ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಕ್ರಮ ಕೈಗೊಳ್ಳಲಿ

| Published : Mar 04 2024, 01:19 AM IST

ಸಾರಾಂಶ

ಖಾಸಗಿ ಶಾಲೆಗಳ ಹಾವಳಿ ಒಂದೆಡೆಯಾದರೆ, ಸರ್ಕಾರಿ ಶಾಲೆಗಳಿಗೆ ಉತ್ತಮ ಶಿಕ್ಷಕರನ್ನು ನೇಮಕ ಮಾಡುತ್ತಿಲ್ಲ ಎಂದು ಸಾಹಿತಿ ಡಾ. ಬಿ.ವಿ. ಶಿರೂರ ಹೇಳಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಖಾಸಗಿ ಆಂಗ್ಲಮಾಧ್ಯಮ ಶಾಲೆಗಳ ಹಾವಳಿಯಲ್ಲಿ ಇಂದು ಸರ್ಕಾರಿ ಶಾಲೆಗಳು ದುಸ್ಥಿತಿಯಲ್ಲಿವೆ. ಇನ್ನು ಮುಂದಾದರೂ ಸರ್ಕಾರಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಸಾಹಿತಿ ಡಾ. ಬಿ.ವಿ. ಶಿರೂರ ಹೇಳಿದರು.

ಹುಬ್ಬಳ್ಳಿ ಶಹರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಿದ್ದ 9ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಖಾಸಗಿ ಶಾಲೆಗಳ ಹಾವಳಿ ಒಂದೆಡೆಯಾದರೆ, ಸರ್ಕಾರಿ ಶಾಲೆಗಳಿಗೆ ಉತ್ತಮ ಶಿಕ್ಷಕರನ್ನು ನೇಮಕ ಮಾಡುತ್ತಿಲ್ಲ. ಇದರಿಂದ ಕನ್ನಡ ಉಳಿಸಿ, ಬೆಳೆಸಬೇಕೆಂಬ ಕೂಗು ಹಾಗೆಯೇ ಮುಂದುವರಿಯಲಿದೆ. ಜಿಲ್ಲೆಗೊಂದು ವಿವಿ ಸ್ಥಾಪಿಸುವ ಚಿಂತನೆ ನಡೆದಿದೆ. ಇದಕ್ಕೆ ಅನುದಾನ ಕೊಡಬೇಕು. ಅನುದಾನ ಇಲ್ಲದೆ ವಿವಿಗಳ ಸ್ಥಾಪನೆ ಅಗತ್ಯವೇ ಎಂದು ಪ್ರಶ್ನಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಸಂಸದ ಪ್ರೊ. ಐ.ಜಿ. ಸನದಿ ಮಾತನಾಡಿ, ನಾವೆಲ್ಲರೂ ಮನೆಯಲ್ಲಿ ಕನ್ನಡ ಮಾತನಾಡಬೇಕು. ಅದರಿಂದ ನಮ್ಮ ಮಕ್ಕಳು ಕನ್ನಡ ಕಲಿಯುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನರ ಹೊಟ್ಟೆ ತುಂಬಲೆಂದು ಗ್ಯಾರಂಟಿ ಯೋಜನೆ ನೀಡಿದ್ದಾರೆ. ಅದೇ ರೀತಿ ನೆತ್ತಿ ತುಂಬುವ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆ ಘೋಷಿಸಬೇಕೆಂದು ಸಿದ್ದರಾಮಯ್ಯ ಅವರ ಬಳಿ ಕೋರುತ್ತೇನೆ ಎಂದರು.

ವಾಕರಸಾ ಸಂಸ್ಥೆ ಮಾಜಿ ಅಧ್ಯಕ್ಷ ಸದಾನಂದ ಡಂಗನವರ ಮಾತನಾಡಿ, ಕನ್ನಡ ಕಟ್ಟಿ, ಬೆಳೆಸಲು ಯುವಕರನ್ನು ಬಳಸಿಕೊಳ್ಳಬೇಕು ಎಂದರು. ಇದೇ ವೇಳೆ ದತ್ತಿ ದಾನಿಗಳನ್ನು ಸನ್ಮಾನಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ನನ್ನ ಕನಸಿನ ಹುಬ್ಬಳ್ಳಿ:

ಸಾಹಿತ್ಯ ಸಮ್ಮೇಳನದ ಉದ್ಘಾಟನೆಯ ನಂತರ ಹಿರಿಯ ಪತ್ರಕರ್ತ ಮೋಹನ ಹೆಗಡೆ ಅಧ್ಯಕ್ಷತೆಯಲ್ಲಿ ನನ್ನ ಕನಸಿನ ಹುಬ್ಬಳ್ಳಿ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು. ಹುಬ್ಬಳ್ಳಿ ಕಾನೂನು ವಿವಿಯ ಸಿಂಡಿಕೇಟ್‌ ಸದಸ್ಯ ಡಾ. ಎಚ್‌.ವಿ. ಬೆಳಗಲಿ ಅವರು "ನನ್ನ ಕನಸಿನ ಹುಬ್ಬಳ್ಳಿ: ಅಂದು, ಇಂದು " ಕುರಿತು ವಿಶೇಷ ಉಪನ್ಯಾಸ ನೀಡಿದರು. ಕನ್ನಡ ಉಪನ್ಯಾಸಕಿ ಡಾ. ಸರ್ವಮಂಗಳಾ ಆಚಾರ್ಯ ಅವರು "ಹುಬ್ಬಳ್ಳಿ: ಮಹಿಳಾ ಸಾಹಿತಿಗಳು " ಕುರಿತು ವಿಶೇಷ ಉಪನ್ಯಾಸ ನೀಡಿದರು. ಈ ವೇಳೆ ಡಾ. ಶಾಂತಣ್ಣ ಕಡಿವಾಳ, ಪ್ರೊ. ಸಂದೀಪ ಬೂದಿಹಾಳ ಸೇರಿದಂತೆ ಹಲವರಿದ್ದರು. ನಂತರ ಹಲವು ಯುವ ಸಾಹಿತಿಗಳಿಂದ ಕವಿಗೋಷ್ಠಿ, ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಕಾರ್ಯಕ್ರಮ ನೆರವೇರಿತು.ಎರಡು ನಿರ್ಣಯಗಳ ಮಂಡನೆ

1. ಧಾರವಾಡ ರಂಗಾಯಣ ಸಭಾಗೃಹ ಮಾದರಿಯಲ್ಲಿ ಹುಬ್ಬಳ್ಳಿಯಲ್ಲಿ ರಂಗ ಮಂದಿರ 100 ಆಸನಗಳ ಚಿಕ್ಕ-ಚೊಕ್ಕ ಸಭಾಂಗಣ ನಿರ್ಮಿಸಬೇಕು. ಧಾರವಾಡದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಡಿ ಅದರ ನಿರ್ವಹಣೆ ಮಾಡಬೇಕು.

2. ಹು-ಧಾ ಮಹಾನಗರ ಪಾಲಿಕೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕ್ರಮ ಆಯೋಜಿಸಲು ಉಚಿತವಾಗಿ ಸೂಕ್ತ ಸಭಾಂಗಣ ಒದಗಿಸಬೇಕು.