ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸಲಿ: ಡಾ. ಚಂದ್ರು ಲಮಾಣಿ

| Published : Jun 21 2024, 01:04 AM IST

ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸಲಿ: ಡಾ. ಚಂದ್ರು ಲಮಾಣಿ
Share this Article
  • FB
  • TW
  • Linkdin
  • Email

ಸಾರಾಂಶ

ಲಕ್ಷ್ಮೇಶ್ವರ ತಾಪಂ ಕಾರ್ಯಾಲಯದಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಶಾಸಕ ಡಾ. ಚಂದ್ರು ಲಮಾಣಿ ಅವರು ಅಧಿಕಾರಿಗಳಿಗೆ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು.

ಲಕ್ಷ್ಮೇಶ್ವರ: ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸಿದಾಗ ಮಾತ್ರ ಜನರ ಸಮಸ್ಯೆಗಳು ಪರಿಹಾರವಾಗಲು ಸಾಧ್ಯ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಪಟ್ಟಣದ ತಾಪಂ ಕಾರ್ಯಾಲಯದಲ್ಲಿ ಬುಧವಾರ ಜರುಗಿದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಸಭೆ ಆರಂಭ ಆಗುತ್ತಿದ್ದಂತೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರೇವಣಪ್ಪ ಮನಗೂಳಿ ತಮ್ಮ ಇಲಾಖೆಗೆ ಸಂಬಂಧಿಸಿದ ಮಾಹಿತಿ ನೀಡಲು ಮುಂದಾದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ಲಮಾಣಿ, ತಾಲೂಕಿನ ಎಲ್ಲ ರೈತರಿಗೆ ಸರಿಯಾಗಿ ಬೆಳೆ ಹಾನಿ ಪರಿಹಾರ ಮತ್ತು ಬೆಳೆ ವಿಮೆ ಬರುತ್ತಿಲ್ಲ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸಿಲ್ಲ. ಎಲ್ಲ ರೈತರ ಹೊಲಗಳಿಗೆ ಭೇಟಿ ನೀಡಿ ಬೆಳೆ ಬೆಳೆದಿದ್ದರ ಕುರಿತು ಜಿಪಿಎಸ್ ಮಾಡಿ ಪರಿಹಾರ ನೀಡಲಾಗುತ್ತಿದೆ ಎಂದು ಹೇಳುತ್ತಾರೆ. ತಾಲೂಕಿನ ಗ್ರಾಮವೊಂದರಲ್ಲಿ ಕಳೆದ ೨೫ ವರ್ಷಗಳ ಹಿಂದೆ ಮಾರಾಟವಾದ ಜಮೀನಿನಲ್ಲಿ ಈಗಾಗಲೇ ೧೫೦ ಮನೆಗಳು ನಿರ್ಮಾಣಗೊಂಡಿವೆ. ಆದರೂ ಸಂಬಂಧಿಸಿದ ರೈತರು ಈಗಲೂ ಅದನ್ನು ಹೊಲ ಎಂದು ತೋರಿಸಿ, ಸರ್ಕಾರ ಎಲ್ಲ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಇದು ಅಧಿಕಾರಿಗಳ ಕಾರ್ಯನಿರ್ವಹಣೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಿದರು. ಆಗ ಸಭೆಯಲ್ಲಿ ಮೌನ ಆವರಿಸಿತು.

ಗೊಬ್ಬರವನ್ನು ಸೊಸೈಟಿಗಳ ಮೂಲಕ ಮಾರಾಟ ಮಾಡಲು ವ್ಯವಸ್ಥೆ ಮಾಡಬೇಕು ಎಂದು ಶಾಸಕ ಡಾ. ಲಮಾಣಿ ಸೂಚಿಸಿದರು.

ಆನಂತರ ನಡೆದ ಚರ್ಚೆಯಲ್ಲಿ ಪಶು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಎನ್.ಎ. ಹವಳದ ಮಾಹಿತಿ ನೀಡಿ, ಸದ್ಯ ತಾಲೂಕಿನಲ್ಲಿ ಮೇವಿನ ಕೊರತೆ ಇಲ್ಲ. ಈಗಾಗಲೇ ಒಣ ಮೇವಿನ ದಾಸ್ತಾನು ಮಾಡಲಾಗಿದೆ. ಯಾವ ರೈತರೂ ಅದನ್ನು ಖರೀದಿಸಲು ಮುಂದೆ ಬರುತ್ತಿಲ್ಲ. ಅಲ್ಲದೆ ಈಗಾಗಲೇ ಮೇವಿನ ಬಿತ್ತನೆ ಬೀಜಗಳನ್ನು ರೈತರಿಗೆ ವಿತರಿಸಲಾಗಿದೆ ಎಂದರು.

ನರೇಗಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯಿಂದ ಲಭ್ಯವಾಗುವ ಅನುದಾನದಲ್ಲಿ ಸುಸಜ್ಜಿತ ಅಂಗನವಾಡಿ ಕಟ್ಟಡ ಕಟ್ಟಿಸುವುದರೊಂದಿಗೆ ಕಾಂಪೌಂಡ್ ಮತ್ತು ಬೇಲಿ ಅಳವಡಿಸಬೇಕು ಎಂದು ಹೇಳಿದ ಶಾಸಕ ಲಮಾಣಿ ಅವರು, ಅಂಗನವಾಡಿಗಳಿಗೆ ಪೂರೈಕೆ ಆಗುತ್ತಿರುವ ಆಹಾರ ಪದಾರ್ಥ ಕಳಪೆ ಇದ್ದು ಮಕ್ಕಳು ಸೇವಿಸುತ್ತಿಲ್ಲ ಎಂಬ ಆರೋಪಗಳು ಇವೆ. ಈ ಕುರಿತು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.

ತಾಲೂಕಿನಲ್ಲಿ ಶೇ. ೯೮ರಷ್ಟು ಜೆಜೆಎಂ ಕಾಮಗಾರಿ ಮುಗಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ ಇನ್ನೂ ಜನತೆಗೆ ಕುಡಿಯಲು ನೀರು ಸಿಗುತ್ತಿಲ್ಲ. ಕಾರಣ ಅಧಿಕಾರಿಗಳು ಈ ನಿಟ್ಟಿನಲ್ಲಿ ಯೋಗ್ಯ ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಿದ ಅವರು, ಪಿಎಂಜಿಎಸ್‌ವೈ ಇಲಾಖೆ ವತಿಯಿಂದ ನಡೆದ ರಸ್ತೆ ಕಾಮಗಾರಿಗಳ ಬಗ್ಗೆ ಸಾರ್ವಜನಿಕರು ತಕರಾರು ಮಾಡುತ್ತಿದ್ದಾರೆ. ಹೀಗಾಗಿ ಅಧಿಕಾರಿಗಳು ಕೆಲಸದ ಕಡೆ ಗಮನ ಹರಿಸಬೇಕು ಎಂದರು.

ತಹಸೀಲ್ದಾರ್ ವಾಸುದೇವಸ್ವಾಮಿ, ತಾಪಂ ನೋಡಲ್ ಅಧಿಕಾರಿ ಎಂ.ಎ. ಚಳಗೇರಿ, ತಾಪಂ ಇಒ ಕೃಷ್ಣಪ್ಪ ಧರ್ಮರ, ಎಲ್ಲ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.