ಪತ್ರಿಕಾ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಲಾಯಿತು.

ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಶಾಸಕ

ಕನ್ನಡಪ್ರಭ ವಾರ್ತೆ ಶಿರಸಿ

ಪತ್ರಕರ್ತರ ಲೇಖನಿ ಸಮಾಜದ ಸಂಘರ್ಷಗಳಿಗೆ ತುಪ್ಪ ಸುರಿಯುವಂತಿರದೇ, ಸಮಾಜದ ಅಂಕು-ಡೊಂಕುಗಳನ್ನು ತಿದ್ದುವಂತಿರಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.ತಾಲೂಕಿನ ಗೌಡಳ್ಳಿಯ ಚಂದನ ಪದವಿಪೂರ್ವ ಕಾಲೇಜಿನ ಸಭಾಭವನದಲ್ಲಿ ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಶಿರಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಗಳ ಆಶ್ರಯದಲ್ಲಿ ಆಯೋಜಿಸಿದ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಪತ್ರಕರ್ತರನ್ನು ಸನ್ಮಾನಿಸಿ ಮಾತನಾಡಿದರು.ಉತ್ತರ ಕನ್ನಡ ಜಿಲ್ಲೆಯು ಅನೇಕ ಪ್ರತಿಭಾವಂತ ಪತ್ರಕರ್ತರು ಹಾಗೂ ರಾಜಕಾರಣಿಗಳಿಗೆ ನೆಲೆಯಾದ ಭೂಮಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಯುವಪೀಳಿಗೆಯವರು ಪತ್ರಿಕಾ ರಂಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾಲಿಡುತ್ತಿರುವುದು ಸಂತಸದ ವಿಷಯ. ಸಮಾಜವನ್ನು ಸುಸ್ಥಿತಿಯಲ್ಲಿಡುವಲ್ಲಿ ಪತ್ರಕರ್ತರ ಜವಾಬ್ದಾರಿ ಅತ್ಯಂತ ಮಹತ್ವದ್ದಾಗಿದೆ ಎಂದರುಈ ಹಿಂದೆ ಅಜ್ಜೀಬಳ ಜಿ.ಎಸ್. ಹೆಗಡೆ, ಜಯರಾಮ ಹೆಗಡೆ, ಗೋಪಾಲಕೃಷ್ಣ ಆನವಟ್ಟಿ ಸೇರಿ ಅನೇಕ ಹಿರಿಯ ಪತ್ರಕರ್ತರು ಪತ್ರಿಕಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ರಾಜಕಾರಣಿಗಳ ಬಗ್ಗೆ ಮಾಧ್ಯಮಗಳಲ್ಲಿ ಟೀಕೆಗಳು ಬಂದಾಗ ಅವರು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಲು ಪ್ರೇರಣೆ ದೊರೆಯುತ್ತದೆ ಎಂದರು.ಪತ್ರಿಕೆಗಳು ಬರೆಯುವವರ ಸ್ವತ್ತಾಗದೇ, ಓದುಗರ ಸ್ವತ್ತಾಗಬೇಕು. ಆಗ ಮಾತ್ರ ಅವು ದೀರ್ಘಕಾಲ ಜೀವಂತವಾಗಿರಲು ಸಾಧ್ಯ. ಅನೇಕ ಮಾಧ್ಯಮಗಳ ಟೀಕೆಗಳನ್ನು ಪ್ರೀತಿಯಿಂದ ಸ್ವೀಕರಿಸಿದ್ದರಿಂದಲೇ ನಾನು ಸುಮಾರು 50 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಮುಂದುವರಿಯಲು ಸಾಧ್ಯವಾಗಿದೆ. ಟೀಕೆಗಳನ್ನು ಅರಗಿಸಿಕೊಳ್ಳಲಾಗದ ವ್ಯಕ್ತಿ ಸಾರ್ವಜನಿಕ ಜೀವನದಲ್ಲಿ ಹೆಚ್ಚು ಕಾಲ ಉಳಿಯಲು ಸಾಧ್ಯವಿಲ್ಲ ಎಂದರು.ಕಾರ್ಯಕ್ರಮವನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಉದ್ಘಾಟಿಸಿ ಮಾತನಾಡಿ, ಪತ್ರಕರ್ತರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿದಾಗ ಅವರು ಸಮಾಜದ ಅಮೂಲ್ಯ ಆಸ್ತಿಯಾಗುತ್ತಾರೆ. ಮನುಷ್ಯರಿಗೆ ರೋಗ ಬಂದರೆ ವೈದ್ಯರಿಂದ ಗುಣಪಡಿಸಬಹುದು. ಆದರೆ ಸಮಾಜಕ್ಕೆ ರೋಗ ಬಂದಾಗ ಅದನ್ನು ಗುಣಪಡಿಸುವ ಶಕ್ತಿ ಪತ್ರಕರ್ತನಲ್ಲಿದೆ. ಸಮಾಜವು ಪತ್ರಕರ್ತರನ್ನು ಸದಾ ಗಮನಿಸುತ್ತಿರುತ್ತದೆ. ಆದ್ದರಿಂದ ಪ್ರತಿಯೊಬ್ಬ ಪತ್ರಕರ್ತರೂ ತಮ್ಮ ಬರಹ, ವರದಿ ಹಾಗೂ ನಡೆ-ನುಡಿಯಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ತಿಳಿಸಿದರು.

ಮಾಧ್ಯಮ ಶ್ರೀ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ರವಿ ನಾಯ್ಕ ಮಾತನಾಡಿದರು. ಈ ಸಂದರ್ಭ ಚಂದನ ಶಾಲೆಯ ಮುಖ್ಯಸ್ಥ ಎಲ್.ಎಮ್. ಹೆಗಡೆ, ಚಂದನ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ವಿ.ಜಿ. ಜೋಶಿ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಬಿ. ಮದನ ಗೌಡ ಕಾರ್ಯದರ್ಶಿ ನಿಂಗಪ್ಪ ಚಾವಡಿ, ಶಿರಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಭಟ್, ನಿಕಟಪೂರ್ವ ಅಧ್ಯಕ್ಷ ಸಂದೇಶ ಭಟ್ಟ ಬೆಳಖಂಡ, ಶಿವಪ್ರಸಾದ ಹಿರೇಕೈ, ಮಂಜುನಾಥ ಈರಗೊಪ್ಪ, ಗುರುಪ್ರಸಾದ ಶಾಸ್ತ್ರಿ ಸೇರಿ ಅನೇಕರಿದ್ದರು.

ರಾಘವೇಂದ್ರ ಬೆಟ್ಟಕೊಪ್ಪ ನಿರೂಪಿಸಿದರು. ಬಸವರಾಜ ಪಾಟೀಲ ಸ್ವಾಗತಿಸಿದರು. ಮಾರುತಿ ನಾಯ್ಕ ವಂದಿಸಿದರು.

ಭರವಸೆ

ಜಿಲ್ಲಾ ಸಂಘಕ್ಕೆ ಕ್ಷೇಮ ನಿಧಿ ನೀಡುವಂತೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಕಾರ್ಯಕ್ರಮದಲ್ಲಿ ಶಾಸಕ ಶಿವರಾಮ ಹೆಬ್ಬಾರ ಬಳಿ ವಿನಂತಿಸಿದಾಗ ಸಕಾರಾತ್ಮಕವಾಗಿ ಸ್ಪಂದಿಸಿದ ಹೆಬ್ಬಾರ್‌, ಪತ್ರಕರ್ತರ ಸಂಘಕ್ಕೆ ಎಲ್ಲ ಸಮಯದಲ್ಲಿಯೂ ನೆರವು ನೀಡುತ್ತಿದ್ದೇನೆ. ರಾಜ್ಯಾಧ್ಯಕ್ಷರ ಕೋರಿಕೆಯನ್ನು ಈಡೇರಿಸುತ್ತೇನೆ ಎಂದು ಭರವಸೆ ನೀಡಿದರು.