ಸಾರಾಂಶ
ಶಿರಹಟ್ಟಿ: ಜಾತೀಯತೆ, ಮೌಢ್ಯತೆ, ಕಂದಾಚಾರ, ಅಂಧಶ್ರದ್ದೆ, ಶೋಷಣೆ, ಅನೀತಿ, ಅಧರ್ಮ, ಅನ್ಯಾಯ ಮುಂತಾದ ಸಾಮಾಜಿಕ ರೋಗಗಳಿಗೆ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ನೀಡಿರುವ ಸಂದೇಶ ಔಷಧದಂತೆ ಕಾರ್ಯ ಮಾಡುತ್ತದೆ. ಅವರ ಸಂದೇಶಗಳನ್ನು ವಿಶ್ವಕ್ಕೆ ಪರಿಚಯಿಸಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಕರೆ ನೀಡಿದರು.
ಸೋಮವಾರ ಮೇಗೇರಿ ಓಣಿಯ ಕನಕದಾಸ ವೃತ್ತದ ಬಳಿ ಹಮ್ಮಿಕೊಳ್ಳಲಾಗಿದ್ದ ಸಂತ ಶ್ರೇಷ್ಠ ಕವಿ ಕನಕದಾಸರ ಜಯಂತಿಯನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಜನಮಾನಸಕ್ಕೆ ಸಾಹಿತ್ಯದ ಸವಿ ಉಣಬಡಿಸಿದ ಕನಕದಾಸರು ಈ ನಾಡು ಕಂಡ ಅಪರೂಪದ ಸಂತರು ಎಂದು ಬಣ್ಣಿಸಿದರು.
ಅವರು ಶ್ರೇಷ್ಠ ಭಕ್ತರಾಗಿ, ಸಮಾಜ ಸುಧಾರಕರಾಗಿ, ಸಂತರಾಗಿ, ಚಿಂತಕ, ಆತ್ಮಜ್ಞಾನವನ್ನು ಕಂಡ ಮೇರು ಆಧ್ಯಾತ್ಮಿಕ ವ್ಯಕ್ತಿ. ಅವರು ಬಹುಮುಖ ವ್ಯಕ್ತಿತ್ವ ಹೊಂದಿದ್ದರು. ನಮ್ಮ ಬದುಕು ಹಸನುಗೊಳಿಸಲು ಕನಕದಾಸರು ನೀಡಿರುವ ಸಂದೇಶಗಳನ್ನು ಪಾಲಿಸಬೇಕು ಎಂದರು.ದಾಸ ಸಾಹಿತ್ಯದ ಮೂಲಕ ಸಮಾಜದ ಢಾಂಬಿಕ ಆಚರಣೆಗಳನ್ನು ತಿದ್ದಲು ಶ್ರಮಿಸಿದ ಕನಕದಾಸರು ಯಾವುದೇ ಒಂದು ಸಮಾಜದ ಸೀಮಿತ ಸ್ವತ್ತಾಗಿ ಉಳಿಯಬಾರದು. ಸಮಾಜದ ಅಂಕು ಡೊಂಕುಗಳನ್ನು ಓರೆಗಲ್ಲಿಗೆ ಹಚ್ಚಿದ ಕನಕದಾಸರ ಸಂದೇಶಗಳನ್ನು ಇಡೀ ವಿಶ್ವಕ್ಕೆ ಪರಿಚಯಿಸಲು ಆಂದೋಲನ ನಡೆಯಬೇಕು. ಸಮಾಜಕ್ಕೆ ಅನನ್ಯ ಕೊಡುಗೆ ನೀಡಿದ ಕನಕದಾಸರಂತಹ ದಾಸ ಶ್ರೇಷ್ಠರನ್ನು ಸಾರ್ವನಿಕವಾಗಿ ಗೌರವಿಸುವುದು ಹೆಮ್ಮೆಯ ವಿಷಯ ಎಂದರು.
ಜಿಲ್ಲಾ ಮಾಧ್ಯಮಿಕ ಶಾಲಾ ನೌಕರ ಸಂಘದ ಅಧ್ಯಕ್ಷ ಎಂ.ಕೆ. ಲಮಾಣಿ ಮಾತನಾಡಿ, ಸಾಂಸ್ಕೃತಿಕವಾಗಿ ಭದ್ರವಾದ ನೆಲೆಗಟ್ಟನ್ನು ಹೊಂದಿರುವ ಈ ನಾಡಿನಲ್ಲಿ ದಾರ್ಶನಿಕರು, ಸೂಫಿ ಸಂತರು ಹಾಗೂ ಶರಣರು ತಮ್ಮ ವೈಚಾರಿಕ ಚಿಂತನೆಗಳಿಂದ ಸತ್ ಸಂಪ್ರದಾಯವನ್ನು ಬಳುವಳಿಯಾಗಿ ನೀಡಿದ್ದಾರೆ. ಇವರೆಲ್ಲಾ ಜಾತಿ, ಮತ, ಪಂಥಗಳನ್ನು ಮೀರಿದ ಎಲ್ಲ ಮತೀಯ ಬಂಧನಗಳಿಂದ ಪಾರಾಗಿ ಸಾಮಾಜಿಕ ಕಟ್ಟು ಕಟ್ಟಳೆಗಳನ್ನು ಮೆಟ್ಟಿ ನಿಂತವರು ಎಂದು ಹೇಳಿದರು.ಮೂಢನಂಬಿಕೆ, ಮೌಢ್ಯಗಳ ಕುರಿತು ತಮ್ಮ ದಾಸ ಸಾಹಿತ್ಯದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ ಅಳಿಸಿಹಾಕುವಲ್ಲಿ ಶ್ರೇಷ್ಠತೆ ಮೆರೆದ ಹಾಗೂ ಆಧ್ಯಾತ್ಮಿಕ ಅನುಭೂತಿ ನೀಡಿದ ಭಕ್ತ ಕನಕದಾಸರು ಜನರ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ಹೇಳಿದರು.ಶ್ರೀಮಂತಿಕೆಯನ್ನು ತ್ಯಜಿಸಿ ಮನುಕುಲದ ಉದ್ಧಾರಕ್ಕೆ ಶ್ರಮಿಸಿದ ಧೀಮಂತ ವ್ಯಕ್ತಿ ಕನಕದಾಸರ ತತ್ವಾದರ್ಶಗಳು ಸಾರ್ವಕಾಲಿಕ. ಕನಕದಾಸರು ತಮ್ಮ ಬದುಕನ್ನು ಸಮಾಜದ ಒಳಿತಿಗಾಗಿ ಮೀಸಲಿರಿಸಿದ್ದು, ಅವರು ಭಕ್ತಿ ಮಾರ್ಗದಲ್ಲಿ ನಡೆದು ಶ್ರೀ ಹರಿಯನ್ನು ಸೇರಿದರು. ಅವರ ಕೀರ್ತನೆಗಳಲ್ಲಿ ನಮ್ಮ ಸಮಾಜದಲ್ಲಿರುವ ಅಂಕು ಡೊಂಕುಗಳನ್ನು ತಿದ್ದಿಕೊಂಡು ಉತ್ತಮವಾಗಿ ಬದುಕು ಸಾಗಿಸುವ ಬಗ್ಗೆ ತಿಳಿಸಿದ್ದಾರೆ ಎಂದರು.
ಮಾಜಿ ಶಾಸಕ ರಾಮಣ್ಣ ಲಮಾಣಿ, ಹುಮಾಯೂನ್ ಮಾಗಡಿ, ಸಂತೋಷ ಕುರಿ, ಮಂಜುನಾಥ ಘಂಟಿ, ಫಕ್ಕಿರೇಶ ರಟ್ಟಿಹಳ್ಳಿ, ಮಾತನಾಡಿದರು. ಪಪಂ ಅಧ್ಯಕ್ಷೆ ದೇವಕ್ಕ ಗಡಿಮನಿ, ಉಪಾಧ್ಯಕ್ಷೆ ನೀಲವ್ವ ಹುಬ್ಬಳ್ಳಿ, ಹೊನ್ನಪ್ಪ ಶಿರಹಟ್ಟಿ, ಸಮಾಜದ ಅಧ್ಯಕ್ಷ ಹೊನ್ನೇಶ ಪೋಟಿ, ತಹಸೀಲ್ದಾರ್ ಅನಿಲ ಬಡಿಗೇರ, ರೇವಣೆಪ್ಪ ಮನಗೂಳಿ, ಎಸ್.ಎಸ್. ಕಲ್ಮನಿ, ಎಚ್. ನಾಣಕೀ ನಾಯಕ, ಕೆ.ಎ. ಬಳಿಗೇರ, ನಾಗರಾಜ ಲಕ್ಕುಂಡಿ, ಸಂದೀಪ ಕಪ್ಪತ್ತನವರ, ಬಸವರಾಜ ತುಳು, ಪರಮೇಶ ಪರಬ, ಗೂಳಪ್ಪ ಕರಿಗಾರ, ರಾಮಣ್ಣ ಕಂಬಳಿ, ಪರಸು ಡೊಂಕಬಳ್ಳಿ, ಸಿದ್ದರಾಯ ಕಟ್ಟಿಮನಿ, ಯಲ್ಲಪ್ಪ ಇಂಗಳಗಿ, ಸೋಮನಗೌಡ ಮರಿಗೌಡ, ಹನಮಂತ ಗೊಜನೂರ, ಆನಂದ ಮಾಳೆಕೊಪ್ಪ ಮತ್ತಿತರರು ಇದ್ದರು.