ಹನುಮಸಾಗರ ಪಟ್ಟಣದಲ್ಲಿ ನಿರ್ಮಿಸಲಾದ ಪೊಲೀಸ್ ವಸತಿಗೃಹವನ್ನು ಸೋಮವಾರ ಶಾಸಕ ದೊಡ್ಡನಗೌಡ ಪಾಟೀಲ ಉದ್ಘಾಟಿಸಿದರು.

ಹನುಮಸಾಗರ: ಪೊಲೀಸ್ ಇಲಾಖೆ ಜನಸ್ನೇಹಿಯಾಗಿ ಕಾರ್ಯನಿರ್ವಹಿಸುವ ಮೂಲಕ ಸಾರ್ವಜನಿಕರ ವಿಶ್ವಾಸ ಗಳಿಸಬೇಕು. ಇಲಾಖೆಗೆ ಸರ್ಕಾರ ಒದಗಿಸಿರುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ವಸತಿಗೃಹಗಳನ್ನು ಮನೆಯಂತೆ ಕಾಪಾಡಿಕೊಳ್ಳಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾದ ಪೊಲೀಸ್ ವಸತಿಗೃಹವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದ ವತಿಯಿಂದ ಸುಮಾರು ₹3.66 ಕೋಟಿ ವೆಚ್ಚದಲ್ಲಿ 12 ಸುಸಜ್ಜಿತ ಪೊಲೀಸ್ ವಸತಿಗೃಹಗಳನ್ನು ನಿರ್ಮಿಸಲಾಗಿದೆ. ಪೊಲೀಸ್ ಸಿಬ್ಬಂದಿ ಈ ಮನೆಗಳನ್ನು ಸ್ವಚ್ಛವಾಗಿ ಹಾಗೂ ಜವಾಬ್ದಾರಿಯಿಂದ ನಿರ್ವಹಿಸಬೇಕು. ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಣೆಗೆ ಉತ್ತಮ ವಸತಿ ವ್ಯವಸ್ಥೆ ಅತ್ಯಗತ್ಯವಾಗಿದ್ದು, ಸರ್ಕಾರ ಈ ನಿಟ್ಟಿನಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದು ಹೇಳಿದರು.

ಹಿಂದಿನ ದಿನಗಳಲ್ಲಿ ಪೊಲೀಸ್ ಸಿಬ್ಬಂದಿ ವರ್ಗಾವಣೆಯಾಗಿ ಬಂದಾಗ ಸೂಕ್ತ ಮನೆಗಳಿಗಾಗಿ ಅಲೆದಾಡಬೇಕಾಗುತ್ತಿತ್ತು. ಆದರೆ ಈಗಿನ ಅವಶ್ಯಕತೆಗಳಿಗೆ ಅನುಗುಣವಾಗಿ ಸುಸಜ್ಜಿತ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಸರ್ಕಾರ ಪೊಲೀಸ್ ಇಲಾಖೆಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುತ್ತಿದ್ದು, ಪೊಲೀಸರು ಸಹ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಿ ಜನಸ್ನೇಹಿ ಸೇವೆ ನೀಡಬೇಕು ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಎಲ್. ಅರಸಿದ್ಧಿ, ಇಲಾಖೆಗೆ ಅಗತ್ಯವಿರುವ ಹಲವು ಸೌಲಭ್ಯಗಳು ಈಗಾಗಲೇ ದೊರೆಯುತ್ತಿವೆ. ಕುಷ್ಟಗಿ ಹಾಗೂ ತಾವರಗೇರಾ ಭಾಗಗಳಲ್ಲಿ ಇನ್ನಷ್ಟು ಮೂಲಸೌಕರ್ಯಗಳ ಅಗತ್ಯವಿದೆ. ಶೀಘ್ರದಲ್ಲೇ 112 ತುರ್ತು ಸೇವಾ ವಾಹನಗಳು ಹಾಗೂ ಸಿಸಿ ಕ್ಯಾಮೆರಾ ವ್ಯವಸ್ಥೆಗಳನ್ನು ಕಾರ್ಯಾರಂಭಗೊಳಿಸಲಾಗುವುದು. ಇದರಿಂದ ಸಾರ್ವಜನಿಕರ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆ ನಿರ್ವಹಣೆಗೆ ಹೆಚ್ಚಿನ ನೆರವು ದೊರೆಯಲಿದೆ. ಪೊಲೀಸ್ ಇಲಾಖೆಗೆ ಅಗತ್ಯ ವಾಹನಗಳು, ವಸತಿ ಹಾಗೂ ಇತರ ಮೂಲಭೂತ ಸೌಲಭ್ಯಗಳನ್ನು ಇನ್ನಷ್ಟು ಹೆಚ್ಚಿಸುವ ಅಗತ್ಯವಿದ್ದು, ಈ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.

ಪೊಲೀಸ್ ಅಧಿಕಾರಿಗಳಾದ ಆರ್. ಹೇಮಂತಕುಮಾರ, ಸಿಪಿಐ ವಿಶ್ವನಾಥ ಹಿರೇಗೌಡರ, ಪಿಎಸ್‌ಐಗಳಾದ ಧನಂಜಯ ಎ., ಬಸಪ್ಪ ಎಲ್.ಟಿ., ಪೊಲೀಸ್ ವಸತಿ ನಿಲಯದ ಎಂಜಿನಿಯರ್ ವೀರಭದ್ರಪ್ಪ, ಎಎಸ್‌ಐಗಳಾದ ಶಿವಕುಮಾರ ಹಿರೇಮಠ, ಬಸನಗೌಡ ಪಾಟೀಲ, ಶಂಕರ ಮೇಟಿ, ಸಂಗೀತ ಶಿಕ್ಷಕ ಗ್ಯಾನಪ್ಪ ತಳವಾರ ಇದ್ದರು.