ಖಾಲಿ ಇರುವ ಕೆರೆಗಳ ಮಣ್ಣನ್ನೇ ಗೊಬ್ಬರವೆಂದು ಹೂಳು ತೆಗೆದು, ಹೊಲಗಳ ಫಲವತ್ತತೆ ಹೆಚ್ಚಿಸಿಕೊಳ್ಳುತ್ತಿದ್ದ ರೈತರು ಇದೀಗ ಕೆರೆಗಳ ಹೂಳೆತ್ತುವುದನ್ನು ಜಿಲ್ಲಾಡಳಿತ ನಿಷೇಧಿದ್ದರಿಂದ ತೀವ್ರ ತೊಂದರೆಯಾಗಿದೆಯೆಂದು ಆರೋಪಿಸಿ ರೈತರು ಮಣ್ಣು ತುಂಬಿದ ಟ್ರ್ಯಾಕ್ಟರ್, ಖಾಲಿ ಟ್ರ್ಯಾಕ್ಟರ್‌ಗಳ ಸಮೇತ ನಗರದಲ್ಲಿ ಶುಕ್ರವಾರ ರಸ್ತೆ ತಡೆ ನಡೆಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಖಾಲಿ ಇರುವ ಕೆರೆಗಳ ಮಣ್ಣನ್ನೇ ಗೊಬ್ಬರವೆಂದು ಹೂಳು ತೆಗೆದು, ಹೊಲಗಳ ಫಲವತ್ತತೆ ಹೆಚ್ಚಿಸಿಕೊಳ್ಳುತ್ತಿದ್ದ ರೈತರು ಇದೀಗ ಕೆರೆಗಳ ಹೂಳೆತ್ತುವುದನ್ನು ಜಿಲ್ಲಾಡಳಿತ ನಿಷೇಧಿದ್ದರಿಂದ ತೀವ್ರ ತೊಂದರೆಯಾಗಿದೆಯೆಂದು ಆರೋಪಿಸಿ ರೈತರು ಮಣ್ಣು ತುಂಬಿದ ಟ್ರ್ಯಾಕ್ಟರ್, ಖಾಲಿ ಟ್ರ್ಯಾಕ್ಟರ್‌ಗಳ ಸಮೇತ ನಗರದಲ್ಲಿ ಶುಕ್ರವಾರ ರಸ್ತೆ ತಡೆ ನಡೆಸಿದರು.

ನಗರದ ಶ್ರೀ ಜಯದೇವ ವೃತ್ತದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ನೇತೃತ್ವದಲ್ಲಿ ಮಣ್ಣು ತುಂಬಿದ್ದ ಟ್ರ್ಯಾಕ್ಟರ್‌ಗಳ ಸಮೇತ ಧಾವಿಸಿದ ರೈತರು ಇಡೀ ವೃತ್ತದಲ್ಲಿ ಟ್ರ್ಯಾಕ್ಟರ್ ಗಳನ್ನು ಅಡ್ಡ ನಿಲ್ಲಿಸಿ, ರಸ್ತೆ ತಡೆ ಮಾಡುವ ಜೊತೆಗೆ ಎಸಿ ಕಚೇರಿ ಬಳಿ ತೆರಳಿ, ಹಳೆ ಪಿಬಿ ರಸ್ತೆ ತಡೆ ಮೂಲಕ ಕೆರೆ ಹೂಳೆತ್ತಲು ಅವಕಾಶ ನೀಡುವಂತೆ ಒತ್ತಾಯಿಸಿ ಘೋಷಣೆ ಕೂಗಿದರು.

ಇದೇ ವೇಳೆ ಮಾತನಾಡಿದ ಹುಚ್ಚವ್ವನಹಳ್ಳಿ ಮಂಜುನಾಥ, ಜಿಲ್ಲಾದ್ಯಂತ ಕೆಲವೇ ಕೆಲವು ಕೆರೆಗಳಲ್ಲಿ ನೀರು ಸಹ ಇಲ್ಲ. ಅಂತಹ ಕೆರೆಗಳ ಮಣ್ಣನ್ನೇ ಗೊಬ್ಬರವೆಂದು ತಿಳಿದು, ಕೆರೆಗಳಲ್ಲಿ ತುಂಬಿದ ಹೂಳನ್ನು ತೆಗೆದುಕೊಂಡು ರೈತರು ತಮ್ಮ ಹೊಲಗಳಿಗೆ ಹಾಕಿಕೊಂಡು, ಹೊಲದ ಫಲವತ್ತತೆ ಮಾಡಿಕೊಳ್ಳುತ್ತಿದ್ದರು. ಅದಕ್ಕೂ ಈಗ ಕುತ್ತು ಬಂದಿದೆ ಎಂದರು.

ಜಿಲ್ಲಾಧಿಕಾರಿಗಳು ಕೆರೆಗಳಲ್ಲಿ ಹೂಳೆತ್ತುವುದನ್ನು ನಿಷೇಧಿಸಿರುವುದರಿಂದ ರೈತರಿಗೆ ತೀವ್ರ ಸಮಸ್ಯೆ ಉಂಟಾಗಿದೆ. ಇಂತಹ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ರೈತರು ಟ್ರ್ಯಾಕ್ಟರ್‌ಗಳ ಸಮೇತವೇ ಜಿಲ್ಲಾ ಕೇಂದ್ರದಲ್ಲಿ ಹೋರಾಟ ನಡೆಸಿದ್ದಾರೆ. ಜಿಲ್ಲೆಯಲ್ಲಿ ಖಾಲಿ ಇರುವ ಕೆರೆಗಳಲ್ಲಿ ಮಣ್ಣನ್ನು ಟ್ರ್ಯಾಕ್ಟರ್‌ಗಳಿಗೆ ತುಂಬಲು ಅನುಮತಿ ಮಾಡಿಕೊಡಬೇಕು ಎಂದರು.

ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಿಂದ ನೀಡುವಂತಹ ಕೃಷಿ ಹೊಂಡಗಳ ಹೂಳು ತೆಗೆದಿರುವ ಮಣ್ಣನ್ನು ಸಹ ಹೊರಗಡೆ ಸಾಗಿಸುವುದಕ್ಕೆ ಅವಕಾಶ ಮಾಡಿಕೊಡಬೇಕು. ಕೃಷಿ ಹೊಂಡಗಳಲ್ಲಿ ಹೂಳು ತೆಗೆದಿರುವ ಮಣ್ಣನ್ನು ಜಮೀನಿನಲ್ಲಿ ಹಾಕಿಕೊಳ್ಳುವುದಕ್ಕೆ ಜಾಗ ಇರುವುದಿಲ್ಲ. ಹೊಲಗಳಲ್ಲಿ ಮಟ್ಟ ಮಾಡಿಕೊಳ್ಳಲು ಸಹ ಅವಕಾಶ ಮಾಡಿಕೊಡಬೇಕು. ಈ ಬಗ್ಗೆ ಉಪ ವಿಭಾಗಾಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಮನವಿ ಆಲಿಸಿದ ಉಪ ವಿಭಾಗಾಧಿಕಾರಿ ಮಾತನಾಡಿ, ರೈತರಿಗೆ ಯಾವುದೇ ಕಾರಣಕ್ಕೂ ತೊಂದರೆ ಮಾಡುವುದಿಲ್ಲ. ನಾವೂ ಸಹ ರೈತರ ಪರವಾಗಿದ್ದೇವೆ. ಆದರೆ, ರೈತರು ಟ್ರ್ಯಾಕ್ಟರ್‌ಗಳ ಮೂಲಕ ಮಣ್ಣನ್ನು ಸಾಗಿಸುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಲಾರಿಗಳ ಮುಖಾಂತರ ಮಣ್ಣು ಸಾಗಾಟ ಮಾಡುವುದರ ಬಗ್ಗೆ ಇನ್ನು 2 ದಿನಗಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ರೈತರಿಗೆ ಮಾತ್ರ ಯಾವುದೇ ರೀತಿ ನಿರ್ಬಂಧವಿಲ್ಲ, ಹೂಳು ತೆಗೆದು, ಕೃಷಿ ಚಟುವಟಿಕೆಗಳಲ್ಲಿ ತೊಡಗಬಹುದು ಎಂದು ಸ್ಪಷ್ಟಪಡಿಸಿದರು.

ರೈತ ಸಂಘದ ಮುಖಂಡರಾದ ಹೂವಿನಮಡು ನಾಗರಾಜ, ಯಲೋದಹಳ್ಳಿ ರವಿಕುಮಾರ, ಚಿನ್ನಸಮುದ್ರ ಸುರೇಶನಾಯ್ಕ, ಮೋಹನ, ಬೋರಗೊಂಡನಹಳ್ಳಿ ಕಲ್ಲೇಶ, ನಾಗರಾಜ, ಗಂಗನಕಟ್ಟೆ ಷಣ್ಮುಖಪ್ಪ, ರಾಕೇಶ, ಮರುಳಸಿದ್ದಪ್ಪ, ಈಚಘಟ್ಟ ಲಿಂಗರಾಜ, ಹೊನ್ನೂರು ವಸಂತ, ಕುರ್ಕಿ ಹನುಮಂತಪ್ಪ ಇನ್ನು ಮುಂತಾದವರು ಇದ್ದರು.