ಬೆಳಕು ಅಂತರಂಗ ಅರಳಿಸಲಿ, ಸಂಬಂಧವೇ ಸಂಪತ್ತಾಗಲಿ: ಡಾ. ಆಳ್ವ ಆಶಯ

| Published : Nov 09 2024, 01:02 AM IST

ಬೆಳಕು ಅಂತರಂಗ ಅರಳಿಸಲಿ, ಸಂಬಂಧವೇ ಸಂಪತ್ತಾಗಲಿ: ಡಾ. ಆಳ್ವ ಆಶಯ
Share this Article
  • FB
  • TW
  • Linkdin
  • Email

ಸಾರಾಂಶ

ತುಳು ಸಂಸ್ಕೃತಿಯಂತೆ ಹಾಲೆ (ಪಾಳೆ) ಅಥವಾ ಸರ್ವಪರ್ಣಿಕ ಮರದ ಬಲಿಯೇಂದ್ರ ಕಂಬದ ದೀಪ ಪ್ರಜ್ವಲಿಸುವ ಮೂಲಕ ಡಾ.ಎಂ.ಮೋಹನ ಆಳ್ವ ಅವರು ನಾಡಿನ ಸಮೃದ್ಧಿಗಾಗಿ ಪ್ರಾರ್ಥಿಸಿದರು. ಬಳಿಕ ಬಲೀಂದ್ರ ಪೂಜೆ ನಡೆಯಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಶಿಕ್ಷಣ, ಕ್ರೀಡೆ, ಸಂಸ್ಕೃತಿಯ ಸಂಗಮವಾಗಿ ಅರಳಿದ ಆಳ್ವಾಸ್ ಅಂಗಣದಲ್ಲಿ ಗುರುವಾರ ಬೆಳಕಿನ ಸಂಭ್ರಮ. ಬಾನಂಗಳದಲ್ಲೂ ಮೂಡಿದ ಚಿತ್ತಾರ. ಇದು ‘ಆಳ್ವಾಸ್ ದೀಪಾವಳಿ’ಯ ಸೊಬಗು.

ಸರ್ವಧರ್ಮಗಳ ಸಮಭಾವ, ಭಾರತೀಯತೆಯ ಭ್ರಾತೃತ್ವ, ಸೌಹಾರ್ದತೆಯ ಸಮಗ್ರತೆ ಎಂಬಂತೆ ಎಲ್ಲ ಹಬ್ಬಗಳನ್ನು ಆಚರಿಸಿಕೊಂಡು ಬಂದಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು, ಗುರುವಾರ ಸಂಜೆ ಇಲ್ಲಿನ ಪುತ್ತಿಗೆ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲುರಂಗ ಮಂದಿರದಲ್ಲಿ ‘ಆಳ್ವಾಸ್ ದೀಪಾವಳಿ-೨೦೨೪’ ಆಚರಿಸಿತು.

೧೫ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಸೇರಿದಂತೆ ಪೋಷಕರು, ಸ್ಥಳೀಯರು ಸೇರಿ ೨೦ ಸಾವಿರಕ್ಕೂ ಅಧಿಕ ಜನರ ಸಮ್ಮುಖದಲ್ಲಿ ದೀಪಾವಳಿಯ ಬೆಳಕು ಲೋಕ ಬೆಳಗಿತು. ಕೊಂಬು, ಕಹಳೆ, ೩೬ ಛತ್ರಿ ಚಾಮರದ ಜೊತೆ, ೧೦೦ಕ್ಕೂ ಅಧಿಕ ದೇವಕನ್ಯೆಯರು, ದೀಪ, ಕಳಶ ಹಿಡಿದ ಬಾಲಿಕೆಯರು ಹಾಗೂ ಪುಟಾಣಿಗಳ ಜೊತೆ ಬಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹಾಗೂ ಅತಿಥಿಗಳು ಮೆರವಣಿಗೆ ಮೂಲಕ ಸಭಾಂಗಣವನ್ನು ಪ್ರವೇಶಿಸಿದರು. ಸಾಂಪ್ರದಾಯಿಕ ಮೆರವಣಿಗೆಯಿಂದ ಸಭಾಂಗಣವು ನಂದನವನದಂತೆ, ಇಂದ್ರನ ಆಸ್ಥಾನದಂತೆ ಕಂಗೊಳಿಸಿತು.ಮೂರು ನೂರಕ್ಕೂ ಹೆಚ್ಚು ಲಂಗ ದಾವಣಿ ತೊಟ್ಟು ಮಲ್ಲಿಗೆ ಮುಡಿದ ಬಾಲಕಿಯರು, ಪುಟಾಣಿಗಳು ವೇದಿಕೆಯ ಮೆರುಗನ್ನು ಹೆಚ್ಚಿಸಿದರು. ತುಳುನಾಡಿನ ಕೃಷಿ ಪ್ರಧಾನವಾದ ದೀಪಾವಳಿ ಹಬ್ಬದ ಆಚರಣೆ ಮಾದರಿಯಲ್ಲಿ ಮೊದಲಿಗೆ ಗೋ ಪೂಜೆ ನಡೆಯಿತು. ಅವಲಕ್ಕಿ, ಬೆಲ್ಲ, ಭತ್ತ, ನೀರುದೋಸೆ, ಬಾಳೆ ಹಣ್ಣು ನೀಡಿ ಗೋವನ್ನು ಪೂಜಿಸಿ ಆರತಿ ಬೆಳಗಲಾಯಿತು.

ಬಳಿಕ ವೇದಿಕೆ ಮುಂಭಾಗದಲ್ಲಿಯೇ ತುಳಸಿ ಪೂಜೆ ನಡೆಯಿತು.

ಕಳಸೆ, ನೇಗಿಲು, ನೊಗ, ಮುಡಿ ಕಟ್ಟುವ ಕೊದಂಟಿ ಸೇರಿದಂತೆ ಸಮಗ್ರ ಕೃಷಿ ಪರಿಕರಗಳು, ಹಣ್ಣು ಹಂಪಲು, ಕರಾವಳಿಯ ಗದ್ದೆಯ ನಾಟಿಯ ತರಕಾರಿ ಬೆಳೆಗಳು, ದವಸ ಧಾನ್ಯಗಳ ಪೂಜೆಯ ಮೂಲಕ ಸಿರಿ- ಸಂಪತ್ತು -ಸಮೃದ್ಧಿಯನ್ನು ನಾಡಿಗೆ ಹರಸಲಾಯಿತು.

ತುಳು ಸಂಸ್ಕೃತಿಯಂತೆ ಹಾಲೆ (ಪಾಳೆ) ಅಥವಾ ಸರ್ವಪರ್ಣಿಕ ಮರದ ಬಲಿಯೇಂದ್ರ ಕಂಬದ ದೀಪ ಪ್ರಜ್ವಲಿಸುವ ಮೂಲಕ ಡಾ.ಎಂ.ಮೋಹನ ಆಳ್ವ ಅವರು ನಾಡಿನ ಸಮೃದ್ಧಿಗಾಗಿ ಪ್ರಾರ್ಥಿಸಿದರು. ಬಳಿಕ ಬಲೀಂದ್ರ ಪೂಜೆ ನಡೆಯಿತು.

ಬಳಿಕ ಮಾತನಾಡಿದ ಡಾ.ಎಂ. ಮೋಹನ ಆಳ್ವ, ವಿಶ್ವದ ಮೂರು ಪ್ರಮುಖ ಹಬ್ಬಗಳು ಕ್ರಿಸ್ಮಸ್, ರಮ್ಜಾನ್ ಹಾಗೂ ದೀಪಾವಳಿ. ಈ ಪೈಕಿ ದೀಪಾವಳಿ ಸರ್ವಧರ್ಮೀಯರ ಹಬ್ಬವಾಗಿ ಪರಿವರ್ತನೆಗೊಂಡಿದ್ದು ಸೌಹಾರ್ದತೆಯನ್ನು ಸಂಕೇತಿಸುತ್ತದೆ. ಬೆಳಕು ನಿಷ್ಪಕ್ಷಪಾತ. ಎಲ್ಲರ ಅಂತರಂಗದ ಬೆಳಕು ಬೆಳಗಬೇಕು. ಭಾವನೆ, ಜವಾಬ್ದಾರಿಗಳಲ್ಲಿ, ಕರ್ತವ್ಯದಲ್ಲಿ ನಾವು ಬೆಳಗಬೇಕು ಎಂದು ಹಾರೈಸಿದರು.

ಕರ್ತವ್ಯ ಎಂಬ ಬತ್ತಿ, ಜ್ಞಾನ ಎಂಬ ಎಣ್ಣೆ ಹಾಗೂ ಹಣತೆ ಎಂಬ ಶಿಕ್ಷಣ ಸಂಸ್ಥೆ ಇದ್ದಾಗ ವಿದ್ಯಾರ್ಥಿಗಳ ಬದುಕು ಬೆಳಗಲು ಸಾಧ್ಯವಿದೆ. ಸಂಬಂಧಗಳೇ ಸಂಪತ್ತಾಗಿದ್ದು ಆ ಸಂಪತ್ತಿಗೆ ಸಾವು ಇಲ್ಲ. ಆರ್ಥಿಕ ಸಂಪತ್ತು ಸಂಬಂಧಕ್ಕೆ ಕಾರಣ ಆಗಬಾರದು ಎಂದರು. ಅಜ್ಞಾನ ಹಾಗೂ ಅಂಧಕಾರ ತೊಡೆದು ದೀಪ ಹಚ್ಚೋಣ. ಜಾತಿ ಧರ್ಮ, ಕುಲ ಮತ ಎನ್ನದೇ ಸಂಬಂಧ ಬೆಳಗೋಣ. ಎಲ್ಲರೂ ಒಂದಾಗಿ ಬೆಳೆಯೋಣ ಎಂದರು.

ಸಾಂಸ್ಕೃತಿಕ ವೈಭವ: ಆರಾಧನೆಯ ಬಳಿಕ ಆಚರಣೆಯ ಭಾಗವಾಗಿ ದೀಪಾವಳಿಯ ಸಂಭ್ರಮದ ವೇದಿಕೆಯಲ್ಲಿ ‘ಆಳ್ವಾಸ್ ಸಾಂಸ್ಕೃತಿಕ ವೈಭವ’ ಮೇಳೈಸಿತು.

ಪುತ್ತೂರಿನ ವಿದ್ವಾನ್ ದೀಪಕ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದ ನೀಲಕಂಠನ ಆರಾಧನೆಯ ‘ಭೋ ಶಂಭೋ, ಶಿವ ಶಂಭೋ, ಸ್ವಯಂ ಭೋ’ ಶಾಸ್ತ್ರೀಯ ನೃತ್ಯದ ಮೂಲಕ ಚಾಲನೆ ದೊರೆಯಿತು.

ನಂತರ ಕೃಷ್ಣ -ರಾಧೆಯರ ಮೋಹಕತೆ, ನವರಾತ್ರಿಯ ನವದುರ್ಗೆಯ ಆರಾಧನೆ ಸಂದರ್ಭದಲ್ಲಿ ಗುಜರಾತಿನಲ್ಲಿ ನರ್ತಿಸುವ ಗಾರ್ಭ ಮತ್ತು ದಾಂಡಿಯಾದ ನೃತ್ಯ. ರಾಧಾ- ಶ್ಯಾಮ ನರ್ತನವು ಪ್ರೀತಿಯ ಅಲೆ ಸೃಷ್ಟಿಸಿತು. ಪಾಶ್ಚಾತ್ಯ, ಭಾರತೀಯ, ಕಸರತ್ತುಗಳ ಮಿಶ್ರಣದಂತೆ ಸಂಕಲಿಸಿದ ಸೃಜನಾತ್ಮಕ ನೃತ್ಯ ಹೊಸ ಲೋಕಕ್ಕೆ ಕೊಂಡೊಯ್ಯಿತು.

ಕರ್ನಾಟಕದ ದೇಸಿ ಕಲೆಯಾದ ಡೊಳ್ಳು ಕುಣಿತವನ್ನು ಆಳ್ವಾಸ್ ನ ತಾಂತ್ರಿಕ ವಿದ್ಯಾರ್ಥಿಗಳು ಪ್ರದರ್ಶಿಸಿದಾಗ ಪ್ರೇಕ್ಷಕ ವರ್ಗವೇ ಧ್ವನಿಯಾಯಿತು. ಶಾಸಕ ಉಮಾನಾಥ ಕೋಟ್ಯಾನ್, ಉದ್ಯಮಿ ಕೆ. ಶ್ರೀಪತಿ ಭಟ್, ಮಾಜಿ ಸಚಿವ ಅಭಯಚಂದ್ರ ಜೈನ್, ಚೌಟರ ಅರಮನೆಯ ಕುಲದೀಪ ಚೌಟ, ಐಕಳ ಹರೀಶ್ ಶೆಟ್ಟಿ, ಸಂಗೀತ ನಿರ್ದೇಶಕ ವಿ.ಮನೋಹರ್, ಜಯಶ್ರೀ ಅಮರನಾಥ ಶೆಟ್ಟಿ ಇದ್ದರು. ವೇಣುಗೋಪಾಲ ಶೆಟ್ಟಿ, ನಿತೇಶ್ ಮಾರ್ನಾಡು, ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.