ಸಾರಾಂಶ
ಈ ಭಾಗಕ್ಕೆ ಮುಕ್ತಿ ದೊರಕಿಸಲು ನಡೆದ ಹೋರಾಟ ಸ್ವಾತಂತ್ರ್ಯ ಚಳುವಳಿಗಿಂತ ಕಡಿಮೆಯೇನಲ್ಲ ಎಂದು ನಿವೃತ್ತ ಉಪನ್ಯಾಸಕ ಎನ್. ಬಸವರಾಜ್ ತಿಳಿಸಿದರು.
ಬಳ್ಳಾರಿ: 1947ರ ಆಗಸ್ಟ್ 15ರಂದು ಇಡೀ ದೇಶವೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿದ್ದಾಗ ಹೈದರಾಬಾದ್ ಕರ್ನಾಟಕ ನಿಜಾಮನ ದಾಸ್ಯದಿಂದ ಇನ್ನೂ ನರಳುತ್ತಿತ್ತು. ಈ ಭಾಗಕ್ಕೆ ಮುಕ್ತಿ ದೊರಕಿಸಲು ನಡೆದ ಹೋರಾಟ ಸ್ವಾತಂತ್ರ್ಯ ಚಳುವಳಿಗಿಂತ ಕಡಿಮೆಯೇನಲ್ಲ ಎಂದು ನಿವೃತ್ತ ಉಪನ್ಯಾಸಕ ಎನ್. ಬಸವರಾಜ್ ತಿಳಿಸಿದರು.
ನಗರದ ರಾಘವ ಕಲಾಮಂದಿರ ಸರ್ಕಲ್‌ನಲ್ಲಿ ರಂಗತೋರಣ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಉತ್ಸವದ ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮದ ಬಳಿಕ ಮಾತನಾಡಿದರು.ನಿಜಾಮರ ಕ್ರೂರತನ, ರಜಾಕರ ಅಟ್ಟಹಾಸದಿಂದ ಹೈದರಾಬಾದ್ ಕರ್ನಾಟಕ ಪ್ರಾಂತ್ಯ ನಲುಗಿ ಹೋಗಿತ್ತು. ಮಠ-ಮಂದಿರಗಳು, ಶಾಲೆಗಳು ಹೊರಗಡೆ ಉರ್ದು ಶಾಲೆ ಹೆಸರಿನ ಬೋರ್ಡ್ ತಗುಲಿಸಿ ಒಳಗೆ ಕನ್ನಡ ಕಲಿಸುವ ಪರಿಸ್ಥಿತಿಯಿತ್ತು. ಈ ಚಳುವಳಿಯಲ್ಲಿ ಜಲಿಯನ್‌ವಾಲಾ ಬಾಗ್‌ನಂತಹ ಹತ್ಯಾಕಾಂಡ ನಡೆದಿದೆ.
ಇಂತಹ ವಿಷಯ ಪಠ್ಯವಾಗಿ ಮಕ್ಕಳು ಹಾಗೂ ಯುವ ಪೀಳಿಗೆಗೆ ತಿಳಿದರೆ ಮತ್ತೆ ದಾಸ್ಯದಂತಹ ದುರ್ಬರ ದಿನಗಳು ಬರಲಾರವು ಎಂದರು.ಪ್ರಾಸ್ತಾವಿಕ ಮಾತನಾಡಿದ ರಂಗತೋರಣದ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು, ಹಠಮಾರಿ ನಿಜಾಮನನ್ನು ಇಳಿಸಲು ದೇಶದ ಖಡಕ್ ಗೃಹಮಂತ್ರಿ ವಲ್ಲಭಬಾಯಿ ಪಟೇಲ ಅವರ ಚಾಣಾಕ್ಷತನ ಕಾರಣ ಎಂದು ಸ್ಮರಿಸಿದರು.ಆರಂಭದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿ, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್ ಹಾಗೂ ಕರ್ನಾಟಕ ಏಕೀಕರಣದ ಏಕೈಕ ಬಲಿದಾನ ಪಿಂಜಾರ್ ರಂಜಾನ್‌ಸಾಬ್ ಅವರ
ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಕಲ್ಯಾಣ ಕರ್ನಾಟಕ ವಿಕಾಸ ಅಕಾಡೆಮಿಯ ಜಿಲ್ಲಾ ಸಹ ಸಂಚಾಲಕ ಅಡವಿಸ್ವಾಮಿ, ನಗರ ಸಂಚಾಲಕ ವೆಂಕಟೇಶ ಬಡಿಗೇರ, ನಿವೃತ್ತ ಶಿಕ್ಷಕರಾದ ಕಲ್ಲುಕಂಬ ಶಿವೇಶ್ವರಗೌಡ,
ಕೆ.ಎಂ. ಸಿದ್ದಲಿಂಗಯ್ಯ, ಜೆ.ಎಂ.ಆರ್. ಬಸವರಾಜ, ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರಬಂಡೆ, ತಿಪ್ಪೇಸ್ವಾಮಿ ಮುದ್ದಟನೂರು, ಗಂಗಣ್ಣ, ಪುಷ್ಪಲತಾ, ಚಂದ್ರಶೇಖರ್, ಸುಬ್ಬಣ್ಣ ಮತ್ತಿತರರು ಉಪಸ್ಥಿತರಿದ್ದರು.