ಸಾರಾಂಶ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಂಘ ಸಂಸ್ಥೆಗಳ ಸೇವೆ ದೊರಕಬೇಕು ಎಂದು ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ಎಂ.ಆರ್.ಮಂಜುನಾಥ್ ಹೇಳಿದರು.ಪಟ್ಟಣದ ಲಯನ್ಸ್ ಕ್ಲಬ್ ಆಯೋಜಿಸಿದ್ದ ಪ್ರಾಂತೀಯ, ವಲಯಾಧ್ಯಕ್ಷರ ಅಧಿಕೃತ ಭೇಟಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಲಯನ್ಸ್ ಸಂಸ್ಥೆ ಸೇವೆಗಾಗಿಯೇ ಮುಡಿಪಾಗಿರುವ ಸಂಸ್ಥೆಯಾಗಿದ್ದು, ಪಟ್ಟಣದಲ್ಲಿ ಕಳೆದ ಏಳು ವರ್ಷಗಳ ಹಿಂದೆ ಆರಂಭಗೊಂಡ ಸಂಸ್ಥೆ ಪ್ರಸ್ತುತ ವರ್ಷದವರೆಗೆ ಎಲ್ಲಾ ವರ್ಗಕ್ಕೂ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತ ಸಮಾಜಮುಖಿಯಾದ ಸೇವೆಯನ್ನು ಮಾಡುತ್ತಿದೆ.
ಕಳೆದ ಏಳು ವರ್ಷಗಳಿಂದಲೂ ಎಲ್ಲಾ ಅಧ್ಯಕ್ಷರ ಅವಧಿಯಲ್ಲಿಯೂ ಸಹ ಪಟ್ಟಣದಲ್ಲಿ ವಿವಿಧ ಶಾಶ್ವತ ಕಾರ್ಯಕ್ರಮಗಳನ್ನು ನೀಡುತ್ತಿದೆ. ಸಮೀಪದ ಕೊಪ್ಪದಲ್ಲಿ ಲಯನ್ಸ್ ಸಂಸ್ಥೆ ಡಯಾಲಿಸಿಸ್ ಘಟಕವನ್ನು ಅತೀ ಕಡಿಮೆ ದರದಲ್ಲಿ ನಿರ್ವಹಿಸುತ್ತ ರೋಗಿಗಳಿಗೆ ಉತ್ತಮ ಸೇವೆ ನೀಡುತ್ತಿದೆ ಎಂದರು.ವಲಯಾಧ್ಯಕ್ಷ ಎನ್.ಸುಬ್ರಮಣ್ಯ ಮಾತನಾಡಿ, ಯಾವುದೇ ವ್ಯಕ್ತಿ ಸಮಾಜದಲ್ಲಿ ತುಳಿತ, ಶೋಷಣೆಗೆ ಒಳಗಾದರೂ ಸಹ ಅದಕ್ಕೆ ಎದೆಗುಂದದೆ ಮತ್ತೆ ಬೆಳೆಯಬೇಕಿದೆ. ಸಮಾಜದಲ್ಲಿ ನಾವು ಎತ್ತರದ ಸ್ಥಾನಕ್ಕೆ ಹೋಗುವ ಪ್ರಯತ್ನ ಮಾಡಬೇಕು. ನಮ್ಮತನದೊಂದಿಗೆ ಸಮಾಜದಲ್ಲಿ ನಾವು ಗುರುತಿಸಿಕೊಳ್ಳುವ ಕೆಲಸ ಮಾಡಬೇಕು.
ಜೀವನದಲ್ಲಿ ಆಲಸ್ಯ, ಸೋಮಾರಿತನ ಹೊಂದಿದ್ದರೆ ಮುಂದೆ ಬರಲು ಸಾಧ್ಯವಿಲ್ಲ. ಇವು ನಮಗೆ ಕಡುವೈರಿಯಾಗಿದ್ದು, ಇವುಗಳನ್ನು ಬಿಟ್ಟು ಕೆಲಸ ಮಾಡಿದರೆ ಉನ್ನತ ಸ್ಥಾನಕ್ಕೆ ಏರಲು ಸಾಧ್ಯವಿದೆ. ಜೀವನದಲ್ಲಿ ದೊಡ್ಡ ಗುರಿ, ನಿರಂತರ ಪ್ರಯತ್ನ ಇದ್ದಾಗ ಮಾತ್ರ ಸಾಧನೆ ಮಾಡಲು ಸಾಧ್ಯವಿದೆ ಎಂದರು.ಕ್ಲಬ್ ಅಧ್ಯಕ್ಷ ಎಂ.ಡಿ.ಶಿವರಾಮ್ ಮಾತನಾಡಿ, ಲಯನ್ಸ್ ಕ್ಲಬ್ ವತಿಯಿಂದ ಪಟ್ಟಣದ ಅರಣ್ಯ ಇಲಾಖೆ ಮುಂಭಾಗದಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಾಣಕ್ಕೆ ಅನುಮತಿ ಕೋರಿ ಸ್ಥಳೀಯ ಗ್ರಾಪಂಗೆ ಮನವಿ ಸಲ್ಲಿಸಿದ್ದು, ಗ್ರಾಪಂ ಸಕಾರಾತ್ಮಕವಾಗಿ ಸ್ಪಂದಿಸಿದೆ. ಶೀಘ್ರದಲ್ಲಿ ತಂಗುದಾಣ ನಿರ್ಮಿಸಲಾಗುವುದು. ಮಾ.24 ರಂದು ಪಟ್ಟಣದಲ್ಲಿ ಪ್ರಾಂತೀಯ ಸಮ್ಮೇಳನ ನಡೆಸಲು ದಿನಾಂಕ ನಿಗದಿ ಮಾಡಲಾಗಿದೆ ಎಂದರು.ಇದೇ ಸಂದರ್ಭದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಯಜ್ಞಪುರುಷಭಟ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಲಯನ್ಸ್ ಕ್ಲಬ್ ಕಾರ್ಯದರ್ಶಿ ವಿಲಿಯಂ ಡಯಾಸ್, ಖಜಾಂಚಿ ಕೆ.ನಾರಾಯಣಶೆಟ್ಟಿ, ಕೊಪ್ಪ ಕ್ಲಬ್ ಅಧ್ಯಕ್ಷೆ ಸುಮಾ ರಂಗಪ್ಪ, ಶೃಂಗೇರಿ ಕ್ಲಬ್ ಅಧ್ಯಕ್ಷ ವಿವೇಕ್ ಬೇಗಾನೆ, ಎನ್.ಆರ್.ಪುರ ಕ್ಲಬ್ ಅಧ್ಯಕ್ಷ ರವಿಚಂದ್ರ, ಪ್ರಮುಖರಾದ ಪ್ರಮೀಣಾ, ಪ್ರಪುಲ್ಲಾ, ಸಂದೇಶ್‌ಹೆಗ್ಡೆ, ಸುರೇಂದ್ರ ಮಾಸ್ತರ್, ಮಂಜುನಾಥ್ ತುಪ್ಪೂರು, ಬಿ.ಎಸ್.ಶ್ರೀನಿವಾಸ್, ಜ್ಯೋತಿ ಉಮೇಶ್, ಎಂ.ವಿ.ಶ್ರೀನಿವಾಸಗೌಡ, ಎಂ.ನಾರಾಯಣ ಮೇಲ್ಪಾಲ್, ಟಿ.ಎಂ.ಗುರುಮೂರ್ತಿ ಮತ್ತಿತರರು ಇದ್ದರು.೨೪ಬಿಹೆಚ್‌ಆರ್ ೨: ಬಾಳೆಹೊನ್ನೂರಿನ ಲಯನ್ಸ್ ಕ್ಲಬ್ ವತಿಯಿಂದ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಯಜ್ಞಪುರುಷಭಟ್ ಅವರನ್ನು ಸನ್ಮಾನಿಸಲಾಯಿತು. ಎಂ.ಡಿ.ಶಿವರಾಮ್, ಮಂಜುನಾಥ್, ಸುಬ್ರಮಣ್ಯ, ವಿಲಿಯಂ, ನಾರಾಯಣಶೆಟ್ಟಿ, ಸುಮಾ, ವಿವೇಕ್ ಇದ್ದರು.