ಸಾರಾಂಶ
ಕನ್ನಡಪ್ರಭ ವಾರ್ತೆ ಶಹಾಪುರ
ಸಮಾಜದಲ್ಲಿರುವ ಎಲ್ಲ ಸಂಘ-ಸಂಸ್ಥೆಗಳು ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಯಾವುದೇ ಸಂಘ-ಸಂಸ್ಥೆಗಳು ದೈನಂದಿನ ಚಟುವಟಿಕೆಗಳೊಂದಿಗೆ ಸಮಾಜಮುಖಿಯಾಗಿ ಕೆಲಸ ಮಾಡಿದರೆ ಸಮಾಜದಲ್ಲಿ ಉತ್ತಮ ಏಳಿಗೆ ಕಾಣಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.ನಗರದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ನಡೆದ ಚಿರಂಜೀವಿ ಸಾಂಸ್ಕೃತಿಕ ಸಾಮಾಜಿಕ ಕಲಾ ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿ ಅವರು ಮಾತನಾಡಿದರು.
ಜನರ ಎಲ್ಲ ಕೆಲಸ ಕಾರ್ಯಗಳು ಸರಕಾರದಿಂದಲೇ ನಿರೀಕ್ಷಿಸುವುದು ಅಸಾಧ್ಯ. ಇಂತಹ ಸ್ವಯಂ ಸೇವಾ ಸಂಸ್ಥೆಗಳಿಂದ ಕೂಡ ಸಮಾಜಮುಖಿಯಾದ ಕೆಲಸಗಳು, ಸಾಂಸ್ಕೃತಿಕ ಚಟುವಟಿಕೆಗಳು ನಡೆಸುತ್ತಾ, ಬಂದರೆ ಸಾಂಸ್ಕೃತಿಕ ನಾಡನ್ನು ಕಟ್ಟಲು ಸಾಧ್ಯವಾಗುತ್ತದೆ. ಒಳ್ಳೆ ಮತ್ತು ಸಮಾಜಮುಖಿ ಕಾರ್ಯಕ್ಕೆ ಸದಾ ಸಹಕಾರ ನೀಡುವುದಾಗಿ ಅವರು ತಿಳಿಸಿದರು.ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ಮಾತನಾಡಿ, ಸಂಘ-ಸಂಸ್ಥೆಗಳು ರಚನೆ ಮಾಡಿದ ನಂತರ ಅವುಗಳ ಮೂಲಕ ಸಮಾಜಮುಖಿ ಕೆಲಸವಾಗಬೇಕು. ಇದೊಂದು ನಿಸ್ವಾರ್ಥ ಸೇವೆ. ಇದಕ್ಕೆ ತಾಳ್ಮೆ, ಸಹಕಾರ ಮನೋಭಾವನೆ ಬಹಳ ಮುಖ್ಯ. ಈ ಸಂಸ್ಥೆ ಹೆಮ್ಮರವಾಗಿ ಬೆಳೆಯಲಿ ಎಂದರು.
ಫಕೀರೇಶ್ವರ ಮಠದ ಪೀಠಾಧಿಪತಿ ಗುರುಪಾದ ಮಹಾಸ್ವಾಮಿಗಳು ಮಾತನಾಡಿ, ಸಂಸ್ಥೆಗಳ ಮೂಲಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಮೂಲಕ ಸರ್ಕಾರ ಮತ್ತು ಜನರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಆ ಸಂಸ್ಥೆಗೆ ಒಂದು ಒಳ್ಳೆಯ ಹೆಸರು ಬರುತ್ತದೆ. ಆ ನಿಟ್ಟಿನಲ್ಲಿ ಸಂಸ್ಥೆ ಕಾರ್ಯಗಳು ಸಾಗಲಿ ಎಂದು ಶುಭ ಹಾರೈಸಿದರು.ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ, ಕರವೇ ರಾಜ್ಯ ಉಪಾಧ್ಯಕ್ಷ ರಾಜಶೇಖರ್ ಪಾಟೀಲ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಡಾ. ರವೀಂದ್ರನಾಥ್ ಹೊಸಮನಿ, ಕೋಲಿ ಸಮಾಜದ ಹಿರಿಯ ಮುಖಂಡ ಅಯ್ಯಣ್ಣ ಕನ್ಯಾಕೋಳೂರು, ನೂತನ ಸಂಸ್ಥೆಯ ಅಧ್ಯಕ್ಷ ವೆಂಕಟೇಶ್ ಬೋನರ್, ಶರಣು ಕಾಡಮಗೇರ, ಮಲ್ಲಯ್ಯ ಸ್ವಾಮಿ ಇಟಿಗಿ, ಮಾರುತಿ ಚಂಡು ಇತರರಿದ್ದರು.ಸಮಾಜದಲ್ಲಿ ಅನ್ಯಾಯ ಕಂಡಾಗ, ಬಡವರಿಗೆ ನೊಂದವರಿಗೆ ನ್ಯಾಯ ಸಿಗದಿದ್ದಾಗ ಅದನ್ನು ಪ್ರತಿಭಟಿಸುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ದೊರಕಿಸಿಕೊಡಬೇಕು. ಸಂಘ-ಸಂಸ್ಥೆಗಳು ನ್ಯಾಯದ ಪರ ನಿಂತು ಸಮಾಜ ಪರ ಕೆಲಸ ಮಾಡಿದಾಗ ಮಾತ್ರ ಅದರ ಹುಟ್ಟುವಿಕೆಗೊಂದು ಅರ್ಥ ಬರುತ್ತದೆ.
- ಮಲ್ಲಿಕಾರ್ಜುನ್ ಮುತ್ಯಾ, ಮಹಲ್ ರೋಜಾ ಯಮನೂರೇಶ್ವರ ದೇವಸ್ಥಾನದ ಮುಖ್ಯಸ್ಥರು.