ಸಾರಾಂಶ
ಕನ್ನಡಪ್ರಭ ವಾರ್ತೆ ಮೇಲುಕೋಟೆ
ಶ್ರೀಚೆಲುವನಾರಾಯಣಸ್ವಾಮಿಗೆ ನ.9ರಂದು ರಾತ್ರಿ ವಜ್ರಖಚಿತ ರಾಜಮುಡಿ ಕಿರೀಟಧಾರಣ ಮಹೋತ್ಸವ ನಡೆಯಲಿದೆ.ಕಾರ್ತಿಕ ಮಾಸದ ರಾಜಮುಡಿ ಬ್ರಹ್ಮೋತ್ಸವದ 4ನೇ ತಿರುನಾಳ್ ದಿನವಾದ ಶನಿವಾರ ರಾತ್ರಿ ಮೈಸೂರು ಮಹಾ ರಾಜರಾಗಿದ್ದ ರಾಜ ಒಡೆಯರ್ ಭಕ್ತಿ ಪೂರ್ವಕವಾಗಿ ಸಮರ್ಪಿಸಿದ ಸಿಂಹಲಾಂಚನವಿರುವ ಅಪರೂಪದ ವಜ್ರಗಳಿಂದ ಕೂಡಿದ ರಾಜಮುಡಿ ಕಿರೀಟ, ರಾಜಲಾಂಛನ ಗಂಡುಬೇರುಂಡ ಪದಕ, ಹನ್ನೆರಡು ಆಳ್ವಾರುಗಳನ್ನು ಒಳಗೊಂಡ ಪದ್ಮಪೀಠ, ಶಂಕ, ಚಕ್ರ, ಗದೆ, ಶಿರಚ್ಚಕ್ರ, ಅಭಯಹಸ್ತ, ಪಾದಜೋಡಿ ಕರ್ಣಕುಂಡಲ ಸೇರಿದಂತೆ 16 ಬಗೆಯ ವಜ್ರ, ಪಚ್ಚೆ, ರತ್ನ ಮುತ್ತುಗಳಿಂದ ಕೂಡಿದ ಐತಿಹಾಸಿಕ ಆಭರಣಗಳನ್ನು ತೊಡಿಸಿ ಉತ್ಸವ ನೆರವೇರಿಸಲಾಗುತ್ತದೆ.
ಸರಳ ಜಾತ್ರಾ ಮಹೋತ್ಸವ:ರಾಜಮುಡಿ ಬ್ರಹ್ಮೋತ್ಸವಕ್ಕೆ ಮೇಲುಕೋಟೆ ದೇವಾಲಯದಲ್ಲಿ ಅಗತ್ಯ ಅನುದಾನವೇ ಇಲ್ಲ. ಕಾರ್ಯನಿರ್ವಾಹಕ ಅಧಿಕಾರಿಗಳು ಉತ್ಸವದ ಆಕರ್ಷಣೆ ಹೆಚ್ಚಿಸಿ ಭಕ್ತರನ್ನು ಆಕರ್ಷಿಸಲು ಕನಿಷ್ಠ ವ್ಯವಸ್ಥೆಗಾದರೂ ಅಗತ್ಯ ಅನುದಾನ ಕೋರಿ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಿ ಧಾರ್ಮಿಕದತ್ತಿ ಇಲಾಖೆಯಿಂದ ಅನುಮೋದನೆ ಪಡೆಯದೆ ಮತ್ತು ದಾನಿಗಳಿಗೂ ಅವಕಾಶ ನೀಡದ ಕಾರಣ ಮಹಾರಾಜರ ಸಂಕಲ್ಪದ ಹತ್ತು ದಿನಗಳ ರಾಜಮುಡಿ ಬ್ರಹ್ಮೋತ್ಸವ ಅತ್ಯಂತ ಸರಳ ಹಾಗೂ ಸಾಂಕೇತಿಕವಾಗಿ ನಡೆಯುತ್ತಿದೆ.
ತಮಿಳುನಾಡು ಸರ್ಕಾರದ ಗೌರವ ಸಮರ್ಪಣೆ:ರಾಜಮುಡಿಯ ಐತಿಹಾಸಿಕ ಮಹತ್ವವನ್ನು ಗುರುತಿಸಿರುವ ತಮಿಳುನಾಡು ಸರ್ಕಾರ ರಾಮಾನುಜರಿಗೇ ಗುರುಗಳಾಗಿದ್ದ ಕಾಂಚೀಪುರಂ ಜಿಲ್ಲೆಯ ಐತಿಹಾಸಿಕ ಎಂಬಾರ್ ಮತ್ತು ವೈಕುಂಠಪೆರುಮಾಳ್ ದೇವಾಲಯದಿಂದ ಮಾಲೆ ಮರ್ಯಾದೆಗಳನ್ನು ರಾಜಮುಡಿಯಂದು ಚೆಲುವನಾರಾಯಣಸ್ವಾಮಿಗೆ ಸಮರ್ಪಿಸುವ ಕೈಂಕರ್ಯವನ್ನು ಹಿರಿಯ ಅಧಿಕಾರಿಗಳು ಅರ್ಚಕರು ಇದ್ದು ಮಾಡಬೇಕು ಎಂದು ವಿಶೇಷ ಸರ್ಕಾರಿ ಆದೇಶ ನೀಡಿರುವ ಕಾರಣ ಪ್ರತಿವರ್ಷ ಮರ್ಯಾದೆ ಸಮರ್ಪಣೆಯಾಗುತ್ತಿದೆ.
ಈ ವರ್ಷ ರಾಜಮುಡಿಯಂದು ತಮಿಳುನಾಡಿನ ಧಾರ್ಮಿಕ ದತ್ತಿ ಮತ್ತು ಪ್ರವಾಸೋಧ್ಯಮ ಇಲಾಖೆಯ ಕಾಂಚಿಪುರಂ ವಿಭಾಗದ ಜಂಟಿ ಆಯುಕ್ತ ಕುಮಾರ ದೊರೈ, ಶ್ರೀಪೆರೆಂಬೂದೂರು ರಾಮಾನುಜರ ದೇಗುಲದ ಅಧಿಕಾರಿ ರಾಜಇಲಂ ಪೆರುವಲುತೈ ವಿದ್ವಾಂಸ ಚಕ್ರಪಾಣಿ ಭಾಗವಹಿಸಿ ಸರ್ಕಾರದ ಗೌರವ ಸಮರ್ಪಣೆ ಮಾಡಲಿದ್ದಾರೆ.ನಾಡಿದ್ದು ತೊಟ್ಟಿಲಮಡು ಜಾತ್ರೆ:
ರಾಜಮುಡಿ ಬ್ರಹ್ಮೋತ್ಸವದ ಆರನೇ ದಿನ ನ.11ರಂದು ಕಣಿವೆಬಳಿಯ ತೊಟ್ಟಿಲಮಡು ಬಳಿಸಂಜೆ 4 ರಿಂದ ಜಾತ್ರೆ ನಡೆಯುತ್ತದೆ. ಗ್ರಾಪಂನಿಂದ ದೀಪಾಲಂಕಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ವಿವಿಧ ಸಮುದಾಯದವರು ಸಂಜೆ ರುಚಿಕರವಾದ ಕದಂಬ ಪ್ರಸಾದ ತಯಾರಿಸಿ ಜಾತ್ರೆಗೆ ಬರುವ ಸಹಸ್ರಾರು ಭಕ್ತರಿಗೆ ವಿತರಿಸುತ್ತಾರೆ.ಜಾತ್ರೆಗೂ ಮುನ್ನ ಅಷ್ಠತೀರ್ಥೋತ್ಸವ ಬೆಳಗ್ಗೆ 8 ಗಂಟೆಗೆ ಕಲ್ಯಾಣಿಯಲ್ಲಿ ಮೊದಲ ಅಭಿಷೇಕದೊಂದಿಗೆ ಆರಂಭವಾಗಿ ಸಂಜೆ 4 ಗಂಟೆಗೆ ವೈಕುಂಠಗಂಗೆ ತೊಟ್ಟಿಲಮಡುವಿನಲ್ಲಿ ಕೊನೆಯ ಅಭಿಷೇಕದೊಂದಿಗೆ ಮುಕ್ತಾಯವಾಗುತ್ತದೆ. ನಂತರ ಯೋಗಾನರಸಿಂಹಸ್ವಾಮಿ ಬೆಟ್ಟದ ಗಿರಿಪ್ರದಕ್ಷಿಣೆ ನಡೆದು ಮಹೋತ್ಸವ ರಾತ್ರಿ 8 ಗಂಟೆಗೆ ಮುಕ್ತಾಯವಾಗಲಿದೆ.