ಅಧಿಕಾರಿಗಳು ಜನರ ಸಮಸ್ಯೆಗೆ ಧ್ವನಿಯಾಗಲಿ

| Published : Jul 13 2024, 01:32 AM IST

ಸಾರಾಂಶ

ಜನಸಾಮಾನ್ಯರು ತಮ್ಮ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಿಕೊಳ್ಳಲು ಜನಸ್ಪಂದನ ಒಂದು ಉತ್ತಮ ಅವಕಾಶವಾಗಿದೆ. ಇದನ್ನು ಜನರು ಸದುಪಯೋಗ ಮಾಡಿಕೊಳ್ಳಬೇಕು

ಕನ್ನಡಪ್ರಭ ವಾರ್ತೆ ಕೋಲಾರಅಬಕಾರಿ ಅಧಿಕಾರಿಗಳು ಕೇವಲ ಮದ್ಯ ಮಾರಾಟಕ್ಕೆ ಅನುಮತಿ ನೀಡುವುದಕಷ್ಟೇ ಸೀಮಿತವಾಗಿದ್ದಾರೆ, ಗ್ರಾಮೀಣ ಪ್ರದೇಶದ ಚಿಲ್ಲರೆ ಅಂಗಡಿಗಳಲ್ಲಿ ಮದ್ಯ ಮಾರಾಟವಾಗುತ್ತಿದ್ದರೂ ಅಧಿಕಾರಿಗಳು ಮಾತ್ರ ತಮಗೆ ಸಂಬಂಧವಿಲ್ಲದ ರೀತಿಯಲ್ಲಿ ಕೈಕಟ್ಟಿ ಕುಳಿತಿದ್ದಾರೆ. ಇದು ಕೂಡಲೇ ಸರಿಹೋಗಬೇಕು ಇಲ್ಲದೇ ಹೋದರೆ ಮುಂದಿನ ಪರಿಣಾಮ ಬೇರೆ ರೀತಿಯಲ್ಲಿ ಇರುತ್ತೇ ಎಂದು ಅಬಕಾರಿ ಅಧಿಕಾರಿಗಳಿಗೆ ಶಾಸಕ ಕೊತ್ತೂರು ಜಿ.ಮಂಜುನಾಥ್ ಎಚ್ಚರಿಸಿದರು. ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದಿಂದ ಜನಸ್ಪಂದನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿನ ಮದ್ಯವು ಆಂಧ್ರಪ್ರದೇಶ ಮತ್ತು ತಮಿಳುನಾಡಿಗೆ ಸರಬರಾಜು ಆಗಿದೆ ಎಂದು ಪಕ್ಕದ ರಾಜ್ಯಗಳ ಜಿಲ್ಲಾಧಿಕಾರಿ, ಎಸ್ಪಿಗಳು ಪೋನ್ ಮಾಡತ್ತಾರೆ ಎಂದರೆ ಇಲ್ಲಿನ ಅಧಿಕಾರಿಗಳ ಕೆಲಸ ಏನು. ನಿಮ್ಮನ್ನು ಏನು ಮಾಡಬೇಕು ಅಂತ ನನಗೆ ಗೊತ್ತಿದೆ ಎಂದರು.ಜನಸ್ಪಂದನ ಬಳಸಿಕೊಳ್ಳಿ

ಇವತ್ತಿನ ಜನಸ್ಪಂದನ ಕಾರ್ಯಕ್ರಮದ ಬಗ್ಗೆ ಗ್ರಾಮೀಣ ಪ್ರದೇಶಗಳಲ್ಲಿ ಪಂಚಾಯತಿ ಪಿಡಿಒ, ಕಾರ್ಯದರ್ಶಿಗಳು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಸರಿಯಾಗಿ ಮಾಹಿತಿ ನೀಡಿಲ್ಲ, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ತಂಡದ ಮುತುವರ್ಜಿಯಿಂದ ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡಿದ್ದಕ್ಕಾಗಿ ಇವತ್ತು ಇಷ್ಟು ಜನ ಬಂದಿದ್ದಾರೆ. ಜನಸಾಮಾನ್ಯರು ತಮ್ಮ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಿಕೊಳ್ಳಲು ಜನಸ್ಪಂದನ ಒಂದು ಉತ್ತಮ ಅವಕಾಶವಾಗಿದೆ. ಇದನ್ನು ಜನರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.ಸಮಸ್ಯೆಗೆ ಪರಿಹಾರ ಕಲ್ಪಿಸಿ

ಸಾರ್ವಜನಿಕರ ಸಮಸ್ಯೆ ಪರಿಹರಿಸಲು ಕಾಂಗ್ರೆಸ್ ಸರಕಾರ ಪ್ರಾರಂಭಿಸಿದ ಜನಸ್ಪಂದನ ಕಾರ್ಯಕ್ರಮದ ಮೂಲ ಉದ್ದೇಶ ಜನರನ್ನು ತಲುಪಿ ಅವರ ಸಮಸ್ಯೆಗಳನ್ನು ನಿವಾರಿಸುವುದಾಗಿದೆ ಮನವಿಗಳು ಕೇವಲ ಸಭೆಗೆ ಸೀಮಿತವಾಗದೇ ಅಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಒತ್ತು ನೀಡಬೇಕು, ನಾನು ಶಾಸಕನಾಗಿ ತಾಲೂಕಿನ ಜನರ ಕೆಲಸಗಾರನಾಗಿ ಸೇವೆ ಮಾಡಲು ಬಂದಿದ್ದೇನೆ. ಜವಾಬ್ದಾರಿಯಿಂದ ಅವರ ಸೇವೆ ಮಾಡತ್ತೇನೆ. ಇದಕ್ಕೆ ಅಧಿಕಾರಿಗಳು ಸಹ ಕೈ ಜೋಡಿಸಬೇಕು ಎಂದರು.ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ, ಕಳೆದ ಬಾರಿ ಜನವರಿಯಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಸುಮಾರು ೮೮ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ, ಪ್ರತಿ ಇಲಾಖೆಯ ಪ್ರಗತಿಯಲ್ಲಿ ಕೋಲಾರ ಜಿಲ್ಲೆ ಮೊದಲ ಸ್ಥಾನದಲ್ಲಿ ಇದ್ದು ತಾಲೂಕಿನ ವಕ್ಕಲೇರಿ ಹೋಬಳಿ ಪ್ರಥಮ ಸ್ಥಾನದಲ್ಲಿ ಇದೆ ಕೆಲಸ ಮಾಡಿಸುವ ಮತ್ತು ಮಾಡುವ ಜವಾಬ್ದಾರಿ ಅಧಿಕಾರಿ ಮತ್ತು ಜನಪ್ರತಿನಿಧಿಗಳ ಮೇಲೆ ಇದೆ ಕಾಂಗ್ರೆಸ್ ಸರಕಾರ ಬಂದ ನಂತರ ವಿಶೇಷ ಯೋಜನೆಗಳ ಮೂಲಕ ಜನಸಾಮಾನ್ಯರ ಮನೆ ಬಾಗಿಲಿಗೆ ಸರಕಾರ ಎಂಬುದನ್ನು ನಿರೂಪಿಸಿದ್ದಾರೆ ಎಂದು ತಿಳಿಸಿದರು.ತಾಲೂಕಿಗೆ ವಿಶೇಷ ಅನುದಾನ

ಜನಸ್ಪಂದನ ಕಾರ್ಯಕ್ರಮದಿಂದಾಗಿ ಸಾರ್ವಜನಿಕರ ಬಹುತೇಕ ಸಮಸ್ಯೆಗಳು ಸ್ಥಳದಲ್ಲಿಯೇ ಇತ್ಯರ್ಥವಾಗುತ್ತಿವೆ ಜೊತೆಗೆ ಜಿಲ್ಲೆಯ ಮತ್ತು ತಾಲೂಕು ಅಭಿವೃದ್ಧಿಗೆ ವಿಶೇಷ ಅನುದಾನ ಸಹ ಬಿಡುಗಡೆ ಮಾಡಿಸುವ ಕೆಲಸವನ್ನು ಕ್ಷೇತ್ರದ ಶಾಸಕರ ನೇತೃತ್ವದಲ್ಲಿ ನಡೆದಿದೆ ಎಂದರು.ತಹಸೀಲ್ದಾರ್ ಹರ್ಷವರ್ಧನ್ ಮಾತನಾಡಿ, ಕಳೆದ ಬಾರಿ ನಡೆದ ಜನಸ್ಪಂದನ ಸಭೆಯಲ್ಲಿ ೮೮ ಅರ್ಜಿಗಳಿಗೂ ನ್ಯಾಯ ಕೊಡಿಸಲಾಗಿದೆ ಜಿಲ್ಲಾಡಳಿತದ ಇ ಅಫೀಸ್ ನಿಂದ ಬಂದ ೩೪೦೪ ಅರ್ಜಿಗಳಲ್ಲಿ ೨೯೦೦ ಸಮಸ್ಯೆಗಳಿಗೆ ಪರಿಹಾರ ನೀಡಲಾಗಿದೆ. ಸಕಾಲದಲ್ಲಿ ಸುಮಾರು ೪೩೯೩ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು ರಾಜ್ಯದಲ್ಲಿ ಕೋಲಾರ ಜಿಲ್ಲೆ ಮೊದಲ ಸ್ಥಾನದಲ್ಲಿ ಇದೆ ಎಂದರುಎಸ್‌ಪಿ ಬಿ.ನಿಖಿಲ್, ಎಡಿಸಿ ಮಂಗಳ, ಎಸಿ ಡಾ.ಮೈತ್ರಿ, ಡಿವೈಎಸ್ಪಿ ನಾಗ್ತೆ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಪಂ ಅಧ್ಯಕ್ಷರು ಇದ್ದು ಸುಮಾರು ನೂರಕ್ಕೂ ಹೆಚ್ಚು ಅರ್ಜಿಗಳನ್ನು ಜನಸ್ಪಂದನ ಸಭೆಯಲ್ಲಿ ಸ್ವೀಕರಿಸಲಾಯಿತು.