ಸ್ವಾಮಿ ವಿವೇಕಾನಂದ ಜಯಂತಿ ಮತ್ತು ರಾಷ್ಟ್ರೀಯ ಯುವ ದಿನ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಮಧುಗಿರಿ
ಯುವ ಶಕ್ತಿ ದೇಶದ ತಳಪಾಯ, ಅವರ ವಿದ್ಯಾಭ್ಯಾಸ ಕೇವಲ ಅಕ್ಷರ ಅಂಕಿ ಲೆಕ್ಕಚಾರಗಳ ವಿಚಾರವಲ್ಲ, ಕಲಿತದ್ದು ಅರಿವಾಗಿ ಅಂತಕರಣ ಅರಳಿಸಿ ಸಹಬಾಳ್ವೆ ನಡೆಸುವುದಾಗಿದೆ ಎಂದು ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ಅಭಿಪ್ರಾಯಪಟ್ಟರು.ಪಟ್ಟಣದ ಸಹೃದಯ ಬಳಗ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿ ಮತ್ತು ರಾಷ್ಟ್ರೀಯ ಯುವ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಎಲ್ಲರೊಂದಿಗೆ ಅರಿತು ಬೆರೆತು ಸಹಬಾಳ್ವೆ ಸೋದರತ್ವ ನಡೆಸಿದಾಗ ಮಾತ್ರ ಶಾಂತಿ ಸಮಾಧಾನ ,ನೆಮ್ಮದಿ ಹೊಂದಲು ಸಾಧ್ಯ. ಸರ್ವ ಧರ್ಮ ಸಮಾನತೆ ದೀನದಲಿತರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಉದಾರತೆ ಜಾತಿ ಮತಗಳಿಗೆ ಗೋಡೆಗಳಿಲ್ಲದ ವಿಶ್ವ ಮಾನವ ಪ್ರಜ್ಞೆ ಬೆಳಸಿಕೊಳ್ಳುವುದು. ಮಾನವೀಯತೆ ತೋರುವುದು ಎಲ್ಲರ ಜವಾಬ್ದಾರಿ ಆಗಬೇಕು ಎಂದರು.ದೈಹಿಕ ಶಿಕ್ಷಣ ನಿರ್ದೇಶಕ ಎಂ.ಆರ್.ವೆಂಕಟೇಶ್ ಮೂರ್ತಿ, ಗ್ರಂಥಪಾಲಕ ಜಿ.ಎಸ್.ನಾಗಭೂಷಣ್ ಮಾತನಾಡಿದರು. ದೇಶದ ಪಾವಿತ್ರತೆ ನಾವು ಜಾಗೃರಾಗಿರುವ ತನಕ ಉಳಿಯುತ್ತದೆ. ಇದಕ್ಕೆ ತ್ಯಾಗ ಮತ್ತು ಸೇವೆ ಆದರ್ಶಗಳಾಗಿ ಬಳಕೆಯಾಗಬೇಕು ಎಂದರು.
ಉಪನ್ಯಾಸಕ ಮಂಜುಪ್ರಸಾದ್ ಮಾತನಾಡಿ, ಒಬ್ಬನ ದೇಹ ಮತ್ತು ಮನಸ್ಸು ಪರಿಶುದ್ಧವಾಗಿದ್ದಾಗ ಮಾತ್ರ ಸಾಧನೆಗೆ ಅವಕಾಶವಾಗುತ್ತದೆ. ನಾಳೆ ಭಾರತ ಹೇಗಿರಬೇಕು ಎಂಬುದನ್ನು ಯುವ ಜನಾಂಗ ತೀರ್ಮಾನಿಸಬೇಕು. ಇಂದಿನ ಯುವ ಜನಾಂಗ ನಾಳೆ ಪ್ರಪಂಚದ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಬಳಗದ ಹಲವರು ಇದ್ದರು.