಕಾರಿ ಕಾಯ್ದೆಯ ಎಲ್ಲ ವಿಚಾರವನ್ನು ರೈತರು ಹಾಗೂ ಗ್ರಾಹಕರಿಗೆ ಸಮರ್ಪಕವಾಗಿ ತಿಳಿಸುವ ಕೆಲಸ ಮಾಡಬೇಕು. ಆದ್ದರಿಂದ ಕಾಲ ಕಾಲಕ್ಕೆ ಬದಲಾಗುವ ಎಲ್ಲ ಕಾನೂನು, ಕಾಯ್ದೆಯನ್ನು ಕಾರ್ಯನಿರ್ವಾಹಕರು ಹಾಗೂ ಸಿಬ್ಬಂದಿಗಳು ತಿಳಿದುಕೊಳ್ಳಬೇಕು. ಜವಾಬ್ದಾರಿಯಿಂದ ನುಣಿಚಿಕೊಳ್ಳುವ ಕೆಲಸ ಆಗಬಾರದು ಎಂದರು.

ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನ ನಿರ್ದೇಶಕರಾದ ಕೆ.ಟಿ. ಪರಮೇಶ್, ಬಲ್ಲಾರಂಡ ಮಣಿ ಉತ್ತಪ್ಪ, ಎ.ಸಿ. ಕುಶಾಲಪ್ಪ, ಎಂ.ಟಿ. ಸುಬ್ಬಯ್ಯ, ವಿ.ಸಿ. ಅಮೃತ್, ಎಂ.ಎ. ಶ್ಯಾಮಲಾ, ಎಸ್.ಆರ್. ಸುನಿಲ್ ರಾವ್ ಉಪಸ್ಥಿತರಿದ್ದರು.

ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಹಾಗೂ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ನಿರ್ದೇಶಕ ಎಚ್.ಕೆ. ಮಾದಪ್ಪ ಸ್ವಾಗತಿಸಿದರು. ಸಿಬ್ಬಂದಿ ಆರ್. ಮಂಜುಳಾ ಪ್ರಾರ್ಥಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ನಿರೂಪಿಸಿದರು.

ಇತ್ತೀಚೆಗೆ ನಿಧನರಾದ ಹಿರಿಯ ಸಹಕಾರಿಗಳು ಹಾಗೂ ಸಹಕಾರ ರತ್ನ ಪುರಸ್ಕೃತರಾದ ಕುಮಾರಪ್ಪ ಅವರಿಗೆ ಕಾರ್ಯಕ್ರಮದಲ್ಲಿ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಉಪನ್ಯಾಸ:

ಸಭಾ ಕಾರ್ಯಕ್ರಮದ ನಂತರ ಸಹಕಾರ ಸಂಘಗಳ ನಿವೃತ್ತ ನಿಬಂಧಕ ಡಾ. ಗುರುಸ್ವಾಮಿ ಹಾಗೂ ಸನ್ನದು ಲೆಕ್ಕಿಗ ಎ. ಗೋಪಾಲಕೃಷ್ಣ ಅವರು ಇತ್ತೀಚಿನ ಸಹಕಾರ ಕಾಯ್ದೆ-ಕಾನೂನು ತಿದ್ದುಪಡಿ ಹಾಗೂ ಜಿಎಸ್ ಟಿ, ಆದಾಯ ತೆರಿಗೆ ಕುರಿತು ಉಪನ್ಯಾಸ ನೀಡಿದರು.