ಮತದಾನ ಯಶಸ್ಸಿಗೆ ಸಿಆರ್‌ಸಿ ಹೊಣೆ ಮೆರೆಯಲಿ

| Published : Apr 06 2024, 12:48 AM IST

ಸಾರಾಂಶ

ಲೋಕಸಭಾ ಚುನಾವಣೆ ಮತದಾನವು ಮೇ 7ರಂದು ನಡೆಯಲಿದೆ. ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳ ಬಳಕೆ ಮಾಡಲಾಗುತ್ತಿದ್ದು, ಮತದಾನ ಆರಂಭಕ್ಕೂ ಮೊದಲು ನಡೆಯುವ ಅಣಕು ಮತದಾನದ ವೇಳೆ ಸಿಆರ್‌ಸಿ ಬಹಳ ಮಹತ್ವಪೂರ್ಣವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಹೇಳಿದರು.

- ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್‌ ಸೂಚನೆ । ಸೆಕ್ಟರ್ ಅಧಿಕಾರಿಗಳು, ಮಾಸ್ಟರ್ ಟ್ರೈನರ್‌ಗಳಿಗೆ ತರಬೇತಿ ಕಾರ್ಯಾಗಾರ- - -

ಕನ್ನಡಪ್ರಭ ವಾರ್ತೆ, ದಾವಣಗೆರೆ

ಲೋಕಸಭಾ ಚುನಾವಣೆ ಮತದಾನವು ಮೇ 7ರಂದು ನಡೆಯಲಿದೆ. ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳ ಬಳಕೆ ಮಾಡಲಾಗುತ್ತಿದ್ದು, ಮತದಾನ ಆರಂಭಕ್ಕೂ ಮೊದಲು ನಡೆಯುವ ಅಣಕು ಮತದಾನದ ವೇಳೆ ಸಿಆರ್‌ಸಿ ಬಹಳ ಮಹತ್ವಪೂರ್ಣವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಹೇಳಿದರು.

ನಗರದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಶುಕ್ರವಾರ ಸೆಕ್ಟರ್ ಅಧಿಕಾರಿಗಳು ಹಾಗೂ ಮಾಸ್ಟರ್ ಟ್ರೈನರ್‌ಗಳಿಗೆ ಏರ್ಪಡಿಸಲಾದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಏ.8ರಂದು ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಮತದಾನ ಕರ್ತವ್ಯದಲ್ಲಿ ಭಾಗವಹಿಸುವ ಎಲ್ಲ ಅಧಿಕಾರಿಗಳು ಹಾಗೂ ಮತದಾನ ಸಿಬ್ಬಂದಿಗೆ ತರಬೇತಿ ಕಾರ್ಯಾಗಾರ ಏರ್ಪಡಿಸಲಾಗಿದೆ. ತರಬೇತಿಯಲ್ಲಿ ಸೆಕ್ಟರ್ ಅಧಿಕಾರಿಗಳು ಹಾಗೂ ಮಾಸ್ಟರ್ ಟ್ರೈನರ್‌ಗಳು ಭಾಗವಹಿಸಿ ಮತದಾನ ಸಿಬ್ಬಂದಿಗೆ ತರಬೇತಿ ನೀಡುವರು ಎಂದರು.

ಮತದಾನ ಯಶಸ್ಸು ಸಿಆರ್‌ಸಿ ಮೇಲಿದೆ:

ಮತದಾನಕ್ಕೆ ವಿದ್ಯುನ್ಮಾನ ಮತಯಂತ್ರ ಬಳಕೆ ಮಾಡುತ್ತಿರುವುದರಿಂದ ಮೇ 7ರಂದು ಮತದಾನಕ್ಕೂ ಮುಂಚಿತವಾಗಿ ಮತಗಟ್ಟೆಯಲ್ಲಿ ಏಜೆಂಟರ ಸಮ್ಮುಖ ಅಣಕು ಮತದಾನ ನಡೆಯುತ್ತದೆ. ಅನಂತರ ಬ್ಯಾಲೆಟ್ ಕ್ಲಿಯರ್ ಮಾಡಿ ರಿಸೆಲ್ಟ್ ಕ್ಲೋಸ್ ಮಾಡುವುದು ಬಹಳ ಮುಖ್ಯ. ಒಂದುವೇಳೆ ಮತಗಟ್ಟೆ ಅಧಿಕಾರಿ ಇದನ್ನು ಕ್ಲಿಯರ್ ಮಾಡದಿದ್ದಲ್ಲಿ, ಮತ ಎಣಿಕೆಯ ವೇಳೆ ಸಮಸ್ಯೆ ಆಗುತ್ತದೆ. ಮತದಾನಕ್ಕೂ ಮೊದಲು ಸಮಚಿತ್ತರಾಗಿ, ಯಾವುದೇ ಗೊಂದಲ, ವಿವಾದಗಳಿಗೆ ಆಸ್ಪದ ನೀಡದೇ ಸರಾಗವಾಗಿ ಮತದಾನ ಆರಂಭವಾಗಿ ಮುಕ್ತಾಯವಾಗಬೇಕು. ಈ ನಿಟ್ಟಿನಲ್ಲಿ ಏ.8ರಂದು ಏರ್ಪಡಿಸಲಾದ ಮತದಾನ ಸಿಬ್ಬಂದಿ ತರಬೇತಿಯಲ್ಲಿ ಸರಿಯಾಗಿ ತಿಳಿಸಿಕೊಡಲು ಸೂಚಿಸಿದರು.

ಮತದಾನ ಕಾರ್ಯ ಸುಗಮವಾಗಿ ನಡೆಯಲು ಸೆಕ್ಟರ್ ಅಧಿಕಾರಿಗಳ ಜವಾಬ್ದಾರಿ ಹೆಚ್ಚಿರುತ್ತದೆ. ಈ ನಿಟ್ಟಿನಲ್ಲಿ ಯಾವುದೇ ಸೆಕ್ಟರ್ ಅಧಿಕಾರಿಗಳು ಕರ್ತವ್ಯ ನಿರ್ಲಕ್ಷ್ಯತೆ ತೋರದೇ ಶ್ರದ್ಧೆಯಿಂದ ಕೆಲಸ ಮಾಡಬೇಕು. ಜಿಲ್ಲೆಯಲ್ಲಿ ಒಟ್ಟು 164 ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಿದ್ದು, ಜಗಳೂರು 31, ಹರಿಹರ 22, ದಾವಣಗೆರೆ ಉತ್ತರ 21, ದಕ್ಷಿಣ 18, ಮಾಯಕೊಂಡ 25, ಚನ್ನಗಿರಿ 23, ಹೊನ್ನಾಳಿ 24 ಸೆಕ್ಟರ್ ಅಧಿಕಾರಿಗಳು ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.

ಈ ಸಂದರ್ಭ ಅಪರ ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್. ಬಳ್ಳಾರಿ, ಎಲ್ಲ ಸಹಾಯಕ ಚುನಾವಣಾಧಿಕಾರಿಗಳು ಉಪಸ್ಥಿತರಿದ್ದರು.

- - -

-5ಕೆಡಿವಿಜಿ37ಃ:

ಕಾರ್ಯಾಗಾರದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಮಾತನಾಡಿದರು.