ಸರ್ಕಾರದ ಸೌಲಭ್ಯ ಪಡೆಯಲು ಪಿಂಜಾರರು ಜಾಗೃತರಾಗಲಿ: ಜಲೀಲ್ ಸಾಬ್

| Published : Mar 12 2024, 02:01 AM IST / Updated: Mar 12 2024, 02:02 AM IST

ಸರ್ಕಾರದ ಸೌಲಭ್ಯ ಪಡೆಯಲು ಪಿಂಜಾರರು ಜಾಗೃತರಾಗಲಿ: ಜಲೀಲ್ ಸಾಬ್
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರದ ಸೌಲಭ್ಯ ಪಡೆಯಲು ಪಿಂಜಾರರು ಜನಜಾಗೃತರಾಗಬೇಕು.

ಜಿಲ್ಲಾ ಘಟಕದ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಪದಗ್ರಹಣ ಹಾಗೂ ಜನಜಾಗೃತಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಕೊಪ್ಪಳ

ಸರ್ಕಾರದ ಸೌಲಭ್ಯ ಪಡೆಯಲು ಪಿಂಜಾರರು ಜನಜಾಗೃತರಾಗಬೇಕು ಎಂದು ಶಿವಮೊಗ್ಗದ ರಾಜ್ಯ ಪಿಂಜಾರ ಸಂಘದ ರಾಜ್ಯಾಧ್ಯಕ್ಷ ಎಚ್. ಜಲೀಲ್ ಸಾಬ್ ಹೇಳಿದರು.

ನಗರದ ಶಾದಿಮಹಲ್‌ನಲ್ಲಿ ಶಿವಮೊಗ್ಗದ ರಾಜ್ಯ ನದಾಫ್‌, ಪಿಂಜಾರ ಸಂಘದ ಆಶ್ರಯದಲ್ಲಿ ಜರುಗಿದ ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಪದಗ್ರಹಣ ಹಾಗೂ ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪಿಂಜಾರರು ಪ್ರವರ್ಗ-೧ರಲ್ಲಿ ಇದ್ದೇವೆ ಎಂದು ಸರ್ಕಾರದ ಅಧಿಕಾರಿಗಳಿಗೆ ಗೊತ್ತಿಲ್ಲ. ನಮ್ಮ ಸಮುದಾಯದವರು ಮಾಹಿತಿ ಇಲ್ಲದೇ ಪಿಂಜಾರ್ ಎಂದು ನಮೂದಿಸದೇ ಮುಸ್ಲಿಂ ಎಂದು ಬರೆಸಿದ್ದು, ಇದರಿಂದಾಗಿ ಶಾಲಾ ದಾಖಲೆಗಳಲ್ಲಿ ಮುಸ್ಲಿಂ ಎಂದು ಇದೆ. ಹಾಗಾಗಿ ಶಾಲಾ ದಾಖಲೆ ಆಧಾರದ ಮೇಲೆ ಮಾತ್ರ ಪ್ರಮಾಣ ಪತ್ರ ನೀಡಬಾರದು. ಬದಲಿಗೆ ಸಂಸ್ಕೃತಿ ಆಧಾರದ ಮೇಲೆ ಪ್ರವರ್ಗ-೧ರ ಪ್ರಮಾಣಪತ್ರ ನೀಡಬೇಕು ಎಂದರು.

ರಾಜ್ಯಮಟ್ಟದಲ್ಲಿ ಮುಸ್ಲಿಂ ಸಮಾಜದವರು ಮತ್ತು ಪಿಂಜಾರ್ ಸಮಾಜದವರು ಒಗ್ಗಟ್ಟಾಗಿಲ್ಲ. ಭಾಷೆ, ನಮಾಜ್ ಬರುವುದಿಲ್ಲ ಎಂದು ಕೀಳರಿಮೆಯಿಂದ ಕಾಣುತ್ತಾರೆ. ಹಾಗಾಗಿ ಧಾರ್ಮಿಕ ಶಿಕ್ಷಣವನ್ನು ಉಚಿತವಾಗಿ ನೀಡುತ್ತಿದ್ದೇವೆ ಎಂದರು.

ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತ ಇಲಾಖೆ ಎರಡೂ ಇಲಾಖೆಗಳಿಂದ ಅನುದಾನ ಕೊಡಿಸಬೇಕು. ಮೊರಾರ್ಜಿ ವಸತಿ ಶಾಲೆಗಳಲ್ಲಿ ಪಿಂಜಾರ ಸಮುದಾಯವರಿಗೆ ಮೀಸಲಾತಿ ನೀಡಬೇಕು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ₹೧,೬೦೦ ಕೋಟಿ ರೂ. ಅನುದಾನದಲ್ಲಿ ನಮ್ಮ ಸಮುದಾಯಕ್ಕೂ ಅನುದಾನ ಹಂಚಿಕೆ ಮಾಡಬೇಕು. ರಾಜ್ಯ ಮತ್ತು ತಾಲೂಕು ಮಟ್ಟದ ನಾಮನಿರ್ದೇಶನಕ್ಕೆ ಮುಸ್ಲಿಂರ ಜತೆಗೆ ಪಿಂಜಾರ ಸಮಾಜದವರನ್ನು ಪರಿಗಣಿಸಬೇಕು. ಕೇಂದ್ರ ಸರ್ಕಾರದ ಹಿಂದುಳಿದ ವರ್ಗದ ಶೇ. ೨೭ರಷ್ಟು ಮೀಸಲಾತಿಯಲ್ಲಿ ಪಿಂಜಾರ ಸಮುದಾಯಕ್ಕೆ ಒಳಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.

ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಮಾತನಾಡಿ, ಸಿಎಂ ಸಿದ್ದರಾಮಯ್ಯನವರು ಅಲ್ಪಸಂಖ್ಯಾತರಿಗೆ ಹೆಚ್ಚು ಅನುದಾನ ನೀಡಿದ್ದಾರೆ. ಸರ್ಕಾರದ ಸೌಲಭ್ಯ ಸಿಗದ ಜಾತಿಗಳಿಗೆ ಸೌಲಭ್ಯ ಒದಗಿಸಲು ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ ಮಾಡಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಕಾಂತರಾಜು ವರದಿ ಸಹಕಾರಿ ಆಗಲಿದೆ. ಸರ್ಕಾರದ ಸೌಲಭ್ಯ ಒದಗಿಸಲು ನಿಮ್ಮ ಜತೆ ಕೈಜೋಡಿಸುತ್ತೇನೆ. ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಮುಂಚೂಣಿಗೆ ಬರಬೇಕಿದೆ. ಎಲ್ಲರನ್ನೂ ಸಮಾನವಾಗಿ ಕಂಡಾಗ ಮಾತ್ರ ಬಸವಣ್ಣನವರ ಆಶಯ ಸಾಕಾರಗೊಳ್ಳುತ್ತದೆ ಎಂದರು.

ಸೈಯ್ಯದ ಫೌಂಡೇಶನ್ ಅಧ್ಯಕ್ಷ ಕೆ.ಎಂ. ಸೈಯ್ಯದ್ ಮಾತನಾಡಿ, ಶೇ. ೪ರಷ್ಟು ಮೀಸಲಾತಿ ಹಾಗೂ ನದಾಫ್ ನಿಗಮಕ್ಕೆ ಅನುದಾನ ನೀಡಿ, ಕಾರ್ಯಪ್ರವೃತ್ತಗೊಳಿಸುವುದು ಸೇರಿ ವಿವಿಧ ಬೇಡಿಕೆ ಇಡಲಾಗಿದೆ. ಶಿಕ್ಷಣ ಮುಖ್ಯವಾಗಿದ್ದು, ಎಲ್ಲರೂ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ನೋವು ಯಾರ ಬಳಿ ಹೇಳಬೇಕು ಎಂಬುದು ಅರ್ಥವಾಗುತ್ತಿಲ್ಲ. ಒಗ್ಗಟ್ಟು ಇದ್ದಾಗ ಮಾತ್ರ ಅಧಿಕಾರ ಸಿಗಲಿದೆ. ಅಧಿಕಾರ ಸಿಕ್ಕಾಗ ಮಾತ್ರ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದರು.

ಕುರಾನ್ ಪಠಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನೂತನ ಪದಾಧಿಕಾರಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಇದೇ ವೇಳೆ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು.

ಸಂಘದ ನೂತನ ಜಿಲ್ಲಾಧ್ಯಕ್ಷ ಕಾಸೀಂಅಲಿ ಮುದ್ದಾಬಳ್ಳಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಅಧ್ಯಕ್ಷ ರಾಜಶೇಖರ ಹಿಟ್ನಾಳ್, ಸಂಘದ ಮಹಿಳಾ ಘಟಕದ ನಿಕಟಪೂರ್ವ ಜಿಲ್ಲಾಧ್ಯಕ್ಷೆ ರೇಷ್ಮಾ ಖಾಜಾವಲಿ, ನೂತನ ಜಿಲ್ಲಾಧ್ಯಕ್ಷೆ ಸಲ್ಮಾ ಜಹಾನ್, ಸಮಾಜದ ಮುಖಂಡ ಭಾಷುಸಾಬ್ ಖತೀಬ್, ಸರ್ಧಾರ ಗಲ್ಲಿ ಮುಸ್ಲಿಂ ಪಂಚ ಕಮಿಟಿಯ ಅಧ್ಯಕ್ಷ ಖಾದರಸಾಬ್ ಕುದ್ರಿಮೋತಿ, ನಗರಸಭೆ ಸದಸ್ಯ ಅಮ್ಜದ್ ಪಟೇಲ್, ಮಾಜಿ ನಗರಸಭೆ ಸದಸ್ಯ ಮಾನ್ವಿಪಾಷಾ, ಸೈಯ್ಯದ್ ಶಾ ಹಜರತ್ ಮರ್ದಾನೇ ಗೈಬ್ ಕಮಿಟಿ ಅಧ್ಯಕ್ಷ ಕಾಟನ್ ಪಾಷಾ, ತಾಲೂಕಾಧ್ಯಕ್ಷ ಅಸ್ಮಾನ್ ಸಾಬ್ ನದಾಫ್, ನಗರ ಘಟಕದ ಅಧ್ಯಕ್ಷ ರಿಯಾಜ್ ಕುದ್ರಿಮೋತಿ, ಫಕ್ರುಸಾಬ್ ಚುಕ್ಕನಕಲ್, ಫಾತೀಮಾ ಬೇಗಂ ಇದ್ದರು.