ಸಾರಾಂಶ
ವಕೀಲರ ದಿನಾಚರಣೆ, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಕೊಪ್ಪಳಹೊಸ ಹೊಸ ಸವಾಲುಗಳನ್ನು ಮೆಟ್ಟಿ ನಿಲ್ಲುವ ಮನೋಧೋರಣೆಯನ್ನು ವಕೀಲರು ಅಳವಡಿಸಿಕೊಳ್ಳಬೇಕು ಎಂದು ಫೋಕ್ಸೊ ನ್ಯಾಯಾಲಯದ ನ್ಯಾಯಾಧೀಶ ಕುಮಾರ ಡಿ.ಕೆ. ಹೇಳಿದರು.
ಜಿಲ್ಲಾ ವಕೀಲರ ಸಂಘದ ವತಿಯಿಂದ ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ನಡೆದ ವಕೀಲರ ದಿನಾಚರಣೆ, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ನ್ಯಾಯದಾನ ಮಾಡುವಂತಹ ವ್ಯವಸ್ಥೆಯಲ್ಲಿ ವಕೀಲರು ಪ್ರಮುಖ ಪಾತ್ರ ನಿಭಾಯಿಸುತ್ತಾರೆ. ಬದಲಾದ ಕಾಲದಂತೆ ವಕೀಲರಿಗೂ ಹೊಸ ಸವಾಲುಗಳು ಎದುರಾಗುತ್ತವೆ. ಹೀಗಾಗಿ, ಅವರು ನಿರಂತರ ಅಧ್ಯಯನಶೀಲರಾಗಬೇಕು ಮತ್ತು ಹೊಸ ಹೊಸ ಪ್ರಯೋಗದೊಂದಿಗೆ ಇರಬೇಕಾಗುತ್ತದೆ ಎಂದರು.
ವಕೀಲ ವೃತ್ತಿ ಅತ್ಯಂತ ಪವಿತ್ರವಾಗಿರುವ ವೃತ್ತಿಯಾಗಿದೆ. ಯಾಕೆಂದರೆ ನೊಂದು ಬಂದವರಿಗೆ ನ್ಯಾಯ ಕೊಡಿಸುವ ಮಹಾನ್ ಕಾರ್ಯ ಮಾಡಬೇಕಾಗುತ್ತದೆ. ವ್ಯವಸ್ಥೆಯಲ್ಲಿ ಪಟ್ಟಭದ್ರ ವ್ಯವಸ್ಥೆಯ ವಿರುದ್ಧ ಧ್ವನಿಯಾಗಬೇಕಾಗುತ್ತದೆ. ಹೀಗಾಗಿ, ಅವರ ಕಾರ್ಯ ಶ್ಲಾಘನೀಯ ಎಂದರು.ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ವಕೀಲರ ವೃತ್ತಿಯನ್ನು ಅತ್ಯಂತ ಶ್ರದ್ಧೆಯಿಂದ ಮಾಡಬೇಕಾಗಿದೆ. ಜಿಲ್ಲಾ ನ್ಯಾಯಾಲಯ ನಿರ್ಮಾಣಕ್ಕಾಗಿ ₹100 ಕೋಟಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಈಗ ಸದ್ಯಕ್ಕೆ ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರ ಕಾಳಜಿಯಿಂದ ತಕ್ಷಣ ₹50 ಕೋಟಿ ಮಂಜೂರಾತಿ ದೊರೆತಿದ್ದು, ಶೀಘ್ರದಲ್ಲಿಯೇ ಅನುಷ್ಠಾನವಾಗಲಿದೆ ಎಂದರು.
ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ದೇಶದಲ್ಲಿ ಹೆಸರಾಂತ ನಾಯಕರು ವಕೀಲರೇ ಆಗಿದ್ದಾರೆ. ವಕೀಲ ವೃತ್ತಿ ಪವಿತ್ರವಾಗಿರುವ ವೃತ್ತಿಯಾಗಿದ್ದು, ಈ ವೃತ್ತಿಯಲ್ಲಿದ್ದುಕೊಂಡೇ ಸಮಾಜದ ಅಂಕು, ಡೊಂಕುಗಳನ್ನು ತಿದ್ದಬಹುದಾಗಿದೆ ಎಂದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ದರಗದ, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಸರ್ಕಾರದ ಹಿರಿಯ ಕಾನೂನು ಅಧಿಕಾರಿ ಬಿ.ಎಸ್. ಪಾಟೀಲ, ರಾಜ್ಯ ಮಹಿಳಾ ನ್ಯಾಯವಾದಿಗಳ ಒಕ್ಕೂಟದ ಅಧ್ಯಕ್ಷೆ ಸಂಧ್ಯಾ ಬಿ. ಮಾದಿನೂರ, ವಕೀಲರ ಸಂಘದ ಉಪಾಧ್ಯಕ್ಷ ಬಿ.ವಿ. ಸಜ್ಜನ್, ಪ್ರಧಾನ ಕಾರ್ಯದರ್ಶಿ ಪ್ರಕಾಶ ಎಲ್. ಹಾದಿಮನಿ, ಜಂಟಿ ಕಾರ್ಯದರ್ಶಿ ಸಂತೋಷ ಸಿ. ಕವಲೂರ, ಖಜಾಂಚಿ ರಾಜಾಸಾಬ್ ಬುದಗುಂಪಾ ಹಾಗೂ ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರು ಪಾಲ್ಗೊಂಡಿದ್ದರು.