ಸಾರಾಂಶ
ಕಾರವಾರ: ಶಿವಮೊಗ್ಗದಲ್ಲಿ ಬಂಡಾಯವಾಗಿ ಕಣಕ್ಕಿಳಿದಿರುವ ಕೆ.ಎಸ್. ಈಶ್ವರಪ್ಪ, ಅಮಿತ್ ಶಾ ಭೇಟಿಗೆ ದೆಹಲಿಗೆ ತೆರಳಿದ್ದರು. ಆದರೆ ಯಾವ ಕಾರಣಕ್ಕೆ ಭೇಟಿ ಆಗಿಲ್ಲ ಎಂದು ಗೊತ್ತಾಗಿಲ್ಲ. ಹೈಕಮಾಂಡ್ ಈಶ್ವರಪ್ಪ ಹೇಳುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ತಿಳಿಸಿದರು.ಕುಮಟಾದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಪಕ್ಷಕ್ಕೆ ಮುಜುಗರ ಆಗದ ರೀತಿಯಲ್ಲಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕಾಗಿದೆ. ರಾಜ್ಯದಲ್ಲಿ ಎಲ್ಲ 28 ಕ್ಷೇತ್ರಗಳನ್ನು ಗೆಲ್ಲುವುದು ನಮ್ಮ ಗುರಿಯಾಗಿದೆ. ಅಸಮಾಧಾನಿತರಲ್ಲಿ ಮನವಿ ಮಾಡುತ್ತೇನೆ. ವೈಯಕ್ತಿಕ ವಿಚಾರ ಬಿಟ್ಟು ದೇಶ ಹಾಗೂ ಮೋದಿ ಅವರ ಬಗ್ಗೆ ಒಂದಾಗಿ ಕೆಲಸ ಮಾಡೋಣ ಎಂದರು.ಜೂ. 4ರ ತರುವಾಯ ಇಡಿ ದೇಶ ಕುಟುಂಬ ರಾಜಕಾರಣದಿಂದ ಮುಕ್ತವಾಗುತ್ತದೆ. ಈ ಬಗ್ಗೆ ಹೈಕಮಾಂಡ್ ನನಗೆ ಭರವಸೆ ನೀಡಿದೆ ಎಂದರು. ಸುಧಾಕರ್ ಹಿಂದೆ ಸಚಿವರಾಗಿದ್ದಾಗ ಶಾಸಕರಿಗೆ ಸರಿಯಾಗಿ ಸ್ಪಂದಿಸುತ್ತಿರಲಿಲ್ಲ. ಹಲವು ಶಾಸಕರು ಕಣ್ಣೀರು ಹಾಕಿದ್ದಾರೆ. ಪಕ್ಷ ಅಂತಹ ತಪ್ಪಿನಿಂದ ಸೋತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ರಾಜ್ಯದಲ್ಲಿ ಅಪ್ಪ, ಮಕ್ಕಳು, ಮಾವ, ಅಳಿಯ ಇವರೇ ಕಾಂಗ್ರೆಸ್‌ನಲ್ಲಿ ಕ್ಯಾಂಡಿಡೇಟ್ ಆಗಿದ್ದಾರೆ. ಬಿಜೆಪಿಯಲ್ಲೂ ಅದೇ ರೀತಿ ಆಗಿದೆ. ಲೋಕಸಭೆ ಚುನಾವಣೆಗೆ ಯಾವ ಸಚಿವರೂ ಸ್ಪರ್ಧಿಸಲಿಲ್ಲ. ಅವರ ಮಕ್ಕಳನ್ನು ನಿಲ್ಲಿಸಿದ್ದಾರೆ. ಸೋತರೆ ಸಚಿವ ಸ್ಥಾನ ಹೋಗಬಹುದು ಎಂದೆ ಸ್ಪರ್ಧಿಸಿಲ್ಲ ಎಂದರು. ರಾಜ್ಯದಲ್ಲಿ ಹಿಂದು ಕಾರ್ಯಕರ್ತರ ಹತ್ಯೆಯಾದಾಗ ಸರ್ಕಾರ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕಾಗಿತ್ತು ಎಂದು ಯತ್ನಾಳ ಹೇಳಿದರು.
ಹೆಬ್ಬಾರ್ ಬಿಜೆಪಿ ಪರವಾಗಿ ಬಂದರೆ ಅವರ ಗೌರವ ಹೆಚ್ಚುತ್ತದೆಕಾರವಾರ: ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಗೊಂದಲದಲ್ಲಿದ್ದಾರೆ. ಅವರು ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ. ಬಿಜೆಪಿ ಪರವಾಗಿ ಕೆಲಸ ಮಾಡಬೇಕು ಎಂದು ಬಿಜೆಪಿ ಮುಖಂಡ ಬಸನಗೌಡ ಪಾಟೀಲ ಯತ್ನಾಳ್ ತಿಳಿಸಿದರು.ಕುಮಟಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶಿವರಾಮ ಹೆಬ್ಬಾರ್ ಅವರು ಬಿಜೆಪಿಯಿಂದ ಗೆದ್ದು ಮಂತ್ರಿಯಾಗಿದ್ದರು. ಎಲ್ಲ ಅನುಕೂಲ ಆಗಿದೆ. ಅವರು ಬಿಜೆಪಿ ಪರವಾಗಿ ಬಂದರೆ ಅವರ ಗೌರವ ಹೆಚ್ಚುತ್ತದೆ. ಇಡೀ ದೇಶ ಮೋದಿ ಅವರನ್ನು ಪ್ರಧಾನಿಯನ್ನಾಗಿಸಬೇಕು ಎಂದು ಬಯಸುತ್ತಿದೆ. ಮೋದಿ ಹಾಗೂ ಬಿಜೆಪಿಯ ಬಗ್ಗೆ ನಾವು ತಪ್ಪಾಗಿ ಮಾತನಾಡಿದರೆ ಮತದಾರರು ಸುಮ್ಮನಿರಲ್ಲ ಎಂದು ಯತ್ನಾಳ್ ಹೇಳಿದರು.ಅನಂತಕುಮಾರ ಹೆಗಡೆ ಅವರ ಕುರಿತಾದ ಪ್ರಶ್ನೆಗೆ, ಅವರ ಆತ್ಮ ಬಿಜೆಪಿಯಲ್ಲಿದೆ. ಅವರ ಮತ ಬಿಜೆಪಿಗೆ ಬರಲಿದೆ. ಈಗ ಮಾತನಾಡೋಣ ಎಂದರೆ ನನ್ನ ಫೋನ್ ಕೂಡ ಸ್ವೀಕರಿಸುತ್ತಿಲ್ಲ. ಹಂತ- ಹಂತವಾಗಿ ಎಲ್ಲವೂ ಸರಿಯಾಗಲಿದೆ. ಮುಂದೆ ಅವರಿಗೂ ಒಳ್ಳೆಯ ದಿನಗಳ ಬರಲಿವೆ. ಹಿಂದುತ್ವದ ನಾಯಕರನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.