ಕೆಐಎಡಿಬಿ ಬಹುಕೋಟಿ ಹಗರಣ ತನಿಖೆ ಹಾಲಿ ನ್ಯಾಯಾಧೀಶರಿಂದ ನಡೆಯಲಿ

| Published : Jan 02 2024, 02:15 AM IST

ಸಾರಾಂಶ

ಕೆಐಎಡಿಬಿ ಬಹುಕೋಟಿ ಹಗರಣದಲ್ಲಿ ಹಲವು ಹಿರಿಯ ಅಧಿಕಾರಿಗಳನ್ನು ಮತ್ತು ಕೆಲ‌ವು ಮಧ್ಯವರ್ತಿಗಳನ್ನು ಪ್ರಕರಣದಿಂದ ಉಳಿಸುವ ಎಲ್ಲ ಪ್ರಯತ್ನ ಇಲ್ಲಾಗಿದೆ ಕೊರವರ ಆರೋಪಿಸಿದ್ದಾರೆ.

- ಕೆಐಎಡಿಬಿ ಹಗರಣದ ತನಿಖೆ ಸಮರ್ಪಕವಾಗಿಲ್ಲ

- ಎರಡು ಸಾವಿರಕ್ಕೂ ಹೆಚ್ಚು ಪುಟಗಳ ಚಾರ್ಜ್‌ಶೀಟ್‌ ಪರಿಶೀಲನೆ

- ಪ್ರಮುಖ ಆರೋಪಿಗಳ ವಿಚಾರಣೆ, ಬಂಧನವೇ ಆಗಿಲ್ಲ

- ಜನಜಾಗೃತಿ ಸಂಘದ ಬಸವರಾಜ ಕೊರವರ ಆಗ್ರಹ

ಕನ್ನಡಪ್ರಭ ವಾರ್ತೆ ಧಾರವಾಡ

ಇಲ್ಲಿಯ ಕೆಐಎಡಿಬಿ ಬಹುಕೋಟಿ ಹಗರಣದ ಸಿಐಡಿ ತನಿಖೆ ಸಮರ್ಪಕವಾಗಿ ನಡೆದಿಲ್ಲ. ರಾಜ್ಯ ಸರ್ಕಾರ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಆಗ್ರಹಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತರ ಹೆಸರಿನಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ ಸರ್ಕಾರದ ಕೋಟಿಗಟ್ಟಲೆ ಹಣ ಹೊಡೆದಿರುವ ಹಗರಣ ಇದಾಗಿದೆ. ತಾವು ನೀಡಿದ ದೂರಿನ ಹಿನ್ನೆಲೆಯಲ್ಲಿ ಎಲ್‌.ಆರ್‌. ಅಗ್ನಿ ಅವರ ನೇತೃತ್ವದಲ್ಲಿ ಸಿಐಡಿ ಅಧಿಕಾರಿಗಳು ಒಂಭತ್ತು ತಿಂಗಳ ಕಾಲ ತನಿಖೆ ನಡೆಸಿದ್ದಾರೆ. ಎರಡು ಹಂತದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಪುಟಗಳ ಚಾರ್ಜ್‌ಶೀಟ್ ಸಹ ಹಾಕಿದ್ದಾರೆ. ಆದರೆ, ಅದರಲ್ಲಿ ಹಲವು ಹಿರಿಯ ಅಧಿಕಾರಿಗಳನ್ನು ಮತ್ತು ಕೆಲ‌ವು ಮಧ್ಯವರ್ತಿಗಳನ್ನು ಪ್ರಕರಣದಿಂದ ಉಳಿಸುವ ಎಲ್ಲ ಪ್ರಯತ್ನ ಇಲ್ಲಾಗಿದೆ ಎಂದು ಚಾರ್ಜ್‌ಶೀಟ್‌ ದಾಖಲೆ ಸಮೇತ ಕೊರವರ ಆರೋಪಿಸಿದರು.

ಕೆಐಎಡಿಬಿ ಹಣಕಾಸು ನಿಯಂತ್ರಣಾಧಿಕಾರಿ ಎನ್. ವಾಣಿ ಸಿಐಡಿ ವಿಚಾರಣಾಧಿಕಾರಿ‌ ಮುಂದೆ ಹಾಜರಾಗಿ ಸಾಕ್ಷಿದಾರ ಹೇಳಿಕೆ ನೀಡಿದ್ದಾರೆ‌. ಹೇಳಿಕೆಯಲ್ಲಿ ಹಣ ಬಿಡುಗಡೆಗೆ ಸಿಇಒ, ವಿಶೇಷ ಭೂ ಸ್ವಾಧೀನಾಧಿಕಾರಿ ಹಾಗೂ ಹಲವು ಅಧಿಕಾರಿಗಳ ಪರಿಶೀಲನೆ ಹಾಗೂ ಸಹಿ ನಂತರ ಆರ್‌ಟಿಜಿಎಸ್ ಮೂಲಕ ಹಣ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರೂ ಆಯಾ ಅಧಿಕಾರಿಗಳನ್ನು ಸಿಐಡಿ ವಿಚಾರಣೆಗೆ ಒಳಪಡಿಸಿಲ್ಲ. ಇದು ಹಲವು ಅನುಮಾನ ಹುಟ್ಟು ಹಾಕಿದೆ. ಜತೆಗೆ 2022ರ ಏಪ್ರಿಲ್‌ 30ರಂದು ಎಸ್‌ಎಲ್‌ಒ ಆಗಿದ್ದ ವಿ.ಡಿ. ಸಜ್ಜನ ನಿವೃತ್ತಿ ಹೊಂದಿದ್ದು, ಅದೇ ದಿನ ₹20 ಕೋಟಿಗೂ ಅಧಿಕ ಹಣವನ್ನು ರೈತರಿಗೆ ಆರ್‌ಟಿಜಿಎಸ್‌ ಮಾಡಲಾಗಿದೆ. ಇದೂ ಪ್ರಶ್ನೆಯಾಗಿಲ್ಲ ಎಂದರು.

ತನಿಖೆಯಲ್ಲಿ ಕೆಐಎಡಿಬಿ ವಿಶೇಷ ಜಿಲ್ಲಾಧಿಕಾರಿ ದಯಾನಂದ ಭಂಡಾರಿ, ಲೆಕ್ಕಪತ್ರ ವಿಭಾಗದ ಸಹಾಯಕ ಕಾರ್ಯದರ್ಶಿ ಮಂಜುನಾಥ ಮುದಕವಿ ಹಾಗೂ ಹಣಕಾಸು ನಿಯಂತ್ರಣಾಧಿಕಾರಿ ಎನ್. ವಾಣಿ ಅವರನ್ನು ಬಚಾವ್ ಮಾಡಿರುವುದು ಯಾವ ಒತ್ತಡಕ್ಕೆ ಮಣಿದು ಎಂದು ಪ್ರಶ್ನಿಸಿದ ಅವರು, ಈ ಹಗರಣಕ್ಕೆ ಪ್ರಮುಖವಾಗಿ ಖೊಟ್ಟಿ ಆಧಾರ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ಖಾತೆ ಹಾಗೂ ಖೊಟ್ಟಿ ಬಾಂಡ್ ಪೇಪರ್ ಯಾರು ತಂದರೂ, ಹೇಗೆ ತಯಾರಿಸಿದರೂ ಇದರ ಕಿಂಗ್‌ಪಿನ್‌ ಅನ್ನು ಏತಕ್ಕೆ ಸಿಐಡಿ ಅಧಿಕಾರಿಗಳು ಬಂಧಿಸಲಿಲ್ಲ ಎಂದು ಪ್ರಶ್ನಿಸಿದರು.

ಪ್ರಕರಣದಲ್ಲಿ ಯಾರನ್ನು ಆರೋಪಿತರನ್ನಾಗಿ ಮಾಡಬೇಕಿತ್ತೋ ಅವರನ್ನು ಪಂಚರನ್ನಾಗಿಸಿರುವುದು ಚಾರ್ಜ್‌ಶೀಟ್‌ನಲ್ಲಿ ಕಂಡು ಬಂದಿದೆ. ಈ ಪ್ರಕರಣದ ಪ್ರಮುಖ ಕಿಂಗ್‌ಪಿನ್‌ಗಳಾದ ಅಷ್ಪಕ್ ದುಂಡಸಿ, ವೀರನಗೌಡ ಪಾಟೀಲ, ಬಸನಗೌಡ ಪಾಟೀಲ, ಶ್ರೀಕಾಂತ್ ಪಾಟೀಲ ಹಾಗೂ ರವಿ ಕುರಬೆಟ್ಟ 2022ರಲ್ಲಿ ಧಾರವಾಡ ಜಿಲ್ಲೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಖರೀದಿಸಿದ ಒಟ್ಟು ಆಸ್ತಿ ಕುರಿತು ಸಿಐಡಿ ಸಮಗ್ರವಾಗಿ ಮಾಹಿತಿ ಸಂಗ್ರಹಿಸಿಲ್ಲ. ಅವರ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಸರ್ಕಾರದ ನಷ್ಟ ಭರಿಸುವ ಕುರಿತು ಯಾವುದೇ ರೀತಿಯ ಪ್ರಸ್ತಾಪ ಚಾರ್ಜ್‌ಶೀಟ್‌ನಲ್ಲಿ ನಮೂದಿಸದಿರುವುದು ಏಕೆ ಎಂಬ ಯಕ್ಷಪ್ರಶ್ನೆ ಸಹ ಕಾಡುತ್ತಿದೆ. ಇದನ್ನೆಲ್ಲ ಗಮನಿಸಿದರೆ, ಸಿಐಡಿ ತನಿಖಾಧಿಕಾರಿ ಎಲ್. ಆರ್. ಅಗ್ನಿ ಸಂಪೂರ್ಣವಾಗಿ ದಾರಿ ತಪ್ಪಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಕೊರವರ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ನಾಗರಾಜ ಕಿರಣಗಿ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ ಇದ್ದರು.