ಸಾರಾಂಶ
ಹೊಸಪೇಟೆ: ಹಿರಿಯ ನಾಗರಿಕರು ಅಪಾರ ಅನುಭವ ಹೊಂದಿದ ಜ್ಞಾನ ಭಂಡಾರ ಇದ್ದಂತೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಅಬ್ದುಲ್ ರಹಿಮಾನ್ ಎ.ನಂದಗಡಿ ಹೇಳಿದರು.
ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿನ ನಗರಸಭೆಯಲ್ಲಿ ನಡೆದ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಭಾರತ ದೇಶ ಸಂಸ್ಕೃತಿಯ ತವರೂರಾಗಿದೆ. ಭಾರತದ ನಾಗರಿಕರು ಹಿರಿಯರಿಗೆ ದೇವರ ಸ್ಥಾನವನ್ನು ನೀಡಿ ಗೌರವಿಸುತ್ತಾರೆ. ಹಿರಿಯ ನಾಗರಿಕರು ತಮ್ಮ ಅನುಭವಗಳನ್ನು ಯುವ ಜನತೆಗೆ ಧಾರೆ ಎರೆದು, ಯುವ ಜನೆತೆಯ ಯಶಸ್ಸಿಗೆ ಪಾತ್ರರಾಗುತ್ತಿದ್ದಾರೆ. ಈಗಿನ ದಿನಗಳಲ್ಲಿ ಯುವಕರಿಗೆ ಉತ್ಸಾಹ ಕಡಿಮೆಯಾಗುತ್ತಿದೆ. ಹಿರಿಯರು ಪಾಲಿಸುತ್ತಿದ್ದ ಜೀವನ ಶೈಲಿಯನ್ನು ಯುವಕರು ಅಳವಡಿಸಿಕೊಂಡರೆ ಯಶಸ್ಸು ಖಂಡಿತ ದೊರೆಯಲಿದೆ ಎಂದರು.
ಹಿರಿಯ ನಾಗರಿಕರಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ಅವುಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು ಎಂದರು.ನಗರಸಭೆ ಪೌರಾಯುಕ್ತ ಚಂದ್ರಪ್ಪ ಮಾತನಾಡಿ, ಹಿರಿಯ ನಾಗರಿಕರು ತಮ್ಮ ಜೀವದಲ್ಲಿ ಮಾಡಿದ ಸಾಧನೆ, ಜೀವನದ ಹಾದಿ ಹೇಗಿರುತ್ತದೆ ಎಂಬುದರ ಬಗ್ಗೆ ಯುವ ಜನತೆಗೆ, ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಪ್ರಶಾಂತ್ ನಾಗಲಾಪುರ್ ಮಾತನಾಡಿ, ಭಾರತ ಸರ್ಕಾರವು 2007ರಲ್ಲಿ ತಂದೆ, ತಾಯಿಯರ ಹಾಗೂ ಹಿರಿಯರ ಪಾಲನೆ, ಪೋಷಣೆ ಮತ್ತು ಕಲ್ಯಾಣ ಅಧಿನಿಯಮ 2007ರ ಕಾಯ್ದೆಯನ್ನು ಜಾರಿ ಮಾಡಿದೆ. ಹಿರಿಯರಿಗೆ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ವಿಫಲವಾದರೆ ಈ ಅಧಿನಿಯದಡಿ ದೂರು ದಾಖಲಿಸಬಹುದು ಎಂದು ತಿಳಿಸಿದರು.ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷೆ ಹೇಮಲತಾ ಬಿ. ಹುಲ್ಲೂರ, ಅಪರ ಹಿರಿಯ ಸಿವಿಲ್ ನ್ಯಾಯಾಧೀಶ ರಮೇಶ್ ಬಾಬು ಬಿ.ಎನ್., ಅಪರ ಸಿವಿಲ್ ನ್ಯಾಯಾಧೀಶ ಅಶೋಕ ಆರ್.ಎಚ್., ಗೌರವಾನ್ವಿತ 2ನೇ ಅಪರ ಸಿವಿಲ್ ನ್ಯಾಯಾಧೀಶರಾದ ಸಂಜಿವ್ ಕುಮಾರ ಜಿ., 3ನೇ ಅಪರ ಸಿವಿಲ್ ನ್ಯಾಯಾಧೀಶೆ ಚೈತ್ರ ಜೆ., ವಕೀಲರ ಸಂಘದ ಅಧ್ಯಕ್ಷ ಕೆ.ಪ್ರಹ್ಲಾದ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಶ್ರೀನಿವಾಸಮೂರ್ತಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ.ದೊಡ್ಡಮನಿ ಎಂ.ಪಿ, ತಾಲೂಕು ಆರೋಗ್ಯಾಧಿಕಾರಿ ಡಾ.ಭಾಸ್ಕರ್, ನಗರಸಭೆ ಮಾಜಿ ಉಪಾಧ್ಯಕ್ಷ ಎಲ್.ಎಸ್.ಆನಂದ, ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ.ರಾಮಪ್ಪ, ನಿವೃತ್ತ ನೌಕರರ ಸಂಘದ ತಾಲೂಕಾಧ್ಯಕ್ಷ ರಾಜಶೇಖರ ಪಾಟೀಲ್, ಪಟ್ಟಣ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕ ಲಕನ್ ಆರ್.ಮಸುಗುಪ್ಪಿ ಮತ್ತಿತರರಿದ್ದರು.
;Resize=(128,128))
;Resize=(128,128))