ರೈತರು ವಿಮಾ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಲಿ: ಆರಗ

| Published : Dec 10 2023, 01:30 AM IST

ಸಾರಾಂಶ

ಬೆಳೆ ಹಾನಿಗೆ ಸಂಬಂಧಿಸಿ ಕ್ಷೇತ್ರಕ್ಕೆ ಈವರೆಗೆ ₹1.50 ಕೋಟಿ ಪರಿಹಾರದ ಹಣವೂ ಬಂದಿದೆ. ಮಳೆಯ ಕೊರತೆಯಿಂದಾಗಿ ಎದುರಾಗಿರುವ ಭೀಕರ ಬರಗಾಲವನ್ನು ಎದುರಿಸುವ ಸಲುವಾಗಿ ಮತ್ತು ಈ ವರ್ಷ ಸಂಭವಿಸಬಹದಾದ ಹಾನಿಯನ್ನು ಸರಿದೂಗಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹವಾಮಾನಾಧಾರಿತ ವಿಮೆ ಸೌಲಭ್ಯವನ್ನು ಎಲ್ಲ ರೈತರೂ ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.

ಮಂಡಲಮನೆ ಗ್ರಾಮದಲ್ಲಿ ₹16 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಅಂಗನವಾಡಿ ಕಟ್ಟಡ ಉದ್ಘಾಟಿಸಿ ಕರೆ

ಕನ್ನಡಪ್ರಭವಾರ್ತೆ ತೀರ್ಥಹಳ್ಳಿ

ಈ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಕೃಷಿಕರ ಬದುಕನ್ನು ಭದ್ರಗೊಳಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹವಾಮಾನಾಧಾರಿತ ವಿಮಾ ಸೌಲಭ್ಯವನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ತಾಲೂಕಿನ ಹಾದಿಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಡಲಮನೆ ಗ್ರಾಮದಲ್ಲಿ 16 ಲಕ್ಷ ರು.ಗಳ ವೆಚ್ಚದಲ್ಲಿ ನಿರ್ಮಿಸಲಾದ ಅಂಗನವಾಡಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ಅಂಗನವಾಡಿಗಳು ಎಳೆಯ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ಕಲ್ಪಿಸುವ ಮೊದಲ ಪಾಠಶಾಲೆಯಾಗಿದೆ. ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರದ ಕೊರತೆಯಾಗದಂತೆ ಆರೋಗ್ಯ ಸುಧಾರಣೆಗೂ ಆದ್ಯತೆಯನ್ನು ನೀಡುವ ಹೊಣೆಗಾರಿಕೆ ಅಂಗನವಾಡಿಗಳಿಗಿದೆ ಎಂದರು.

ಬೆಳೆ ಹಾನಿಗೆ ಸಂಬಂಧಿಸಿ ಕ್ಷೇತ್ರಕ್ಕೆ ಈವರೆಗೆ ₹1.50 ಕೋಟಿ ಪರಿಹಾರದ ಹಣವೂ ಬಂದಿದೆ. ಮಳೆಯ ಕೊರತೆಯಿಂದಾಗಿ ಎದುರಾಗಿರುವ ಭೀಕರ ಬರಗಾಲವನ್ನು ಎದುರಿಸುವ ಸಲುವಾಗಿ ಮತ್ತು ಈ ವರ್ಷ ಸಂಭವಿಸಬಹದಾದ ಹಾನಿಯನ್ನು ಸರಿದೂಗಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹವಾಮಾನಾಧಾರಿತ ವಿಮೆ ಸೌಲಭ್ಯವನ್ನು ಎಲ್ಲ ರೈತರೂ ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಡಿಯುವ ನೀರಿನ ಯೋಜನೆಗೆ 500 ಕೋಟಿ ರು. ಅನುದಾನ ಮಂಜೂರಾಗಿದೆ. ಈ ಯೋಜನೆಗಳಲ್ಲಿ 344 ಕೋಟಿ ರು. ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯೂ ಸೇರಿದೆ. ಈ ಯೋಜನೆಗಳು ಮುಂದಿನ ಒಂದು ವರ್ಷದ ಅವಧಿಯೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದೂ ಆರಗ ಜ್ಞಾನೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿಗೆ ಮಂಜೂರಾಗಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ 36 ಗ್ರಾಪಂ ವ್ಯಾಪ್ತಿಯಲ್ಲಿರುವ ಪ್ರತಿ ಮನೆಗಳಿಗೆ ದಿನದ 24 ತಾಸು ಯಾವುದೇ ಅಡಚಣೆಯಾಗದಂತೆ ಶುದ್ಧೀಕೃತ ಕುಡಿಯುವ ನೀರನ್ನು ಒದಗಿಸಲಾಗುವುದು. ಈ ಯೋಜನೆಗೆ ನೀರಿನ ಕೊರತೆಯಾಗದಂತೆ ಸದಾ ನೀರಿನ ಸಂಗ್ರಹವಿರುವ ಮೇಗರವಳ್ಳಿ ಗ್ರಾಪಂ ವ್ಯಾಪ್ತಿಯ ದೊಡ್ಡಿನಮನೆ ಸಮೀಪ ಸಂಗ್ರಹವಿರುವ ವರಾಹಿ ಡ್ಯಾಂನ ನೀರನ್ನು ತರಲಾಗುವುದು ಎಂದರು.

ಸಭೆಯ ಅಧ್ಯಕ್ಷತೆಯನ್ನು ಹಾದಿಗಲ್ಲು ಗ್ರಾಪಂ ಅಧ್ಯಕ್ಷೆ ವಸಂತಿ ಶ್ರೀನಿವಾಸ್ ವಹಿಸಿದ್ದರು. ಸದಸ್ಯರಾದ ನವೀನ್, ಶ್ರೀಧರ್, ಶ್ವೇತಾ, ನಾಗೇಶ್, ಸಿಡಿಪಿಒ ಶಶಿರೇಖಾ ಹಾಗೂ ಪಿಡಿಒ ಉಲ್ಲಾಸ್ ಇದ್ದರು.

- - -

09 ಟಿಟಿಎಚ್ 01:

ಹಾದಿಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಡಲಮನೆ ಗ್ರಾಮದಲ್ಲಿ 16 ಲಕ್ಷ ರು.ಗಳ ವೆಚ್ಚದಲ್ಲಿ ನಿರ್ಮಿಸಲಾದ ಅಂಗನವಾಡಿ ಕಟ್ಟಡವನ್ನು ಶಾಸಕ ಆರಗ ಜ್ಞಾನೇಂದ್ರ ಉಧ್ಘಾಟಿಸಿದರು.