ಸಾರಾಂಶ
ವಿಕಲಚೇತನರು ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟುಕೊಂಡಾಗ ಮಾತ್ರ ದಿಟ್ಟ ಹೆಜ್ಜೆಗಳನ್ನಿಡಲು ಸಾಧ್ಯವಾಗಲಿದೆ ಎಂದು ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಹೇಳಿದರು. ನಗರದ ತರಾಸು ರಂಗಮಂದಿರದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘ ಸಂಸ್ಥೆಗಳು, ಗ್ರಾಮೀಣ ಪುನರ್ವಸತಿ ಯೋಜನೆಯ ಕಾರ್ಯಕರ್ತರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವ ವಿಕಲಚೇತನರ ದಿನಾಚರಣೆಯಲ್ಲಿ ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಸಲಹೆ
ಕನ್ನಡಪ್ರಭ ವಾರ್ತೆ ಚಿತ್ರದುರ್ಗವಿಕಲಚೇತನರು ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟುಕೊಂಡಾಗ ಮಾತ್ರ ದಿಟ್ಟ ಹೆಜ್ಜೆಗಳನ್ನಿಡಲು ಸಾಧ್ಯವಾಗಲಿದೆ ಎಂದು ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಹೇಳಿದರು. ನಗರದ ತರಾಸು ರಂಗಮಂದಿರದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘ ಸಂಸ್ಥೆಗಳು, ಗ್ರಾಮೀಣ ಪುನರ್ವಸತಿ ಯೋಜನೆಯ ಕಾರ್ಯಕರ್ತರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿಕಲಚೇತನರು ತಮ್ಮ ಹಕ್ಕುಗಳು, ಅವಕಾಶಗಳನ್ನು ಅರ್ಥಮಾಡಿಕೊಂಡು, ಬಳಸಿಕೊಂಡು ತಾವು ಸಾಮಾನ್ಯರಂತೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ವಿಕಲಚೇತನರ ದಿನ ಆಚರಣೆ ಮಾಡಲಾಗುತ್ತಿದೆ. ತಮ್ಮ ಸಾಮರ್ಥ್ಯಕ್ಕನುಗುಣವಾಗಿ ಪ್ರಯತ್ನ ಮಾಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಸಲಹೆ ನೀಡಿದರು . ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಎಂ.ವಿ.ವೀಣಾ ಮಾತನಾಡಿ, 2011ರ ಜನಗಣತಿ ಪ್ರಕಾರ ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 35,971 ಜನ ವಿಕಲಚೇತನರು ಇದ್ದಾರೆ. ಸಾಮಾನ್ಯರಂತೆ ಜೀವಿಸಲು ಅಡೆತಡೆರಹಿತ ಸೌಲಭ್ಯ, ನೆರವು ನೀಡುವುದು ಸರ್ಕಾರದ ಹಾಗೂ ಸಮುದಾಯದ ಜವಾಬ್ದಾರಿ ಎಂದರು.ವಿಕಲಚೇತನರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಸೌಲಭ್ಯಗಳನ್ನು ಒದಗಿಸಿ ಎಲ್ಲಾ ವಿಕಲಚೇತನರು ಮುಖ್ಯವಾಹಿನಿಗೆ ಬರುವಲ್ಲಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ವಿಕಲಚೇತನರಿಗೆ ಮಾಸಿಕ ನಿರ್ವಾಹಣಾ ಭತ್ಯೆ, ವಿಕಲಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಸಾಧನ ಸಲಕರಣೆ ಯೋಜನೆ, ಆಧಾರ ಯೋಜನೆ, ವಿಕಲಚೇತನ ವ್ಯಕ್ತಿಯನ್ನು ಸಾಮಾನ್ಯ ವ್ಯಕ್ತಿ ವಿವಾಹವಾದಲ್ಲಿ ಪ್ರೋತ್ಸಾಹಧನ , ಉನ್ನತ ಶಿಕ್ಷಣ ಪಡೆಯುವ ವಿಕಲಚೇತನರಿಗೆ ಶುಲ್ಕ ಮರುಪಾವತಿ, ಅಂಧ ಮಹಿಳೆಯರಿಗೆ ಜನಿಸುವ ಮಕ್ಕಳಿಗೆ ಶಿಶುಪಾಲನಾ ಭತ್ಯೆ ಸೇರಿದಂತೆ ಇನ್ನೂ ಹಲವಾರು ಯೋಜನೆ ಚಾಲ್ತಿಯಲ್ಲಿವೆ ಎಂದರು ಇದೇ ಸಂದರ್ಭದಲ್ಲಿ 2022-23ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದ ವಿಕಲಚೇತನ ವಿದ್ಯಾರ್ಥಿಗಳಾದ ಮೊಳಕಾಲ್ಮೂರು ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಎಂ.ಕುಮಾರಸ್ವಾಮಿ, ಹೊಳಲ್ಕೆರೆ ತಾಲೂಕಿನ ಶ್ರೀ ಮಂಜುನಾಥ ಪ್ರೌಢಶಾಲೆಯ ಆರ್ ಜೀವಿತ, ಚಿತ್ರದುರ್ಗ ತಾಲೂಕಿನ ಸಿರಿಗೆರೆ ಬಿಎಲ್‍ಆರ್ ಜೂನಿಯರ್ ಕಾಲೇಜಿನ ಬಿ.ಎಸ್.ವರ್ಷಿಣಿ, ಚಳ್ಳಕೆರೆ ತಾಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಆರ್.ನೀಲಾವತಿ, ಹೊಸದುರ್ಗ ತಾಲೂಕಿನ ದಶರಥ ರಾಮೇಶ್ವರ ಪ್ರೌಢಶಾಲೆಯ ಜ್ಯೋತಿ, ಹಿರಿಯೂರು ತಾಲೂಕಿನ ಜಿ.ಜೆ.ಸಿ ಯರಬಳ್ಳಿ ಶಾಲೆಯ ಆರ್.ವೃಂದರಾಜ್ ಅವರನ್ನು ಸನ್ಮಾನಿಸಲಾಯಿತು.ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ಆಯೋಜಿಸಲಾಗಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿಕಲಚೇತನರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್, ನಿರೂಪಣಾಧಿಕಾರಿ ವಿಜಯಕುಮಾರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಧಾ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾ ಮಂಜುಳಾ, ಮಾರುತಿ, ಜಿಲ್ಲಾ ಅಂಗವಿಕಲರ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶ್ರೀನಿವಾಸ್, ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಜಯಣ್ಣ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ವಿಕಲಚೇತನರು ಇದ್ದರು.