ಸಾರಾಂಶ
ಗ್ಯಾರಂಟಿಗಳ ಕುರಿತು ಟೀಕೆ ಮಾಡುತ್ತಿದ್ದವರು, ಜಾರಿ ಮಾಡಿದರೆ ದಿವಾಳಿಯಾಗುತ್ತಾರೆ ಎಂದು ಹಿಯಾಳಿಸುತ್ತಿದ್ದವರು ಕೇಳಿಸಿಕೊಳ್ಳಿ, ತಲಾ ಆದಾಯದಲ್ಲಿ ಕರ್ನಾಟಕವೇ ಟಾಪ್. ನಮ್ಮ ರಾಜ್ಯದ ಜನರ ತಲಾ ಆದಾಯ ದೇಶದಲ್ಲಿಯೇ ನಂ.1 ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕನ್ನಡಪ್ರಭ ವಾರ್ತೆ ಕೊಪ್ಪಳ
ಗ್ಯಾರಂಟಿಗಳ ಕುರಿತು ಟೀಕೆ ಮಾಡುತ್ತಿದ್ದವರು, ಜಾರಿ ಮಾಡಿದರೆ ದಿವಾಳಿಯಾಗುತ್ತಾರೆ ಎಂದು ಹಿಯಾಳಿಸುತ್ತಿದ್ದವರು ಕೇಳಿಸಿಕೊಳ್ಳಿ, ತಲಾ ಆದಾಯದಲ್ಲಿ ಕರ್ನಾಟಕವೇ ಟಾಪ್. ನಮ್ಮ ರಾಜ್ಯದ ಜನರ ತಲಾ ಆದಾಯ ದೇಶದಲ್ಲಿಯೇ ನಂ.1 ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಕೊಪ್ಪಳದಲ್ಲಿ ಸೋಮವಾರ ₹2 ಸಾವಿರ ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಕಳೆದ ಚುನಾವಣೆಯಲ್ಲಿ ಗ್ಯಾರಂಟಿಗಳನ್ನು ಘೋಷಣೆ ಮಾಡಿದಾಗ ಅವುಗಳನ್ನು ಜಾರಿ ಮಾಡಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿಯ ನಾಯಕರು ಹೇಳಿದ್ದರು. ಅದಾದ ಮೇಲೆ ಸರ್ಕಾರ ಅಧಿಕಾರಕ್ಕೆ ಬಂದಾಗ ಜಾರಿ ಮಾಡಿದರೆ ದಿವಾಳಿಯಾಗುತ್ತದೆ ಎಂದು ಹೀಯಾಳಿಸಿದ್ದರು. ಆದರೆ, ನಾವು ನುಡಿದಂತೆ ನಡೆದಿದ್ದೇವೆ, ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಇದಕ್ಕಾಗಿ ಇದುವರೆಗೂ ಒಂದು ಲಕ್ಷ ಕೋಟಿಗೂ ಅಧಿಕ ಹಣ ವ್ಯಯ ಮಾಡಿದ್ದೇವೆ. ಅಷ್ಟೇ ಅಲ್ಲ, ಅಭಿವೃದ್ಧಿಯನ್ನು ಸಹ ನಿಲ್ಲಿಸಿಲ್ಲ. ರಾಜ್ಯಾದ್ಯಂತ ಪ್ರತಿ ಜಿಲ್ಲೆಯಲ್ಲಿಯೂ ಸಾವಿರಾರು ಕೋಟಿ ರುಪಾಯಿಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇವೆ. ಬೇಕಿದ್ದರೆ, ಬಿಜೆಪಿ ಮತ್ತು ಜೆಡಿಎಸ್ ನಾಯಕರು ಬಂದು ಇದನ್ನು ನೋಡಲಿ ಎಂದು ಆಹ್ವಾನ ನೀಡಿದರು.ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಜಾರಿಯಿಂದ ಜನರ ಆರ್ಥಿಕಮಟ್ಟ ಸುಧಾರಣೆಯಾಗಿದೆ. ದೇಶದಲ್ಲಿಯೇ ರಾಜ್ಯದ ಜನರ ತಲಾ ಆದಾಯ ನಂ.1 ಆಗಿದೆ ಎನ್ನುವುದೇ ಇದನ್ನು ಹೇಳುತ್ತದೆ ಎಂದು ಹೆಮ್ಮೆಯಿಂದ ಹೇಳಿದರು.
ಬಿಜೆಪಿ ಮತ್ತು ಜೆಡಿಎಸ್ ನಾಯಕರು ಎಲ್ಲಿಯಾದರೂ ಚರ್ಚೆಗೆ ಬರಲಿ, ವೇದಿಕೆ ಸಿದ್ಧ ಮಾಡಲಿ, ಲೆಕ್ಕ ಕೊಡಲು ನಾನು ಈಗಲೂ ಸಿದ್ಧನಿದ್ದೇನೆ ಎಂದು ಸವಾಲು ಹಾಕಿದರು.ಜಿಲ್ಲೆಗೊಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ:
ರಾಜ್ಯಾದ್ಯಂತ ಈಗಾಗಲೇ 22 ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಪ್ರಾರಂಭಿಸಿದ್ದೇವೆ. ಅದರಲ್ಲಿ ಕೆಲವೊಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಇವೆ. ಈಗ ಕೊಪ್ಪಳದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದು, ಮುಂದಿನ ದಿನಗಳಲ್ಲಿ ಪ್ರತಿ ಜಿಲ್ಲೆಯಲ್ಲಿಯೂ ಮೆಡಿಕಲ್ ಕಾಲೇಜು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುತ್ತೇವೆ ಎಂದು ಭರವಸೆ ನೀಡಿದರು. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಪ್ರತಿ ವರ್ಷ 5 ಸಾವಿರ ಕೋಟಿ ನೀಡುತ್ತಿದ್ದೇವೆ. ಈಗಾಗಲೇ 13 ಸಾವಿರ ಕೋಟಿ ರುಪಾಯಿ ನೀಡಲಾಗಿದೆ. ರಾಜ್ಯಾದ್ಯಂತ 500 ಕೋಟಿಗೂ ಅಧಿಕ ಮಹಿಳೆಯರು ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಮಾಡಿದ್ದಾರೆ. ಇದು ಸಹ ಗಿನ್ನಿಸ್ ದಾಖಲೆಗೆ ಸೇರಿದೆ ಎಂದರು.(ಬಾಕ್ಸ್):
ಕೊಪ್ಪಳದ ಋಣ ತೀರಿಸುತ್ತೇನೆ:ಕೊಪ್ಪಳಕ್ಕೆ ಬಂದಾಗಲೆಲ್ಲ ಮೈಸೂರಿಗೆ ಹೋದಷ್ಟೇ ಖುಷಿಯಾಗುತ್ತದೆ. 1991ರಲ್ಲಿ ಲೋಕಸಭೆಗೆ ನಾನು ಇಲ್ಲಿ ಸ್ಪರ್ಧೆ ಮಾಡಿದಾಗ ಜನರು ಅಪಾರ ಪ್ರೀತಿ ತೋರಿಸಿದ್ದರು. ಹೀಗಾಗಿ, ಕೊಪ್ಪಳ ಜನರ ಋಣ ನನ್ನ ಮೇಲಿದೆ. ಈಗ ಸ್ವಲ್ಪ ತೀರಿಸಿದ್ದೇನೆ, ಇನ್ನು ಸ್ವಲ್ಪ ತೀರಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.6ಕೆಪಿಎಲ್21
ಕೊಪ್ಪಳದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಚಾಲನೆ ನೀಡಿದರು. ಜಿಎಸ್‌ಟಿ ವಿರೋಧ ಮಾಡಿದವರು ಬಿಜೆಪಿಯವರು. ನಂತರ ತಾವು ಅಧಿಕಾರಕ್ಕೆ ಬಂದ ತಕ್ಷಣ ಜಾರಿ ಮಾಡಿದರು. ಆದರೆ, ಜಾರಿ ಮಾಡುವ ವೇಳೆಯಲ್ಲಿ ಮಿತಿಮೀರಿ ಹೊರೆಹಾಕಿದರು. ಈಗ ಎಂಟು ವರ್ಷದ ಬಳಿಕ ಇಳಿಕೆ ಮಾಡಿದ್ದಾರೆ. ಇದರಿಂದ ರಾಜ್ಯಕ್ಕೆ ವಾರ್ಷಿಕ ಹದಿನೈದು ಸಾವಿರ ಕೋಟಿ ಹೊರೆಯಾಗುತ್ತಿದೆ. ಕೇಂದ್ರ ಸರ್ಕಾರ ಸೆಸ್ ಮತ್ತು ಸರ್ಚಾರ್ಜ್ ಮೂಲಕ ಅದನ್ನು ಭರಿಸಿಕೊಳ್ಳುತ್ತದೆ. ಇದರಲ್ಲಿ ರಾಜ್ಯಕ್ಕೆ ಏನೂ ನೀಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.15ನೇ ಹಣಕಾಸು ಆಯೋಗದಿಂದಲೂ ರಾಜ್ಯದಲ್ಲಿ ಭಾರಿ ಅನ್ಯಾಯವಾಗುತ್ತಿದೆ. ಇದನ್ನು ಸರಿಪಡಿಸುವಂತೆ ಆಗ್ರಹಿಸಿದರೂ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಹಣ ನೀಡುವುದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರೂ ಕೊಡಲಿಲ್ಲ. ಆದರೂ ರಾಜ್ಯ ಸರ್ಕಾರ ಜಾರಿ ಮಾಡುತ್ತಿದೆ. ಕೃಷ್ಣಾ ಮೇಲ್ದಂಡೆ ಯೋಜನೆಗಳ ಜಾರಿಗೆ ₹70-80 ಸಾವಿರ ಕೋಟಿ ವೆಚ್ಚ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದರು.