ಭಾರತೀಯ ಧರ್ಮ ಶ್ರೇಷ್ಠ ಧರ್ಮವಾಗಿದೆ. ಹಿಂದೂ ಧರ್ಮ ಶ್ರೇಷ್ಠತೆಯನ್ನು ಅಳವಡಿಸಿಕೊಳ್ಳಬೇಕು. ಹಿಂದೂ ಸಮಾಜವನ್ನು ಕಟ್ಟುವುದು ಹೇಗೆ ಎನ್ನುವ ಚಿಂತನೆ ನಡೆಸುವುದು ಅಗತ್ಯವಾಗಿದೆ.

ಲಕ್ಷ್ಮೇಶ್ವರ: ಹಿಂದೂ ಸಮಾಜದ ಗೋಡೆಗಳನ್ನು ಗಟ್ಟಿಯಾಗಿ ಕಟ್ಟುವ ಕಾರ್ಯ ಮಾಡಬೇಕಿದೆ. ಇನ್ನೊಬ್ಬರನ್ನು ಹೀಯಾಳಿಸುವುದು ಬೇಡ. ಬೇರೆ ಧರ್ಮಗಳನ್ನು ಬಗ್ಗೆ ಅವಮಾನಿಸುವುದು ನಮ್ಮ ಕೆಲಸವಲ್ಲ. ನಮ್ಮ ಹಿರಿಯರು ಅದನ್ನು ಹೇಳಿಕೊಟ್ಟಿಲ್ಲ ಎಂದು ಗದುಗಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತಿ ಸ್ವಾಮಿಗಳು ತಿಳಿಸಿದರು.

ಭಾನುವಾರ ಪಟ್ಟಣದ ಸೋಮೇಶ್ವರ ತೇರಿನ ಮನೆಯ ಆವರಣದಲ್ಲಿ ನಡೆದ ಹಿಂದೂ ಸಮ್ಮೇಳನದಲ್ಲಿ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಭಾರತೀಯ ಧರ್ಮ ಶ್ರೇಷ್ಠ ಧರ್ಮವಾಗಿದೆ. ಹಿಂದೂ ಧರ್ಮ ಶ್ರೇಷ್ಠತೆಯನ್ನು ಅಳವಡಿಸಿಕೊಳ್ಳಬೇಕು. ಹಿಂದೂ ಸಮಾಜವನ್ನು ಕಟ್ಟುವುದು ಹೇಗೆ ಎನ್ನುವ ಚಿಂತನೆ ನಡೆಸುವುದು ಅಗತ್ಯವಾಗಿದೆ. ನಮ್ಮಲ್ಲಿನ ಕೆಲ ಕಾವಿಧಾರಿಗಳು ಹಿಂದೂ ಧರ್ಮವನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿರುವುದು ನೋವಿನ ಸಂಗತಿಯಾಗಿದೆ. ಹಿಂದೂ ಧರ್ಮದ ತಾಕತ್ತು ಯಾವ ವಿಜ್ಞಾನಕ್ಕೂ ಇಲ್ಲ. ಸನಾತನ ಹಿಂದೂ ಧರ್ಮವು ವಿಜ್ಞಾನಕ್ಕೂ ಮಿಗಿಲಾಗಿದೆ. ವಿಜ್ಞಾನವು ನಮ್ಮ ಸನಾತನ ಧರ್ಮದ ಮುಂದೆ ಸಮನಾಗಿಲ್ಲ ಎಂದರು. ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ಸನಾತನ ಹಿಂದೂ ಧರ್ಮದ ಬೋಧನೆ ಮಾಡುವ ಕಾಲ ದೂರವಿಲ್ಲ. ಭಾರತೀಯರ ಬೌದ್ಧಿಕ ಶಕ್ತಿ ಜಗತ್ತಿನ ಬೌದ್ಧಿಕ ಶಕ್ತಿಗಿಂತ ಹೆಚ್ಚು ಇದೆ. ಜಗತ್ತಿನ ಯಾವುದೇ ದೇಶವು ಹೆಚ್ಚು ಜ್ಞಾನವನ್ನು ಪಡೆದುಕೊಂಡಿದ್ದರೆ ಅದು ಭಾರತೀಯರ ನೀಡಿದ ಕೊಡುಗೆಯಾಗಿದೆ. ಸ್ವಾಮಿ ವಿವೇಕಾನಂದರಂತೆ ಬದುಕುವ ಕಾರ್ಯವನ್ನು ಅನುಸರಿಸಿ ಜೀವನ ಸಾಗಿಸಬೇಕು ಎಂದರು.

ಗೋವಿಂದಪ್ಪ ಗೌಡಪ್ಪಗೋಳ ದಿಕ್ಸೂಚಿ ಭಾಷಣ ಮಾಡಿ, ಪುಲಿಗೆರೆ ತನ್ನದೆ ಆದ ಇತಿಹಾಸ ಹೊಂದಿದೆ. ದಾಸ್ಯಕ್ಕೆ ಒಳಗಾದ ಹಿಂದೂ ಸಮಾಜದ ಏಳಿಗೆಗೆ ಹಿಂದೂ ಸಮಾಜದ ಸಂಘಟನೆ ಆರ್‌ಎಸ್‌ಎಸ್ ಉದಯವಾಯಿತು‌. ದೇಶದ ಮೂಲೆ ಮೂಲೆಗಳಲ್ಲಿ ಹಿಂದೂ ಸ್ವಯಂ ಸೇವಕ ಸಂಘ ತನ್ನ ಕಾರ್ಯ ನಿರ್ವಹಿಸುತ್ತದೆ. ಸ್ವಯಂ ಸೇವಕ ಸಂಘವು 85 ಸಾವಿರ ಶಾಖೆಗಳನ್ನು ಹೊಂದಿದೆ. ಹಿಂದೂ ಸಮಾಜವನ್ನು ಬೆಳೆಸುವ ಹಾಗೂ ಕಟ್ಟುವ ನಿಟ್ಟಿನಲ್ಲಿ ಆರ್‌ಎಸ್‌ಎಸ್‌ ಪಾತ್ರ ಪ್ರಮುಖವಾಗಿದೆ. ಸಂಘದಲ್ಲಿ ಯಾವುದೇ ಜಾತಿ ಮತ ಪಂಥಗಳ ಭೇದಭಾವ ಇಲ್ಲ ಎಂದರು.

ಚಂದ್ರಣ್ಣ ಮಹಾಜನಶೆಟ್ಟರ ಮಾತನಾಡಿ, ಹಿಂದೂ ಧರ್ಮದ ಆಚರಣೆಗಳು ನಮ್ಮ ಪರಂಪರೆ ಮತ್ತು ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಚಿಂತನೆ ಮಾಡಬೇಕು. ಹಿಂದೂ ಸಂಸ್ಕೃತಿಯ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಇದನ್ನು ತಡೆಯಲು ಒಗ್ಗಟ್ಟಿನಿಂದ ಹೋರಾಡುವ ಕಾರ್ಯ ಮಾಡಬೇಕು. ಹಿಂದೂ ಸಮಾಜವನ್ನು ಒಂದುಗೂಡಿಸುವ ಕಾರ್ಯ ಮಾಡುವುದು ಅಗತ್ಯವಾಗಿದೆ ಎಂದರು.

ಈ ವೇಳೆ ಪರಮೇಶ್ವರ, ಬಸವೇಶ್ವರ, ಕೃಷ್ಣ ಪರಮಾತ್ಮ, ಅಕ್ಕ ಮಹಾದೇವಿ ವೇಷಧಾರಿಗಳು ಆಸೀನರಾಗಿ ಕಾರ್ಯಕ್ರಮಕ್ಕೆ ಶೋಭೆ ತಂದರು.ಸಮಾವೇಶದಲ್ಲಿ ಶಾಸಕ ಡಾ. ಚಂದ್ರು ಲಮಾಣಿ, ಸಣ್ಣಿರಪ್ಪ ಹಳ್ಳೆಪ್ಪನವರ, ಬಸವರಾಜ ಬೆಂಡಿಗೇರಿ, ಎಂ.ಎಸ್. ದೊಡ್ಡಗೌಡ್ರ, ಚಂದ್ರು ಹಂಪಣ್ಣವರ, ಮಹಾದೇವಪ್ಪ ಬೆಳವಿಗಿ, ಸುನೀಲ ಮಹಾಂತಶೆಟ್ಟರ, ವಿಜಯ ಹತ್ತಿಕಾಳ, ಲೋಹಿತ ನೆಲವಿಗಿ, ಬಸವೇಶ ಮಹಾಂತಶೆಟ್ಟರ, ಬಸಣ್ಣ ಬೆಟಗೇರಿ, ನಾರಾಯಣಸಾ ಪವಾರ, ಶಿವಣ್ಣ ಲಮಾಣಿ, ಬಸವಣೆಪ್ಪ ನಂದೆಣ್ಣವರ, ಬಾಬುರಾವ ವೇರ್ಣೇಕರ, ನಿಂಗಪ್ಪ ಬನ್ನಿ, ಮೌನೇಶ ಬಾಲೆಹೊಸೂರ, ಶಂಕರ ಬ್ಯಾಡಗಿ, ಶಿವರಾಜ ಗುಜ್ಜರಿ, ಉಮೇಶ ಮಡಿವಾಳರ, ನಿಂಬಣ್ಣ ಮಡಿವಾಳರ, ಶೈಲಾ ಆದಿ, ಕಾವ್ಯಾ ದೇಸಾಯಿ, ನಂದಾ ಧರ್ಮಾಯತ, ನಾಗರತ್ನ ಬುರಡಿ ಸೇರಿದಂತೆ ಅನೇಕರು ಇದ್ದರು.

ಈ ವೇಳೆ ವಾಸು ಬೋಮಲೆ ಭಕ್ತಿಗೀತೆ ಹಾಡಿದರು. ಈರಣ್ಣ ಗಾಣಗೇರ ಸ್ವಾಗತಿಸಿ ಪರಿಚಯ ಮಾಡಿದರು. ಸುಧಾ ಹೆಗಡೆ ದೇಶ ಭಕ್ತಿಗೀತೆ ಹಾಡಿದರು. ವೈ.ಪಿ. ಜಿಗಳೂರ ನಿರೂಪಿಸಿದರು. ಷಣ್ಮುಖ ಗಡ್ಡೆಣ್ಣವರ ವಂದಿಸಿದರು.