ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗೆ ಕೇಂದ್ರ ಸರ್ಕಾರ ಜಿ ರಾಮ್ ಜಿ ಎಂದು ಹೊಸ ಸ್ವರೂಪ ನೀಡಿದೆ. ಒಂದು ವೇಳೆ ಈ ಸಂಬಂಧ ಬಹಿರಂಗ ಚರ್ಚೆಗೆ ಬಂದರೆ ನಾವು ಸಿದ್ಧ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾಂಗ್ರೆಸ್‌ಗೆ ಸವಾಲೆಸೆದರು.
ಹುಬ್ಬಳ್ಳಿ: ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗೆ ಕೇಂದ್ರ ಸರ್ಕಾರ ಜಿ ರಾಮ್ ಜಿ ಎಂದು ಹೊಸ ಸ್ವರೂಪ ನೀಡಿದೆ. ಇದು ಅತ್ಯಂತ ಪರಿಣಾಮಕಾರಿ ಹಾಗೂ ಜನಪರವಾಗಿದೆ. ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. ಒಂದು ವೇಳೆ ಈ ಸಂಬಂಧ ಬಹಿರಂಗ ಚರ್ಚೆಗೆ ಬಂದರೆ ನಾವು ಸಿದ್ಧ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾಂಗ್ರೆಸ್‌ಗೆ ಸವಾಲೆಸೆದರು.
ಈ ಸಂಬಂಧ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿ ರಾಮ್ ಜಿ ಕಾಯ್ದೆಯನ್ನು ದೇಶಾದ್ಯಂತ ಕಾಂಗ್ರೆಸ್ ಮತ್ತು ಇಂಡಿ ಒಕ್ಕೂಟ ವಿರೋಧಿಸುತ್ತಿದೆ. ಜಿ ರಾಮ್ ಜಿ ಬಿಲ್ ಪಾಸಾಗಿದೆ. ಎಲ್ಲ ರಾಜ್ಯಗಳಿಗೂ ಅಳವಡಿಕೆಗೆ ಕಳುಹಿಸಲಾಗಿದೆ. 2005ರಿಂದ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಇಲ್ಲದ ಜನರಿಗೆ ಉದ್ಯೋಗ ಕೊಡುವ ಕೆಲಸ ಆರಂಭಿಸಲಾಯಿತು. 2005ರಿಂದ 2025ರವರೆಗೆ ₹ 10.66 ಲಕ್ಷ ಕೋಟಿ ಈ ಯೋಜನೆಗೆ ಖರ್ಚು ಮಾಡಿದ್ದೇವೆ ಎಂದರು.ಯುಪಿಎ ಸರ್ಕಾರದ ಅವಧಿಯಲ್ಲಿ ಮನರೇಗಾ ಯೋಜನೆಯಡಿ 1,660 ಕೋಟಿ ಮಾನವ ದಿನದ ಕೆಲಸ ಕೊಟ್ಟಿದ್ದರೆ, ಪ್ರಧಾನಿ ನೇತೃತ್ವದ ಮೋದಿ ಸರ್ಕಾರದ ಅವಧಿಯಲ್ಲಿ 3,010 ಕೋಟಿ ಮಾನವ ದಿನ ಕೆಲಸ ಕೊಡಲಾಯಿತು. ₹2,13,220 ಕೋಟಿ ಯುಪಿಎ ಅವಧಿಯಲ್ಲಿ ನೀಡಿ 153 ಲಕ್ಷ ಬೇರೆ ಬೇರೆ ಕೆಲಸಗಳನ್ನು ಮಾಡಿದ್ದರೆ, ₹8,53,810 ಕೋಟಿ ಮೋದಿ ಅವಧಿಯಲ್ಲಿ ಖರ್ಚು ಮಾಡಿ, 852 ಲಕ್ಷ ಬೇರೆ ಬೇರೆ ಕೆಲಸಗಳನ್ನು ಮಾಡಲಾಯಿತು ಎಂದು ಹೇಳಿದರು.
ಈ ಹಿಂದೆ ನಕಲಿ ಜಾಬ್ ಕಾರ್ಡ್ ತೋರಿಸುತ್ತಿದ್ದರು. ಕೆಲವು ರಾಜ್ಯಗಳಲ್ಲಿ ಅವ್ಯವಹಾರ ನಡೆಯಿತು. ದೇಶಾದ್ಯಂತ ಮನರೇಗಾ ಹಣ ದುರುಪಯೋಗದ ಬಗ್ಗೆ 10.50 ಲಕ್ಷ ಕೇಸ್ ನೋಂದಣಿಯಾಗಿವೆ. ಹೀಗಾಗಿ, ಈ ಯೋಜನೆ ಪರಿಶೀಲನೆ ಅಗತ್ಯ ಇತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮೊದಲ ಅವಧಿಯಿಂದಲೇ ಇದರ ಪರಿಶೀಲನೆ ನಡೆಯುತ್ತಿತ್ತು. ಆದರೆ ಪ್ರಯೋಜನ ಏನೂ ಆಗಲಿಲ್ಲ. ಇದುವರೆಗೆ 100 ಕೆಲಸದ ದಿನ ಇತ್ತು, ಇದೀಗ ವರ್ಷಕ್ಕೆ 125 ದಿನ ಕೆಲಸದ ದಿನಗಳಾಗಿವೆ. ಏನು ಕೆಲಸ ಕೊಡಬೇಕೆಂದು ಆಯಾ ಗ್ರಾಮ ಪಂಚಾಯತ್ಗಳು ನಿರ್ಧರಿಸಬೇಕು. ಇದು ಸರಿಯೋ ತಪ್ಪೋ ಕಾಂಗ್ರೆಸ್ ಹೇಳಲಿ. ಬೇಕೋ ಬೇಡವೋ ಎಂಬುದನ್ನು ಸ್ಪಷ್ಟಪಡಿಸಲಿ ಎಂದರು.ಅಧಿಕಾರ ವಿಕೇಂದ್ರೀಕರಣಕ್ಕೆ ಕೇಂದ್ರ ಸರ್ಕಾರ ಆದ್ಯತೆ ನೀಡಿದೆ. ಗ್ರಾಮೀಣ ಆರ್ಥಿಕತೆ ಹೆಚ್ಚಿಸಬೇಕು. ಜಿ ರಾಮ್ ಜಿ ಮುಖಾಂತರ ಜಲ ಸಂಪನ್ಮೂಲ ಬೆಳೆಸಬೇಕು, ಆಹಾರ ದಾಸ್ತಾನು ಹೆಚ್ಚಿಸಬೇಕು ಎಂದು ಅವರು ಹೇಳಿದರು.
ಕಾಂಗ್ರೆಸ್ನವರು ಹೆಸರು ಬದಲಾಯಿತು ಎಂಬುದಕ್ಕೆ ಮಾತ್ರ ವಿರೋಧಿಸುತ್ತಿದ್ದಾರೋ ಅಥವಾ ಯಾವ ಕಾರಣಕ್ಕೆ ವಿರೋಧ ಮಾಡುತ್ತಿದ್ದಾರೆ ಎಂಬುದನ್ನು ತಿಳಿಸಲಿ. ಕಾಂಗ್ರೆಸ್ನ ಅನೇಕ ಸಂಸದರು ಇದನ್ನು ಸ್ವಾಗತಿಸಿದ್ದಾರೆ. ಆದರೆ, ಪಕ್ಷಕ್ಕಾಗಿ ಹೆಸರಿಗೆ ಮಾತ್ರ ವಿರೋಧ ಮಾಡುತ್ತಿದ್ದಾರೆ. ಒಂದು ವರ್ಷದಿಂದ ಹಲವಾರು ಸಂಪನ್ಮೂಲ ವ್ಯಕ್ತಿಗಳೊಂದಿಗೆ ಚರ್ಚಿಸಿದ ನಂತರವೇ ಈ ಯೋಜನೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರುಈ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಹಿರಂಗ ಚರ್ಚೆಗೆ ಕರೆದಿದ್ದಾರೆ. ಈ ಬಗ್ಗೆ ಅವರು ವೇದಿಕೆ ಸಿದ್ಧಪಡಿಸಲಿ. ನಾವು ಚರ್ಚೆಗೆ ಹೋಗುತ್ತೇವೆ ಎಂದು ತಿಳಿಸಿದರು. ಈ ಬಗ್ಗೆ ಅಧಿವೇಶನ ಕರೆಯುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ. ಇದಕ್ಕಾಗಿ ವಿಶೇಷ ಅಧಿವೇಶನ ಕರೆದರೆ ಹೋಗಬೇಕೋ ಬೇಡವೋ ಎಂಬುದನ್ನು ನಾಯಕರು ಚರ್ಚಿಸಿ ನಿರ್ಣಯ ಕೈಗೊಳ್ಳುತ್ತಾರೆ ಎಂದರು.
ಶಾಸಕ ಮಹೇಶ ಟೆಂಗಿನಕಾಯಿ, ಶಿಸ್ತು ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಪಾಟೀಲ, ಮೇಯರ್ ಜ್ಯೋತಿ ಪಾಟೀಲ, ಉಪಮೇಯರ್ ಸಂತೋಷ ಚವ್ಹಾಣ ಸೇರಿದಂತೆ ಹಲವರಿದ್ದರು.