ಸರ್ಕಾರ ರೈತರ ಕೃಷಿ ಸಾಲ ಮನ್ನಾ ಮಾಡಲಿ

| Published : May 31 2024, 02:15 AM IST

ಸಾರಾಂಶ

ಚುನಾವಣೆ ನೀತಿ ಸಂಹಿತೆ ಮುಗಿದ ತಕ್ಷಣ ರೈತರ ಸಾಲ ಮನ್ನಾ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು

ನರಗುಂದ: ಭೀಕರ ಬರಗಾಲದಿಂದ ರಾಜ್ಯದ ರೈತ ಸಮುದಾಯ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ರೈತರು ಕೃಷಿಗಾಗಿ ಪಡೆದ ಸಾಲ ಮನ್ನಾ ಮಾಡಬೇಕೆಂದು ರಾಜ್ಯ ರೈತ ಸಂಘಟನೆ ಅಧ್ಯಕ್ಷ ವಿರೇಶ ಸೊಬರದಮಠ ಆಗ್ರಹಿಸಿದರು.

ಅವರು 3220 ನೇ ದಿನದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆಯ ನಿರಂತರ ಹೋರಾಟ ವೇದಿಕೆಯಲ್ಲಿ ಮಾತನಾಡಿ,ರಾಜ್ಯದಲ್ಲಿ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ರೈತರು ಸಹಕಾರಿ ಸಂಘ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಎಕರೆಗೆ 20ರಿಂದ 30 ಸಾವಿರ ಖರ್ಚು ಮಾಡಿ ಬಿತ್ತನೆ ಮಾಡಿದ್ದರು. ಆದರೆ ಸಮಯಕ್ಕೆ ಸರಿಯಾಗಿ ಮಳೆಯಾಗದ ಕಾರಣ ಬಿತ್ತನೆ ಮಾಡಿದ ಬೆಳೆಗಳು ತೇವಾಂಶ ಕೊರತೆಯಿಂದ ಒಣಗಿ ಹೋಗಿವೆ. ಹೀಗಾಗಿ ರೈತರಿಗೆ ಕೃಷಿಗೆ ಪಡೆದ ಸಾಲ ತುಂಬಲು ಆಗುತ್ತಿಲ್ಲ. ಮೇಲಾಗಿ ಬ್ಯಾಂಕ್‌ನವರು ಕೃಷಿ ಸಾಲ ತುಂಬುವಂತೆ ರೈತರಿಗೆ ನೋಟಿಸ್‌ ನೀಡುತ್ತಿದ್ದಾರೆ. ಹೀಗಾಗಿ ಚುನಾವಣೆ ನೀತಿ ಸಂಹಿತೆ ಮುಗಿದ ತಕ್ಷಣ ರೈತರ ಸಾಲ ಮನ್ನಾ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಹಿಂದಿನ ವರ್ಷ ಮಳೆಯಾಗದೆ ಬಿತ್ತನೆ ಮಾಡಿಕೊಂಡು ಬೆಳೆ ಹಾನಿ ಮಾಡಿಕೊಂಡ ರಾಜ್ಯ ರೈತರಿಗೆ ಬಹಳ ದಿನಗಳ ನಂತರ ಬೆಳೆ ಹಾನಿಯನ್ನು ಸರ್ಕಾರ ಬಿಡುಗಡೆ ಮಾಡಿದೆ, ಆದರೆ ಈ ಬೆಳೆ ಹಾನಿ ವಿತರಣೆಯಲ್ಲಿ ತಾರತ್ಯಮವಾಗಿದೆ. ಸರ್ಕಾರ ಈ ತಾರತ್ಯಮ ಸರಿಪಡಿಸಿ ಎಲ್ಲ ರೈತರಿಗೆ ಬೆಳೆ ಹಾನಿ ತಲುಪಿಸಬೇಕು ಎಂದರು.

ಈ ಸಂದರ್ಭದಲ್ಲಿ ವೀರಬಸಪ್ಪ ಹೂಗಾರ, ಪರಶುರಾಮ ಜಂಬಗಿ, ಎಸ್.ಬಿ. ಜೋಗಣ್ಣವರ, ಸುಭಾಸ ಗಿರಿಯಣ್ಣವರ, ಸಿ.ಎಸ್. ಪಾಟೀಲ, ಹನಮಂತ ಸರನಾಯ್ಕರ, ಸೋಮಲಿಂಗಪ್ಪ ಆಯಿಟ್ಟಿ, ಮಲ್ಲೇಶಪ್ಪ ಅಣ್ಣಿಗೇರಿ, ಶಿವರಪ್ಪ ಸಾತಣ್ಣವರ, ಶಂಕ್ರಪ್ಪ ಜಾಧವ, ಅನಸವ್ವ ಶಿಂದೆ, ನಾಗರತ್ನ ಸವಳಭಾವಿ, ವಾಸು ಚವ್ಹಾಣ, ಯಲ್ಲಪ್ಪ ಚಲವಣ್ಣವರ, ವಿಜಯಕುಮಾರ ಹೂಗಾರ ಸೇರಿದಂತೆ ಮುಂತಾದವರು ಇದ್ದರು.