ಸಾರಾಂಶ
ಕನ್ನಡಪ್ರಭ ವಾರ್ತೆ, ದಾವಣಗೆರೆ
ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲ ಫೋಟೋಗ್ರಾಫರ್ಸ್ ನೂತನ ತಂತ್ರಜ್ಞಾನ, ತಾಂತ್ರಿಕತೆ ಬದಲಾದಂತೆ, ಅದಕ್ಕೆ ತಕ್ಕಂತೆ ಅಪ್‌ಗ್ರೇಡ್ ಆಗುತ್ತಿರಬೇಕು. ಆ ಮೂಲಕ ತಮ್ಮ ವೃತ್ತಿಯಲ್ಲಿ ಅನುಭವ ಜೊತೆಗೆ ಹೊಸ ತಂತ್ರಜ್ಞಾನದ ಸದ್ಬಳಕೆಗೂ ಮುಂದಾಗಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.ನಗರದ ಬಾಪೂಜಿ ಸಮುದಾಯ ಭವನದಲ್ಲಿ ಶನಿವಾರ ಜಿಲ್ಲಾ ಫೋಟೋಗ್ರಾಫರ್ಸ್ ಮತ್ತು ವೀಡಿಯೋಗ್ರಾಫರ್ಸ್ ಸಂಘ, ಫೋಟೋಗ್ರಾಫರ್ಸ್ ವೆಲ್‌ಫೇರ್ ಅಸೋಸಿಯೇಷನ್ ಆಯೋಜಿಸಿದ್ದ 2 ದಿನಗಳ ದೇವನಗರಿ ಪ್ರೊ ಇಮೇಜ್-2024 ಉದ್ಘಾಟಿಸಿ ಮಾತನಾಡಿದರು. ನಿಮ್ಮ ಬುದ್ದಿವಂತಿಕೆ ಬಳಸಿ, ಕ್ರಿಯಾಶೀಲರಾಗಿ ವಿವಿಧ ನವನವೀನ ರೀತಿಯ ಹೊಸ ವಿನ್ಯಾಸಗಳ, ಬಗೆಯ ಫೋಟೋಗಳನ್ನು ತೆಗೆದು ಗ್ರಾಹಕರಿಗೆ ನೀಡಿ, ಮೆಚ್ಚುಗೆ ಪಡೆಯಲು ಶ್ರಮಿಸಬೇಕು ಎಂದರು.
ಎಂದಿಗೂ ಮರೆಯದ ಕ್ಷಣಗಳು:ಛಾಯಾಗ್ರಾಹಕರು, ವಿಡಿಯೋಗ್ರಾಫರ್‌ಗಳು ಜನ್ಮದಿನ, ಮದುವೆ, ಗೃಹಪ್ರವೇಶ, ಕ್ರೀಡೆ ಸೇರಿದಂತೆ ಶುಭ ಸಮಾರಂಭಗಳ ನೆನಪು ಕಟ್ಟಿಕೊಡುವ, ಹಳೇ ನೆನಪುಗಳನ್ನು ತಂದುಕೊಡುವ ಉತ್ತಮ ಕೆಲಸ ಮಾಡುತ್ತೀದ್ದೀರಿ. ವರ್ಲ್ಡ್ ಜಿಯೋಗ್ರಫಿ ಚಾನಲ್‌ಗಳನ್ನು ನಾವು ನೋಡುತ್ತೇವೆ. ಅದರಲ್ಲಿ ಸಮುದ್ರ, ಪಕ್ಷಿ, ಪ್ರಾಣಿಗಳು, ಪರಿಸರ ಕುರಿತ ಅಂತಹ ಫೋಟೋ, ದೃಶ್ಯಗಳನ್ನು ನಾವು ನೋಡಿ ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ. ಅಂತಹ ಫೋಟೋ, ದೃಶ್ಯಗಳು ಮಕ್ಕಳಿಗೆ ಸಹಕಾರಿಯಾಗಲಿವೆ. ಹಿಂದಿನ ಸ್ವಾತಂತ್ರ‍್ಯದ ಹೋರಾಟಗಳು, ಸತ್ಯಾಗ್ರಹಗಳನ್ನು ನಾವು ಫೋಟೋಗಳಿಂದ, ವೀಡಿಯೋಗಳಿಂದ ನೋಡಿ ತಿಳಿದುಕೊಳ್ಳುತ್ತಿದ್ದೇವೆ. ಇವೆಲ್ಲಾ ಎಂದಿಗೂ ಮರೆಯದ ಕ್ಷಣಗಳಾಗಿವೆ ಎಂದು ತಿಳಿಸಿದರು.
ಬೇರೆ ದೇಶ, ಪ್ರದೇಶದ ಸಂಪ್ರದಾಯ, ಸಂಸ್ಕೃತಿಗಳನ್ನು ಅರ್ಥ ಮಾಡಿಕೊಳ್ಳಲು ಫೋಟೋಗ್ರಫಿ ಸಹಕಾರಿಯಾಗಿದೆ. ಒಂದು ಉತ್ತಮ ಚಿತ್ರ ಸಾವಿರ ಪದಗಳಿಗಿಂತ ಮಿಗಿಲಾಗಿ ವಿಷಯ ತಿಳಿಸುತ್ತದೆ. ಸಾಂಸ್ಕೃತಿಕ ಬೇರುಗಳನ್ನು ಗಟ್ಟಿ ಮಾಡುವಲ್ಲಿಯೂ ಛಾಯಾಗ್ರಹಣ ನೆರವಾಗುತ್ತಿದೆ ಎಂದು ಶ್ಲಾಘಿಸಿದರು.ಸಂಘದಿಂದ ಮಾದರಿ ಕೆಲಸ:
ದಾವಣಗೆರೆಯಲ್ಲಿ ಇಂತಹ ಫೋಟೋ ಎಕ್ಸ್ಪೋ ಎಕ್ಷಿಬಿಷನ್ ನಡೆಸುತ್ತಿದ್ದೀರಿ. ಪ್ರದರ್ಶನದಲ್ಲಿ ನಮ್ಮ ಜಿಲ್ಲೆಗೆ ಸಮೀಪದ ಚಿತ್ರದುರ್ಗ, ಗದಗ, ತುಮಕೂರು, ಹಾವೇರಿ, ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ, ಸೇರಿದಂತೆ ವಿವಿಧೆಡೆಯಿಂದ ಫೋಟೋ ಮತ್ತು ವೀಡಿಯೋಗ್ರಾಫರ್ಸ್ ಭಾಗವಹಿಸಿದ್ದೀರಿ. ಅಲ್ಲದೇ, ಈ ವೃತ್ತಿಯಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಸಮಾರಂಭ, ಕಾರ್ಯಾಗಾರ ಮತ್ತು ನಿಮ್ಮ ಮಕ್ಕಳ ಪ್ರತಿಭೆ ಬೆಳಗಲು ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಮಾದರಿ ಕೆಲಸವಾಗಿದೆ. ಸೋನಿ ಕಂಪನಿಯ ನೂತನ ಮಾದರಿಯ ಕ್ಯಾಮರಾವನ್ನು ಪ್ರಥಮ ಬಾರಿಗೆ ಇಲ್ಲಿ ಲಾಂಚ್ ಮಾಡುತ್ತಿರುವುದು ನಮ್ಮ ದಾವಣಗೆರೆಗೆ ಹೆಮ್ಮೆಯ ವಿಷಯ ಎಂದು ಡಾ.ಪ್ರಭಾ ಹೇಳಿದರು.ಫೋಟೋಗ್ರಾಫರ್ಸ್ ಯೂತ್ ವೆಲ್‌ಫೇರ್ ಅಸೋಸಿಯೇಷನ್ ಅಧ್ಯಕ್ಷ ಶ್ರೀನಾಥ್ ಪಿ.ಅಗಡಿ, ಫೋಟೋಗ್ರಾಫರ್ಸ್ ಮತ್ತು ವಿಡಿಯೋಗ್ರಾಫರ್ಸ್ ಸಂಘದ ಅಧ್ಯಕ್ಷ ವಿಜಯ ಜಾಧವ್, ಶಿವಮೊಗ್ಗದ ಕೆ.ಟಿ.ಶ್ರೀನಿವಾಸ, ಹಾವೇರಿ ರಾಜೇಂದ್ರ ರಿತ್ತಿ, ಗದಗದ ಪವನ್ ಕೆ. ಮೆಹರವಾಡೆ, ಚಿತ್ರದುರ್ಗದ ಸೈಯ್ಯದ್ ರಹಮತ್‌ವುಲ್ಲಾ, ವಿಜಯನಗರದ ಕೆ.ರಾಮಣ್ಣ, ಕೊಪ್ಪಳದ ವಿಜಯಕುಮಾರ ವಸ್ತ್ರದ್, ಎಚ್‌ಕೆಸಿ ರಾಜು, ಎಸ್.ದುಗ್ಗಪ್ಪ, ಎನ್.ಮಲ್ಲಿಕಾರ್ಜುನ್, ಬಿ.ಎಂ. ತಿಪ್ಪೇಸ್ವಾಮಿ, ಪಂಚಾಕ್ಷರಿ, ತಿಲಕ್, ಕೆ.ಪಿ. ನಾಗರಾಜ್, ಮಿಥುನ್, ಅರುಣ್ ಕುಮಾರ್, ಪ್ರಕಾಶ್, ಕಿಶೋರ್, ಮಹಾಂತೇಶ್, ಎನ್.ಕೆ. ಕೊಟ್ರೇಶ್ ಇತರರು ಇದ್ದರು.
ಅಂತರ ರಾಷ್ಟ್ರೀಯ ಕಂಪನಿಗಳ ಕ್ಯಾಮರಾ, ಲೆನ್ಸ್, ಫ್ರೇಂ, ಪ್ರಿಂಟರ್, ಆಲ್ಬಂ ಡಿಜೈನ್, ಆಲ್ಬಂ ತಯಾರಿಕೆಗೆ ಸಂಬಂಧಿಸಿದ ಪರಿಕರಗಳ ಸ್ಟಾಲ್‌ಗಳಿದ್ದವು. ಫೋಟೋಗ್ರಾಫರ್ಸ್ ಮತ್ತವರ ಕುಟುಂಬದವರಿಗಾಗಿ ಎಸ್.ಎಸ್.ಜನಕಲ್ಯಾಣ ಟ್ರಸ್ಟ್‌ನಿಂದ ಉಚಿತ ಆರೋಗ್ಯ ತಪಾಸಣೆ, ಕಣ್ಣಿನ ತಪಾಸಣೆ ಶಿಬಿರ ನಡೆಯಿತು. ನವೀನ ತಂತ್ರಜ್ಞಾನ ಪರಿಚಯ, ಉಚಿತ ಕಾರ್ಯಾಗಾರ, ಉಚಿತ ಕ್ಯಾಮರಾ ತಪಾಸಣೆ, ಅಂಚೆ ಇಲಾಖೆ ಸೌಲಭ್ಯ, ಇ-ಶ್ರಮ ಕಾರ್ಡ್ ನೋಂದಣಿ ಕಾರ್ಯಕ್ರಮ ಆಯೋಜಿಸಲಾಗಿತ್ತು.ಅಸೋಸಿಯೇಷನ್ ಅಧ್ಯಕ್ಷ ಶ್ರೀನಾಥ ಪಿ. ಅಗಡಿ, ಸಂಘದ ಅಧ್ಯಕ್ಷ ವಿಜಯ ಜಾಧವ್, ತಿಪ್ಪೇಸ್ವಾಮಿ, ಕೆ.ಪಿ.ಅರುಣಕುಮಾರ, ಎಚ್‌ಕೆಸಿ ರಾಜು, ತಿಲಕ್, ಶಂಭು, ನಾಗರಾಜ, ಪಿ.ಎನ್.ಮಲ್ಲಿಕಾರ್ಜುನ, ದುಗ್ಗಪ್ಪ, ಮಿಥುನ್, ಎನ್.ಕೆ.ಕೊಟ್ರೇಶ ಸೇರಿದಂತೆ ಸಂಘದ ಪದಾಧಿಕಾರಿಗಳಿದ್ದರು.
* ಎಸ್‌ಎಸ್ ಜನಕಲ್ಯಾಣ ನೆರವಿಗೆ ಮನವಿ ದೂಡಾದಿಂದ ಸಂಘಕ್ಕೆ ನಿವೇಶನ ಮಂಜೂರಾಗಿದೆ. ₹3 ಲಕ್ಷ ಕಟ್ಟಿದ್ದೇವೆ. ಉಳಿದ ಹಣ ಕಟ್ಟಲು ರಿಯಾಯಿತಿ ನೀಡಬೇಕು. 2 ವರ್ಷಗಳಿಂದ ಛಾಯಾಗ್ರಾಹಕರ ಮಕ್ಕಳಿಗೆ ಎಸ್.ಎಸ್. ಜನಕಲ್ಯಾಣ ಟ್ರಸ್ಟ್‌ನಿಂದ ಸ್ಕಾಲರ್‌ಶಿಪ್ ನೀಡುತ್ತಿದ್ದು, ಈಗ ನಿಲ್ಲಿಸಿದ್ದಾರೆ. ಈ ಬಗ್ಗೆ ಸಂಸದರು ಗಮನಹರಿಸಿ, ಅನುಕೂಲ ಮಾಡಿಕೊಡುವಂತೆ ಸಂಸದರಿಗೆ ಸಂಘದ ಅಧ್ಯಕ್ಷ ಶ್ರೀನಾಥ ಮನವಿ ಮಾಡಿದರು.ಮನವಿಗೆ ಸ್ಪಂದಿಸಿದ ಡಾ.ಪ್ರಭಾ ಅವರು, ನೀವು ಸಹ ಒಂದು ಬಾರಿ ಬಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರನ್ನು ಭೇಟಿ ಮಾಡಿ, ಮನವಿ ಮಾಡಿರಿ. ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪಾಜಿ, ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನರ ಬಳಿ ನಾನೂ ನಿಮ್ಮ ಬೇಡಿಕೆಗಳ ಬಗ್ಗೆ ಮಾತನಾಡಿ, ಚರ್ಚಿಸುವೆ ಎಂದು ಭರವಸೆ ನೀಡಿದರು.