ಮಂಡ್ಯ ಜಿಲ್ಲಾಡಳಿತ ಕೂಡಲೇ ಶಾಂತಿಸಭೆ ಮಾಡಲಿ: ಗ್ರಾಪಂ ಸದಸ್ಯ ಶಿವಾನಂದ

| Published : Feb 01 2024, 02:09 AM IST

ಮಂಡ್ಯ ಜಿಲ್ಲಾಡಳಿತ ಕೂಡಲೇ ಶಾಂತಿಸಭೆ ಮಾಡಲಿ: ಗ್ರಾಪಂ ಸದಸ್ಯ ಶಿವಾನಂದ
Share this Article
  • FB
  • TW
  • Linkdin
  • Email

ಸಾರಾಂಶ

ಹನುಮಧ್ವಜ ವಿಚಾರವಾಗಿ ಪಂಚಾಯ್ತಿಗೆ ಮೊದಲು ಮನವಿ ಬಂತು. ಸರ್ವಾನುಮತದಿಂದ ಅದಕ್ಕೆ ಒಪ್ಪಿಗೆ ಕೊಟ್ಟೆವು. ಮೂರು ಸಭೆಯಲ್ಲಿ ಯಾವುದೇ ವಿರೋಧ ಬರಲಿಲ್ಲ. ಗ್ರಾಮದಲ್ಲಿ ಎಲ್ಲರೂ ಪಕ್ಷಾತೀತವಾಗಿದ್ದೇವೆ. ಹೊರಗಡೆ ರಾಜಕೀಯ ಮಾಡಿದರೂ ಗ್ರಾಮದಲ್ಲಿ ರಾಜಕಾಣ ಮಾಡಲ್ಲ. ನಾವು ಶಿವರಾತ್ರಿಯಂದು ಊರಲ್ಲಿ ದೊಡ್ಡ ಹಬ್ಬ ಮಾಡುತ್ತೇವೆ. ಅದಕ್ಕೆ ಅಡಚಣೆ ಆಗಬಾರದು. ಹೀಗಾಗಿ ಜಿಲ್ಲಾಡಳಿತ ಈ ಕೂಡಲೇ ಗ್ರಾಮದಲ್ಲಿ ಶಾಂತಿ ಸಭೆ ಮಾಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಕೆರಗೋಡು ಗ್ರಾಮದಲ್ಲಿ ಸೌಹಾರ್ದ ವಾತಾವರಣ ನಿರ್ಮಾಣಕ್ಕೆ ಜಿಲ್ಲಾಡಳಿತ ಕೂಡಲೇ ಶಾಂತಿಸಭೆ ಮಾಡಬೇಕು ಎಂದು ಕಾಂಗ್ರೆಸ್‌ ಮುಖಂಡ, ಗ್ರಾಪಂ ಸದಸ್ಯ ಶಿವಾನಂದ ಆಗ್ರಹಿಸಿದರು.

ಕೆರಗೋಡು ಅಯ್ಯಪ್ಪ ಸ್ವಾಮಿ ದೇಗುಲದ ಆವರಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಹನುಮಧ್ವಜ ವಿಚಾರವಾಗಿ ಪಂಚಾಯ್ತಿಗೆ ಮೊದಲು ಮನವಿ ಬಂತು. ಸರ್ವಾನುಮತದಿಂದ ಅದಕ್ಕೆ ಒಪ್ಪಿಗೆ ಕೊಟ್ಟೆವು. ಮೂರು ಸಭೆಯಲ್ಲಿ ಯಾವುದೇ ವಿರೋಧ ಬರಲಿಲ್ಲ ಎಂದರು.

ಧ್ವಜಸ್ತಂಭದಲ್ಲಿ ಹನುಮ ಧ್ವಜ ಹಾರಿಸಿದ ನಂತರ ತಾಪಂ ಇಒ ಬಂದರು. ಪಂಚಾಯ್ತಿಗೆ ಅಧಿಕಾರ ಇದೆ. ನಾವು ಸಭೆಯಲ್ಲಿ ಒಪ್ಪಿಗೆ ಕೊಟ್ಟಿದ್ದೇವೆ ಅಂತ ಹೇಳಿದೆವು. ಆ ದಿನವೇ ಪಂಚಾಯ್ತಿ ವಜಾ ಮಾಡಬಹುದಿತ್ತು. ಆಗ ಮಾಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಂತಿ ಸಭೆಗಾಗಿ ಒಂದು ವಾರ ಕಾಲಾವಕಾಶ ಕೇಳಿದೆವು. ಅದಕ್ಕೆ ಅವಕಾಶ ಕೊಡಲಿಲ್ಲ. ರಜಾ ದಿನದಲ್ಲಿ ಬಂದು ಹನುಮ ಬಾವುಟ ತೆಗೆಯುವ ಅವಕಾಶ ಇತ್ತೆ ಎಂದು ಪ್ರಶ್ನೆ ಮಾಡಿದರು.

ಪಂಚಾಯ್ತಿಗೆ ಹೆಚ್ಚಿನ ಅಧಿಕಾರ ಇದೆ ಅಂತೀರಿ. ಇಂತಹ ಅಧಿಕಾರ ಯಾಕೆ ಬೇಕು. ಆದೇಶದ ಪ್ರತಿ ಕೇಳಿದರೆ ಕೊಡಲು ಸಿದ್ಧರಿಲ್ಲ. ಪಂಚಾಯ್ತಿ ಮಟ್ಟದಲ್ಲಿ ಸಭೆ ಮಾಡಿ ಶಾಂತಿಸಭೆ ಯಾಕೆ ಮಾಡಲಿಲ್ಲ. ಎರಡು ಸಭೆಯಲ್ಲಿ ಯಾವ ಧ್ವಜ ಹಾರಿಸಬೇಕು ಎಂದು ಚರ್ಚೆ ಆಗಿಲ್ಲ. ಪಂಚಾಯ್ತಿ ಸಭೆಯಲ್ಲಿ ಅನುಮೋದಿಸಿದ್ದನ್ನ ರದ್ದುಪಡಿಸುವ ಹಕ್ಕು ಪಿಡಿಒಗೆ ಇಲ್ಲ ಎಂದರು.

ಗ್ರಾಮದಲ್ಲಿ ಎಲ್ಲರೂ ಪಕ್ಷಾತೀತವಾಗಿದ್ದೇವೆ. ಹೊರಗಡೆ ರಾಜಕೀಯ ಮಾಡಿದರೂ ಗ್ರಾಮದಲ್ಲಿ ರಾಜಕಾಣ ಮಾಡಲ್ಲ. ನಾವು ಶಿವರಾತ್ರಿಯಂದು ಊರಲ್ಲಿ ದೊಡ್ಡ ಹಬ್ಬ ಮಾಡುತ್ತೇವೆ. ಅದಕ್ಕೆ ಅಡಚಣೆ ಆಗಬಾರದು. ಹೀಗಾಗಿ ಜಿಲ್ಲಾಡಳಿತ ಈ ಕೂಡಲೇ ಗ್ರಾಮದಲ್ಲಿ ಶಾಂತಿ ಸಭೆ ಮಾಡಬೇಕು ಮನವಿ ಮಾಡಿದರು.

ಪಾದಯಾತ್ರೆ ವೇಳೆ ಕಲ್ಲುತೂರಾಟ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

ಮಳವಳ್ಳಿ: ಜಿಲ್ಲಾ ಕುರುಬರ ಸಂಘದ ಸಾರ್ವಜನಿಕ ವಿದ್ಯಾರ್ಥಿನಿಲಯ ಕಟ್ಟಡದ ಮೇಲೆ ಜೆಡಿಎಸ್-ಬಿಜೆಪಿ ಕೆರಗೋಡು ಗ್ರಾಮದಿಂದ ಮಂಡ್ಯದವರೆಗೆ ಆಯೋಜಿಸಿದ್ದ ಪಾದಯಾತ್ರೆ ವೇಳೆಯಲ್ಲಿ ಕಲ್ಲು ತೂರಾಟ ನಡೆಸಿರುವ ಕಿಡಿಗೇಡಿಗಳ ವಿರುದ್ಧ ಪೊಲೀಸ್ ಇಲಾಖೆ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ನಿರ್ದೇಶಕ ಬಿ.ಪುಟ್ಟಬಸವಯ್ಯ ಒತ್ತಾಯಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಕೆರಗೋಡು ಧ್ವಜ ವಿಚಾರವಾಗಿ ನಡೆಸಿದ ಪ್ರತಿಭಟನೆ ರ‍್ಯಾಲಿಯಲ್ಲಿ ಕೆಲವು ಕಿಡಿಗೇಡಿಗಳು ವಿದ್ಯಾರ್ಥಿನಿಲಯದ ಕಟ್ಟಡದ ಮೇಲೆ ಕಲ್ಲು ತೂರಾಟ ನಡೆಸಿ ಗಾಜುಗಳನ್ನು ಹೊಡೆದು ಹಾಕಿ ವಾಹನಗಳನ್ನು ಸುಟ್ಟು ಹಾಕಲು ಪ್ರಯತ್ನಿಸಿರುವುದನ್ನು ಖಂಡಿಸಿದ್ದಾರೆ.ಚಿತ್ರದುರ್ಗದಲ್ಲಿ ನಡೆದ ಶೋಷಿತರ ಜಾಗೃತಿ ಸಮಾವೇಶದ ಯಶಸ್ವಿ ಸಹಿಸದ ಬಿಜೆಪಿ ಮತ್ತು ಜೆಡಿಎಸ್ ಇಂತಹ ಕೃತ್ಯಗಳ ಮೂಲಕ ಅಶಾಂತಿ ಸೃಷ್ಟಿಸಲು ಹೊರಟಿವೆ ಎಂದು ಕಿಡಿಕಾರಿದ್ದಾರೆ.ಬಿಜೆಪಿ ಮುಖಂಡ ಸಿ.ಟಿ.ರವಿ ಹಿಂದುತ್ವವನ್ನು ಗುತ್ತಿಗೆಗೆ ತೆಗೆದುಕೊಂಡ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಹಿಂದುತ್ವದ ಹೆಸರಿನಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿ ಯುವಕರುಗಳನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕೆರಗೋಡು ಪ್ರಕರಣ ಸಂಬಂಧ ಕಲ್ಲು ತೂರಾಟ ನಡೆಸಿ ಹಲ್ಲೆಗೆ ಯತ್ನಿಸಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.