ಸರ್ಕಾರ ಗ್ರಾಪಂ ನೌಕರರ ಬೇಡಿಕೆ ಈಡೇರಿಸಲಿ: ಕೊಟ್ರೇಶ್‌

| Published : Oct 11 2024, 11:45 PM IST

ಸಾರಾಂಶ

ಗ್ರಾಮೀಣ ಭಾಗವನ್ನು ಅಭಿವೃದ್ಧಿಪಡಿಸುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿಗೆ ಸೂಕ್ತ ಭದ್ರತೆ ಒದಗಿಸಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೂಡಲೇ ಗ್ರಾಪಂ ಸಿಬ್ಬಂದಿ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕಿಚಿಡಿ ಕೊಟ್ರೇಶ್ ಒತ್ತಾಯಿಸಿದ್ದಾರೆ.

ಹೊಸಪೇಟೆ: ಗ್ರಾಮೀಣ ಭಾಗವನ್ನು ಅಭಿವೃದ್ಧಿಪಡಿಸುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿಗೆ ಸೂಕ್ತ ಭದ್ರತೆ ಒದಗಿಸಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೂಡಲೇ ಗ್ರಾಪಂ ಸಿಬ್ಬಂದಿ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕಿಚಿಡಿ ಕೊಟ್ರೇಶ್ ಒತ್ತಾಯಿಸಿದರು.

ವಿಜಯನಗರ ಜಿಲ್ಲಾಧಿಕಾರಿ ಕಚೇರಿ ಎದುರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ನಾಲ್ಕು ದಿನಗಳಿಂದ ಗ್ರಾಪಂ ಅಧಿಕಾರಿಗಳು, ನೌಕರರು ಮತ್ತು ಸದಸ್ಯರು ಆರಂಭಿಸಿರುವ ಅನಿರ್ದಿಷ್ಟಾವಧಿ ಮುಷ್ಕರ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಬೆಂಬಲ ಸೂಚಿಸಿ ಮಾತನಾಡಿದರು.

ವಿಜಯನಗರ ಜಿಲ್ಲೆಯಾದ್ಯಂತ ಸದ್ಯ ಮಳೆಯಾಗುತ್ತಿದ್ದು, ಚರಂಡಿ ಹಾಗೂ ರಸ್ತೆಗಳು ತುಂಬಿ ಹರಿಯುತ್ತಿವೆ. ಇದರಿಂದ ಗ್ರಾಮೀಣ ಭಾಗದಲ್ಲಿ ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಸಾರ್ವಜನಿಕರು ಇದ್ದಾರೆ. ಅಲ್ಲದೆ ಗ್ರಾಮೀಣ ಭಾಗದಲ್ಲಿ ಮನೆ ಮಾಲೀಕರಿಗೆ ನೀಡುವ 9 ಹಾಗೂ 11 ಫಾರಂಗಳನ್ನು ನೀಡುವುದು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಇದರಿಂದ ಸರ್ಕಾರಕ್ಕೆ ದಿನಕ್ಕೆ ₹80 ಕೋಟಿ ನಷ್ಟವಾಗುತ್ತಿದೆ. ಇಷ್ಟದಲ್ಲದೆ ದೈನಂದಿನ ಕಾರ್ಯ ಚಟುವಟಿಕೆಯಿಂದ ಸರ್ಕಾರದ ಕೋಟ್ಯಂತರ ರು. ಬರುತ್ತಿದ್ದ ಆದಾಯಕ್ಕೂ ಪೆಟ್ಟು ಬಿದ್ದಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಎಲ್ಲರೂ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಭಾಗಿಯಾಗಿದ್ದು, ಗ್ರಾಮೀಣ ಭಾಗದ ಸಾರ್ವಜನಿಕರು ಮೂಲಭೂತ ಸೌಕರ್ಯಗಳಿಗೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರು ಲೋಕದ ಎಲ್ಲ ಜ್ಞಾನದ ಬಗ್ಗೆ ಮಾತನಾಡುತ್ತಾರೆ, ಆದರೆ ತಮ್ಮದೆ ಇಲಾಖೆಯ ಸಿಬ್ಬಂದಿ ಬೇಡಿಕೆ ಆಲಿಸುವಲ್ಲಿ ವಿಫಲರಾಗಿದ್ದಾರೆ. ಅಲ್ಲದೇ ರಾಜ್ಯದ ಬಹುತೇಕ ಗ್ರಾಮ ಪಂಚಾಯಿತಿಗಳ ಆಡಳಿತ ಸ್ತಬ್ಧವಾಗಿದ್ದು, ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾದರೂ ಸಚಿವರಾಗಲಿ, ಸರ್ಕಾರವಾಗಲಿ, ಸಮಸ್ಯೆ ಆಲಿಸಲುವಲ್ಲಿ ವಿಫಲವಾಗಿದೆ. ಈ ಕೂಡಲೇ ರಾಜ್ಯ ಸರ್ಕಾರ ಧರಣಿ ನಿರತರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ನಗರಘಟಕ ಅಧ್ಯಕ್ಷ ರೇವಣಸಿದ್ದಪ್ಪ, ಬಿಜೆಪಿ ವಾಣಿಜ್ಯ ಪ್ರಕೋಷ್ಟ ಸಂಚಾಲಕ ಅಶ್ವಿನ್ ಕೊತ್ತಂಬರಿ, ಬಿಜೆಪಿ ಹಿರಿಯ ಮುಖಂಡ ಗೊಗ್ಗ ಚನ್ನಬಸವರಾಜಯ್ಯ, ನೀಲಕಂಠ ಗೌಡ ಇತರರಿದ್ದರು.