ಸಾರಾಂಶ
ಒತ್ತಡ ಸಹಿಸಲಾಗದೆ ಸರ್ಕಾರದ ಕೆಲ ನೌಕರರು ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಅಂತಹ ನಿರ್ಧಾರಗಳಿಂದ ಹೊರಬರುವಂತೆ ಮಾನಸಿಕ ತಜ್ಞರು ತಿಳಿವಳಿಕೆ ನೀಡಬೇಕೆಂದು ಜಿಪಂ ಸಿಇಓ ಸ್ವರೂಪ ಟಿ.ಕೆ. ಹೇಳಿದರು.
ಕನ್ನಡಪ್ರಭ ವಾರ್ತೆ ಧಾರವಾಡ
ಒತ್ತಡ ಸಹಿಸಲಾಗದೆ ಸರ್ಕಾರದ ಕೆಲ ನೌಕರರು ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಅಂತಹ ನಿರ್ಧಾರಗಳಿಂದ ಹೊರಬರುವಂತೆ ಮಾನಸಿಕ ತಜ್ಞರು ತಿಳಿವಳಿಕೆ ನೀಡಬೇಕೆಂದು ಜಿಪಂ ಸಿಇಓ ಸ್ವರೂಪ ಟಿ.ಕೆ. ಹೇಳಿದರು.ಜಿಪಂ ಸಭಾ ಭವನದಲ್ಲಿ ಗುರುವಾರ ಜರುಗಿದ ಮಾನಸಿಕ ಒತ್ತಡ ನಿವಾರಣೆಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ತಜ್ಞ ವೈದ್ಯರಿಂದ ಅವಸರದ ನಿರ್ಧಾರ ತಡೆಗಟ್ಟುವ ನಿಟ್ಟಿನಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಕೆಲವೊಂದು ಅಹಿತಕರ ಘಟನೆಗಳನ್ನು ತಡೆಯಬೇಕಿದೆ. ನೌಕರರು ಮಾನಸಿಕ ಒತ್ತಡದಿಂದ ತೆಗೆದುಕೊಳ್ಳುತ್ತಿರುವ ಆತುರದ ನಿರ್ಧಾರದಿಂದ ಜೀವವನ್ನೇ ಕಳೆದುಕೊಳ್ಳುತ್ತಾರೆ. ಅಂತಹ ಸಿಬ್ಬಂದಿಯನ್ನು ಗುರುತಿಸಿ ಚಿಕಿತ್ಸೆ ಕೊಡಿಸಬೇಕು ಎಂದರು. ಕೆಲಸದ ನಿಮಿತ್ತ ಮಾನಸಿಕ ಒತ್ತಡ ಹೆಚ್ಚಿದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ದೂರವಾಣಿ ಸಂಖ್ಯೆಗೆ ಕರೆ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು.ಡಿಮಾನ್ಸ್ ಮಾನಸಿಕ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಮೇಘಮಾಲಾ ತಾವರಗಿ, ತರಬೇತಿ ಕುರಿತಾಗಿ ಕೆಲಸದ ಸ್ಥಳಗಳಲ್ಲಿ ಒತ್ತಡ ನಿರ್ವಹಣೆ ಹಾಗೂ ಕೌಟುಂಬಿಕ ಕಲಹಗಳು ನಿರ್ವಹಣೆ ಎಲ್ಲ ವಿಷಯಗಳ ಕುರಿತಾಗಿ ಸವಿಸ್ತಾರವಾಗಿ ಮಾತನಾಡಿದರು. ವಿವಿಧ ರೀತಿಯ ಒತ್ತಡಗಳು, ಸಮಸ್ಯೆ ಆಧಾರಿತ ಒತ್ತಡಗಳು, ಒತ್ತಡಗಳಿಂದ ಆರೋಗ್ಯದ ಮೇಲೆ ಆಗುವಂತ ಸಮಸ್ಯೆಗಳು, ಕೆಲಸದ ಒತ್ತಡಗಳನ್ನು ಹೇಗೆ ನಿರ್ವಹಣೆ ಮಾಡಬೇಕು ಎನ್ನುವ ಕುರಿತು ಸವಿಸ್ತಾರವಾಗಿ ತಿಳಿಸಿದರು.
ಡಿಮ್ಹಾನ್ಸ್ ಮನೋವೈದ್ಯ ಡಾ. ರಾಘವೇಂದ್ರ ಪಾಟೀಲ ಆತ್ಮಹತ್ಯೆ ತಡೆಗಟ್ಟುವಿಕೆ ಮತ್ತು ವ್ಯಸನದಿಂದ ಆಗುವ ಮಾನಸಿಕ ತೊಂದರೆಗಳ ಕುರಿತು ಮಾತನಾಡಿದರು.ಭಾರತದಲ್ಲಿ ವಿವಿಧ ರೀತಿಯ ಪ್ರಕರಣಗಳು ಬೆಳಕಿಗೆ ಬಂದಿವೆ. ಇತ್ತೀಚಿನ ಆಧುನಿಕ ಯುಗದಲ್ಲಿ ಯುವಜನರು ಆತ್ಮಹತ್ಯೆ ಮಾಡಿಕೊಳ್ಳಬಾರದು. ಆತ್ಮಹತ್ಯೆ ತಡೆಗಟ್ಟುವಲ್ಲಿ ಸರ್ಕಾರದಿಂದ ಇರುವಂತ ಕಾರ್ಯಕ್ರಮಗಳು ಮತ್ತು ಕಾನೂನು ವ್ಯವಸ್ಥೆಗಳು, ಮತ್ತು ಟೆಲಿ ಮಾನಸ ಸಹಾಯವಾಣಿ 14416ಯ ಸಹಾಯ ಪಡೆಯಬೇಕು ಎಂದು ತಿಳಿಸಿದರು.
ಡಿಎಚ್‌ಒ ಡಾ. ಶಶಿ ಪಾಟೀಲ್, ಜಿಪಂ ಉಪಕಾರ್ಯದರ್ಶಿ ಬಸವಲಿಂಗಯ್ಯ ಮೂಗನೂರಮಠ, ಪ್ಯಾನಲ್ ವಕೀಲರಾದ ಸೋಮಶೇಖರ ಜಾಡರ, ಪೊಲೀಸ್ ಇಲಾಖೆಯ ಡಿವೈಎಸ್ಪಿ ನಾಗರಾಜ ಎಸ್.ಎಂ. ಇದ್ದರು.