ಉಚಿತ ಶಸ್ತ್ರ ಚಿಕಿತ್ಸೆ ಶಿಬಿರಗಳು ಅರ್ಹರಿಗೆ ತಲುಪಲಿ

| Published : Jun 26 2024, 12:31 AM IST

ಸಾರಾಂಶ

ಬಡವರಿಗೆ, ಅಶಕ್ತರಿಗೆ ವೈದ್ಯಕೀಯ ಸೇವೆ ಸಲ್ಲಿಸುವುದೇ ಆರೋಗ್ಯ ದಾಸೋಹದ ನಿಜವಾದ ಅರ್ಥವಾಗಿದೆ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಮಹಾಸ್ವಾಮೀಜಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಬಡವರಿಗೆ, ಅಶಕ್ತರಿಗೆ ವೈದ್ಯಕೀಯ ಸೇವೆ ಸಲ್ಲಿಸುವುದೇ ಆರೋಗ್ಯ ದಾಸೋಹದ ನಿಜವಾದ ಅರ್ಥವಾಗಿದೆ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಮಹಾಸ್ವಾಮೀಜಿ ತಿಳಿಸಿದರು.

ನಗರದ ಸಿದ್ಧಗಂಗಾ ಆಸ್ಪತ್ರೆ ಹಾಗೂ ಅಸೋಸಿಯೇಶನ್‌ ಆಫ್‌ ಸರ್ಜನ್ಸ್ ಆಫ್ ಇಂಡಿಯಾ ತುಮಕೂರು ಶಾಖೆ ಸಹಯೋಗದಲ್ಲಿ ನಡೆದ ಉಚಿತ ಶಸ್ತ್ರಚಿಕಿತ್ಸೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಉಚಿತ ಶಸ್ತ್ರ ಚಿಕಿತ್ಸೆಯಂತಹ ಶಿಬಿರಗಳು ಅರ್ಹರಿಗೆ ತಲುಪಿ ಅವರ ಜೀವನದಲ್ಲಿ ಬದಲಾವಣೆ ಹಾಗೂ ಭರವಸೆ ಮೂಡುವಂತೆ ಮಾಡಬೇಕು. ವೈದ್ಯರು ದೇವರಾಗುವುದಷ್ಟೇ ಅಲ್ಲ, ರೋಗಿಗಳೂ ಕೂಡ ವೈದ್ಯರಿಗೆ ದೇವರಂತೆ ಕಾಣಬೇಕು ಎಂದರು.

ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್‌ ಮಾತನಾಡಿ, ಉಚಿತ ಚಿಕಿತ್ಸೆ ನೀಡಬೇಕೆನ್ನುವುದು ಸಿದ್ಧಲಿಂಗ ಮಹಾಸ್ವಾಮೀಜಿಯವರ ಪ್ರೇರಣಾಶಕ್ತಿ. ಇದೇ ಡಾ. ಶಿವಕುಮಾರ ಸ್ವಾಮೀಜಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡುತ್ತಿದ್ದು, ಪ್ರತಿವರ್ಷ ವಿಭಾಗವಾರು ಇಂತಹ ಶಸ್ತ್ರಚಿಕಿತ್ಸಾ ಶಿಬಿರಗಳನ್ನು ಆಯೋಜಿಸಿ ಆರೋಗ್ಯ ಕ್ಷೇತ್ರದಲ್ಲಿ ಸೇವೆಗೆ ನಿಜವಾದ ಅರ್ಥ ಕಲ್ಪಿಸುವುದು ನಮ್ಮ ಉದ್ದೇಶವಾಗಿದೆ. ಶ್ರೀದೇವಿ ಹಾಗೂ ಸಿದ್ಧಗಂಗಾ ವೈದ್ಯಕೀಯ ಕಾಲೇಜುಗಳ ಶಸ್ತ್ರಚಿಕಿತ್ಸಕರೂ ಕೂಡ ಬೃಹತ್‌ ಶಿಬಿರದ ಭಾಗವಾಗಿರುವುದು ಸಂತಸ ತಂದಿದೆ ಎಂದರು.

ವೈದ್ಯಕೀಯ ಕಾಲೇಜು ಸರ್ಜರಿ ವಿಭಾಗದ ಮುಖ್ಯಸ್ಥ ಡಾ.ಚಂದ್ರಶೇಖರ್‌ ಮಾತನಾಡಿ, ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದ 25 ಕ್ಕೂ ಹೆಚ್ಚು ರೋಗಿಗಳಿಗೆ ಔಷಧಿಗಳನ್ನೂ ಒಳಗೊಂಡು ಇಂದು ಉಚಿತ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದು, ಅಸೋಸಿಯೇಷನ್‌ ಆಫ್‌ ಸರ್ಜನ್ಸ್‌ ಸಂಸ್ಥೆಯ ಸಹಕಾರ ಮುಖ್ಯವಾಗಿದೆ. ಒಟ್ಟು 30 ಕ್ಕೂ ಹೆಚ್ಚು ಶಸ್ತ್ರಚಿಕಿತ್ಸಕರು ಸೇರಿ 100 ಕ್ಕೂ ಹೆಚ್ಚು ವೈದ್ಯಕೀಯ ತಂಡದಿಂದ ಇಡೀ ದಿನ ಶಸ್ತ್ರಚಿಕಿತ್ಸೆಗಳು ನಡೆಯಲಿದೆ ಎಂದರು.

ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಶಾಲಿನಿ, ವೈದ್ಯಕೀಯ ಅಧೀಕ್ಷಕ ಡಾ.ನಿರಂಜನಮೂರ್ತಿ, ಎಎಸ್‌ಐ ತುಮಕೂರು ಶಾಖೆಯ ಅಧ್ಯಕ್ಷ ಡಾ.ಪ್ರಶಾಂತ್‌, ಕಾರ್ಯದರ್ಶಿ ಡಾ.ಚೇತನ್‌, ಡಾ.ಸಿ.ವಿ.ಸ್ವಾಮಿ, ಡಾ.ಭೂಷಣ್‌, ಡಾ.ಗುರುಕಿರಣ್‌, ಸಿಇಓ ಡಾ.ಸಂಜೀವಕುಮಾರ್‌ ಹಾಗೂ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಮಗುವಿನ ಆರೋಗ್ಯ ವಿಚಾರಿಸಿದ ಶ್ರೀಗಳು: ಉಚಿತ ಶಸ್ತ್ರಚಿಕಿತ್ಸೆಗೆ ದಾಖಲಾದ ರೋಗಿಗಳಲ್ಲಿ ಐದು ವರ್ಷದ ಬಾಲಕ ಕೂಡ ಇರುವುದನ್ನ ತಿಳಿದ ಸಿದ್ಧಲಿಂಗ ಶ್ರೀಗಳು ಖುದ್ದಾಗಿ ವಾರ್ಡ್‌ಗೆ ತೆರಳಿ ಮಗುವಿನ ಕಾಳಜಿ ಮಾಡಿದರು. ಚಿಕ್ಕವಯಸ್ಸಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವುದನ್ನು ಕಂಡು ಮರುಗಿದರು. ಸುರಕ್ಷಿತವಾಗಿ ಶಸ್ತ್ರಚಿಕಿತ್ಸೆ ನಡೆಸಿ ವರದಿ ನೀಡಲು ವೈದ್ಯರಿಗೆ ಸೂಚಿಸಿ, ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವ ಇತರೆ ರೋಗಿಗಳನ್ನು ಭೇಟಿ ಮಾಡಿ ವೈದ್ಯರಿಂದ ಮಾಹಿತಿ ಪಡೆದರು.