ಸಾರಾಂಶ
ಸಸಿ ನೆಡುವುದು, ವಿದ್ಯಾರ್ಥಿಗಳಿಗೆ ನೆರವು ಸೇರಿ ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಆಚರಿಸಲಾಗುವ ಜನ್ಮದಿನಾಚರಣೆಗಳು ಹೆಚ್ಚು ಅರ್ಥಪೂರ್ಣವಾಗಿರುತ್ತವೆ.
ಹಗರಿಬೊಮ್ಮನಹಳ್ಳಿ: ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಅರ್ಥಪೂರ್ಣ ಹುಟ್ಟುಹಬ್ಬಗಳನ್ನು ಆಚರಣೆ ಮಾಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಡಾ.ಸಾಹಿರಾಬಾನು ಹೇಳಿದರು.
ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ತಮ್ಮ ಪುತ್ರ ಅಬೂಬಕರ್ ಜನ್ಮದಿನದ ನಿಮಿತ್ತ ಮಕ್ಕಳಿಗೆ ಆರೋಗ್ಯ ತಪಾಸಣೆ ಉಚಿತ ಶಿಬಿರ ಮತ್ತು ಔಷಧಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶನಿವಾರ ಅವರು ಮಾತನಾಡಿದರು.ಬಡ ಮಕ್ಕಳ ಶಿಕ್ಷಣ ಉಜ್ವಲಗೊಳ್ಳಬೇಕಾದರೆ ಸರ್ಕಾರಿ ಶಾಲೆಗಳನ್ನು ಬಲಪಡಿಸಬೇಕು. ಸಸಿ ನೆಡುವುದು, ವಿದ್ಯಾರ್ಥಿಗಳಿಗೆ ನೆರವು ಸೇರಿ ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಆಚರಿಸಲಾಗುವ ಜನ್ಮದಿನಾಚರಣೆಗಳು ಹೆಚ್ಚು ಅರ್ಥಪೂರ್ಣವಾಗಿರುತ್ತವೆ. ಈ ನಿಟ್ಟಿನಲ್ಲಿ ಈ ಹಿಂದೆ ಮೊಮ್ಮಗನ ಜನ್ಮದಿನದ ವೇಳೆ ೫ಸಾವಿರಕ್ಕೂ ಹೆಚ್ಚು ಸಸಿ ವಿತರಿಸಿದ್ದೆವು. ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ವ್ಯಕ್ತಿತ್ವ ವಿಕಸನ ಹಾಗೂ ಪರಿಸರ ಉಳಿವಿನ ಕಾಳಜಿ ಕುರಿತು ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.
ಇದೇ ವೇಳೆ ಡಾ.ಮಲ್ಲಿಕಾರ್ಜುನ, ಡಾ.ಆಶಾ, ಡಾ.ಚೈತ್ರಾ, ಡಾ.ಉಮಾ ಇತರರು ೩೦೦ಕ್ಕೂ ಹೆಚ್ಚು ಮಕ್ಕಳಿಗೆ ಆರೋಗ್ಯ ತಪಾಸಣೆ ನಡೆಸಿ, ಹಲವರಿಗೆ ಔಷಧಿ ಉಚಿತ ವಿತರಿಸಿದರು.ತಾಲೂಕಿನ ಇಬ್ಬರು ಬಡ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ನೆರವು ಒದಗಿಸುವುದಾಗಿ ಪುರಸಭೆ ಸದಸ್ಯ ಲಂಬಾಣಿ ಗಣೇಶ್ ತಿಳಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವಂತೆ ಮುಖಂಡ ಇಂತಿಯಾಜ್ ₹೧೦ಸಾವಿರ ದೇಣಿಗೆ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಕೃಷ್ಣನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಅಬೂಬಕರ್, ಸಿಖಂದರ್ ಖಾನ್, ಬುಡೇನ್‌ಸಾಹೇಬ್, ಶಮೀರ್, ಅಶೋಕ, ಜಬಿ, ರಾಜಾಸಾಹೇಬ್, ಪುರುಷೋತ್ತಮ, ಕಿರಣ್ ಇದ್ದರು. ಶಿಕ್ಷಕರಾದ ಕೆ.ಸಂತೋಷ್, ಕೆ.ಪಿ. ಕೃಷ್ಣಪ್ರಸಾದ್, ಸರ್ವಮಂಗಳ, ಶಶಿಕಲಾ, ಸುರೇಶ್, ಕೆ.ಮಲ್ಲಿಕಾರ್ಜುನ ನಿರ್ವಹಿಸಿದರು.