ಸಾರಾಂಶ
ಹೊನ್ನಾವರ: ಅಧಿಕಾರಿಗಳು ಜವಾಬ್ದಾರಿ ಅರಿತು ಕೆಲಸ ಮಾಡಬೇಕೆಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚಿಸಿದರು.
ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ಮಂಗಳವಾರ ಸಾಯಂಕಾಲ ಬಿಜೆಪಿ ಹೊನ್ನಾವರ ಮಂಡಲದ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಇತ್ತೀಚೆಗೆ ಗುಂಡಬಾಳ ನೆರೆಪಿಡೀತ ಪ್ರದೇಶದ ಕಾಳಜಿ ಕೇಂದ್ರಕ್ಕೆ ಎಸಿಯವರು ಭೇಟಿ ನೀಡಿದಾಗ ನೆರೆ ಸಂತ್ರಸ್ತರು ಜನರೇಟರ್ ವ್ಯವಸ್ಥೆ ಅವಶ್ಯಕತೆ ಎಂದು ಕೇಳಿದ್ದರು. ಆದರೆ ಎಸಿಯವರು ಕ್ಯಾಂಡಲ್ ನೀಡುತ್ತೇನೆ ಎಂದು ಸ್ಪಂದಿಸಬೇಕಾದ ಅಧಿಕಾರಿಗಳು ಬೇಜವಾಬ್ದಾರಿ ತನದಿಂದ ವರ್ತಿಸುವುದು ಸರಿಯಾದ ಕ್ರಮವಲ್ಲ. ಕಾನೂನು ಎಲ್ಲರಿಗೂ ಒಂದೇ. ಮಾನವೀಯತೆಯಿಂದ ಸ್ಪಂದಿಸಿ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ಸಂದೇಶ ನೀಡಿದರು.ಮಾಜಿ ಶಾಸಕ ಸುನೀಲ್ ನಾಯ್ಕ ಮಾತನಾಡಿ, ಸರ್ಕಾರ ಇಲ್ಲದಿದ್ದರೂ ಕಾರ್ಯಕರ್ತರು ಗೆಲುವಿಗೆ ಶ್ರಮ ಪಟ್ಟಿದ್ದಾರೆ. ಅವರಿಗೆ ತೊಂದರೆ ಆದಾಗ ರಕ್ಷಣೆ ಅಗತ್ಯ. ನಮ್ಮ ಸರ್ಕಾರದ ಅಧಿಕಾರದಿಲ್ಲದಿರುವುದರಿಂದ ನಮ್ಮ ಕಾರ್ಯಕರ್ತರ ಮೇಲೆ ಇಲ್ಲಿನ ಸಚಿವರು ಸುಳ್ಳು ದೂರು ದಾಖಲಿಸುವ ಕೆಲಸ ಮಾಡಿದ್ದಾರೆ. ಮನೆಯಲ್ಲಿರುವ ಮಹಿಳೆಯ ಮೇಲೂ ಕೇಸ್ ದಾಖಲಿಸುವ ಕೆಲಸ ಆಗಿದೆ. ಕಳೆದೊಂದು ವರ್ಷದಿಂದ ನಿರಂತರ ಇಂತಹ ಪ್ರಕರಣ ನಡೆಯುತ್ತಿದೆ. ಸೂಕ್ಷ್ಮತೆಯಿಂದ ಗಮನಿಸಿ ಮುಂದಿನ ಬಾರಿ ಬರುವುದು ನಾವೇ ಗೆಲ್ಲುವುದು ಶತಸಿದ್ಧ. ಆಗ ಕರ್ಮ ರಿಟರ್ನ್ ಆಗುತ್ತದೆ ಎಂದು ಪರೋಕ್ಷವಾಗಿ ಟಾಂಗ್ ನೀಡಿದರು.
ಮಾಜಿ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಬಿಜೆಪಿಗೆ ಕಾರ್ಯಕರ್ತರೆ ಆಸ್ತಿ. ಅವರ ಪರಿಶ್ರಮ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನಪ್ರಿಯತೆ, ಅಭಿವೃದ್ಧಿ ಕಾರ್ಯಕ್ರಮಗಳು ಬಿಜೆಪಿ ಅಭ್ಯರ್ಥಿ ಗೆಲುವಿಗೆ ಕಾರಣವಾಗಿದೆ. ನಮ್ಮನ್ನು ಗೆಲ್ಲಿಸಲು ಶ್ರಮಿಸುವ ಕಾರ್ಯಕರ್ತರನ್ನು ಎಂದು ಕೈಬಿಡಬಾರದು. ಅವರನ್ನು ರಕ್ಷಣೆ ಮಾಡುವುದು ನಮ್ಮ ಹೊಣೆ ಎಂದರು.ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ, ಮಾಜಿ ಶಾಸಕ ಶಿವಾನಂದ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಕರ್ಕಿ ಮಾತನಾಡಿದರು.
ಬಿಜೆಪಿ ಮುಖಂಡರಾದ ಗೋವಿಂದ ನಾಯ್ಕ, ವೆಂಕಟೇಶ ನಾಯ್ಕ, ಉಮೇಶ್ ನಾಯ್ಕ, ಎಂ.ಜಿ. ನಾಯ್ಕ,ರಾಜು ಬಂಢಾರಿ, ವಿನೋದ್ ನಾಯ್ಕ ರಾಯಲ್ ಕೇರಿ, ಹೇಮಂತ್ ಗಾಂವ್ಕರ್, ಜಿ.ಜಿ. ಶಂಕರ್, ಎಂ.ಜಿ. ಭಟ್ಟ, ಜೆಡಿಎಸ್ ಮುಖಂಡರಾದ ಸೂರಜ್ ನಾಯ್ಕ ಸೋನಿ, ಟಿ.ಟಿ. ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.ಬಿಜೆಪಿ ಮಂಡಲಾಧ್ಯಕ್ಷ ಮಂಜುನಾಥ ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣಪತಿ ಗೌಡ ನಿರ್ವಹಿಸದರು. ಯೋಗೇಶ್ ಮೇಸ್ತ ವಂದಿಸಿದರು.