ಅಸಮಾನತೆ ವಿರುದ್ಧ ಹೋರಾಟ ನಿರಂತರವಾಗಿರಲಿ: ಸಚಿವ ಸತೀಶ ಜಾರಕಿಹೊಳಿ

| Published : Dec 03 2024, 12:33 AM IST

ಅಸಮಾನತೆ ವಿರುದ್ಧ ಹೋರಾಟ ನಿರಂತರವಾಗಿರಲಿ: ಸಚಿವ ಸತೀಶ ಜಾರಕಿಹೊಳಿ
Share this Article
  • FB
  • TW
  • Linkdin
  • Email

ಸಾರಾಂಶ

ಬಂಡಿಗಣಿ ಮಠವು ನಿರಂತರ ಧಾರ್ಮಿಕ, ಶಿಕ್ಷಣ ಹಾಗೂ ಸಮಾಜ ಸುಧಾರಣೆಗೆ ಒತ್ತು ನೀಡುವಲ್ಲಿ ಯಶಸ್ವಿ ಕಂಡು ಲಕ್ಷಾಂತರ ಭಕ್ತರನ್ನು ಅಪ್ಪಿಕೊಂಡಿರುವದು ಹೆಮ್ಮೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ರಾಜ್ಯದ ಹಲವಾರು ಮಠ-ಮಾನ್ಯಗಳ ಆಚಾರ-ವಿಚಾರ ತಿಳಿಯುವ ಪ್ರಯತ್ನ ಮಾಡುತ್ತಿರುವ ನನಗೆ ಬಂಡಿಗಣಿಮಠವು ವಿಶೇಷ ಅನುಭವ ನೀಡಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಸೋಮವಾರ ತಾಲೂಕಿನ ಬಂಡಿಗಣಿಯ ನೀಲಮಾಣಿಕ ಬಸವಗೋಪಾಲಮಠದಲ್ಲಿ ವೆಂಕಟೇಶ್ವರ ನೈವೇದ್ಯ ಹಾಗೂ ಪದ್ಮಾವತಿದೇವಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಹಿಳೆಯರೇ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಭಕ್ತಿ ಮೆರೆಯುತ್ತಿರುವುದು ವಿಶೇಷ. ಇಂದಿಗೂ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಶ್ರೀಮಠವು ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆ ತರುವಂಥದ್ದು. ೧೨ನೇ ಶತಮಾನದ ಬಸವಣ್ಣನವರ ಸಮಾನತೆಯ ಸಂದೇಶಕ್ಕೆ ಬೆಂಬಲವಾಗಿ ನಿಂತು ಅವರ ತಳಹದಿಯಲ್ಲಿಯೇ ಮಠವನ್ನು ಮುನ್ನಡೆಸಿಕೊಂಡು ಹೊಗುತ್ತಿರುವುದು ಸಂತೋಷವೆನಿಸುತ್ತಿದೆ. ಇದರ ನಿಲುವಿನ ಮೂಲಕ ವಿಚಾರಗಳೊಂದಿಗೆ ಅಸಮಾನತೆ ವಿರುದ್ಧದ ಹೋರಾಟ ಮಠಗಳಿಂದ ಸಾರುತ್ತಿರುವುದು ನಿರಂತರವಾಗಿರಲೆಂದರು.

ಶ್ರೀಗಳಿಗೆ ಪ್ರಶಂಸೆ:

ಗೋಕಾಕ ತಾಲೂಕಿನ ದುರದುಂಡಿಯಲ್ಲಿ ಶೈಕ್ಷಣಿಕ ಜೊತೆಗೆ ಹೈನುಗಾರಿಕೆಯಲ್ಲಿ ಕ್ರಾಂತಿ ಮಾಡುವ ಮೂಲಕ ಸಮಾಜ ತಿದ್ದುವ ಕಾರ್ಯದಲ್ಲಿ ತೊಡಗಿರುವುದು ಮೆಚ್ಚುವಂಥದ್ದೆಂದು ಶ್ರೀಮಠದ ರೂವಾರಿ ಅನ್ನದಾನೇಶ್ವರರನ್ನು ಪ್ರಶಂಸಿದರು.

ಸಾನ್ನಿಧ್ಯ ವಹಿಸಿದ್ದ ಅನ್ನದಾನೇಶ್ವರರು ಮಾತನಾಡಿ, ಸದಾ ರಾಜ್ಯದಲ್ಲಿ ಅಕ್ಷರಸ್ಥರ ಸಂಖ್ಯೆ ಹೆಚ್ಚಾಗಲು ಮಠಗಳು ಕಾರಣ. ಧಾರ್ಮಿಕ ಪ್ರಜ್ಞೆ, ಅನ್ನದಾಸೋಹ, ವಸತಿ ವ್ಯವಸ್ಥೆ ಕಲ್ಪಿಸುವದೇ ಬಂಡಿಗಣಿ ಮಠದ ಪರಂಪರೆಯಾಗಿದೆ. ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಜನ ಕಲ್ಯಾಣಕ್ಕಾಗಿ ಮಠ ಮಾನ್ಯಗಳ ಕಾರ್ಯ ದೊಡ್ಡದಾಗಿದೆ. ಮಠಗಳು ಬೆಳೆದರೆ ಸಮಾಜದ ಶ್ರೇಯೋಭಿವೃದ್ಧಿ ಸಾಧ್ಯವೆಂದು ಶ್ರೀಗಳು ಹೇಳಿದರು.

ಶಾಸಕ ಸಿದ್ದು ಸವದಿ ಮಾತನಾಡಿ, ರಬಕವಿ-ಬನಹಟ್ಟಿ ತಾಲೂಕಿಗೆ ಮಠಗಳ ಇತಿಹಾಸ, ಪರಂಪರೆಯಿದೆ ಎಂದರು. ಧರ್ಮದಿಂದ ಸಾಮಾಜಿಕ ಜಾಗೃತಿ ಮೂಡುತ್ತಿದ್ದು, ಇದು ಹೆಚ್ಚಾಗಿ ಸ್ವಾಮೀಜಿಗಳಿಂದ ಸಾಧ್ಯವಾಗುತ್ತಿದೆ ಎಂದರು. ಇದೇ ಸಂದರ್ಭ ಸವದತ್ತಿ ಶಾಸಕ ವಿಶ್ವಾಸ ವೈದ್ಯ, ತೇರದಾಳ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ, ಸುಶೀಲಕುಮಾರ ಬೆಳಗಲಿ, ಮಲ್ಲಪ್ಪ ಸಿಂಗಾಡಿ, ರಂಗನಗೌಡ ಪಾಟೀಲ, ಸುರೇಶಗೌಡ ಪಾಟೀಲ ಸೇರಿದಂತೆ ಅನೇಕರಿದ್ದರು.