ಮಕ್ಕಳ ಗುಣಮಟ್ಟ ಶಿಕ್ಷಣಕ್ಕೆ ಪೊಲೀಸರು ಒತ್ತು ನೀಡಲಿ

| Published : May 31 2024, 02:16 AM IST

ಸಾರಾಂಶ

ಪೊಲೀಸ್ ಸಿಬ್ಬಂದಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ ಕರ್ನಾಟಕ ಪೊಲೀಸ್ ಕಲ್ಯಾಣ ಮತ್ತು ಶಿಕ್ಷಣ ಟ್ರಸ್ಟ್ ಹರಿಹರ ತಾಲೂಕು ಕೊಂಡಜ್ಜಿಯಲ್ಲಿ ಪೊಲೀಸ್- ಪಬ್ಲಿಕ್ ಶಾಲೆ ಆರಂಭಿಸಿದ್ದು, ಅದೇ ಮಾದರಿಯಲ್ಲಿ ದಾವಣಗೆರೆಯಲ್ಲೂ ಪೊಲೀಸ್ ಚಿಣ್ಣರ ಅಂಗಳ ಆರಂಭಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಹೇಳಿದ್ದಾರೆ.

- "ಪೊಲೀಸ್ ಚಿಣ್ಣರ ಅಂಗಳ " ಉದ್ಘಾಟಿಸಿ ಎಸ್‌ಪಿ ಉಮಾ ಪ್ರಶಾಂತ್ ಸಲಹೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಪೊಲೀಸ್ ಸಿಬ್ಬಂದಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ ಕರ್ನಾಟಕ ಪೊಲೀಸ್ ಕಲ್ಯಾಣ ಮತ್ತು ಶಿಕ್ಷಣ ಟ್ರಸ್ಟ್ ಹರಿಹರ ತಾಲೂಕು ಕೊಂಡಜ್ಜಿಯಲ್ಲಿ ಪೊಲೀಸ್- ಪಬ್ಲಿಕ್ ಶಾಲೆ ಆರಂಭಿಸಿದ್ದು, ಅದೇ ಮಾದರಿಯಲ್ಲಿ ದಾವಣಗೆರೆಯಲ್ಲೂ ಪೊಲೀಸ್ ಚಿಣ್ಣರ ಅಂಗಳ ಆರಂಭಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಹೇಳಿದರು.

ನಗರದ ಪಿ.ಜೆ. ಬಡಾವಣೆಯ ಕವಾಯಿತು ಮೈದಾನದಲ್ಲಿದ್ದ ಶಾಲೆಯನ್ನು ಪೊಲೀಸ್ ವಸತಿ ಗೃಹಗಳ ಸಮುಚ್ಛಯ ಬಳಿ ಸ್ಥಳಾಂತರಗೊಂಡಿದ್ದನ್ನು ಉದ್ಘಾಟಿಸಿ ಮಾತನಾಡಿದ ಅವರು, "ಪೊಲೀಸ್ ಚಿಣ್ಣರ ಅಂಗಳ "ವೆಂದು ಪುನರುಜ್ಜೀವನಗೊಳಿಸಲಾಗಿದೆ. ಇದರಿಂದ ನಮ್ಮ ಪೊಲೀಸ್ ಸಿಬ್ಬಂದಿ ಮಕ್ಕಳಿಗೆ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ, ಮೌಲ್ಯಯುತ ಶಿಕ್ಷಣ ನೀಡುವ ಸದುದ್ದೇಶವಿದೆ ಎಂದರು.

60 ಮಕ್ಕಳಿಗೆ ಅವಕಾಶ:

ಪ್ರಿಕೆಜಿ, ಎಲ್‌ಕೆಜಿ, ಯುಕೆಜಿಯಲ್ಲಿ ಒಟ್ಟು 60 ಮಕ್ಕಳಿಗೆ ಪ್ರವೇಶಕ್ಕೆ ಅವಕಾಶ ಇದೆ. ಈವರೆಗೆ 30 ಮಕ್ಕಳು ಪ್ರವೇಶ ಪಡೆದಿದ್ದಾರೆ. ಪೊಲೀಸ್ ಅಧಿಕಾರಿ, ಸಿಬ್ಬಂದಿ ಮಕ್ಕಳಿಗೆ ಇಲ್ಲಿ ಮೊದಲ ಆದ್ಯತೆ ನೀಡಲಾಗುವುದು. ಆಕಸ್ಮಾತ್ ನಿಗದಿತ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿ ಮಕ್ಕಳು ಪ್ರವೇಶ ಪಡೆಯದಿದ್ದರೆ, ಸಾರ್ವಜನಿಕರ ಮಕ್ಕಳಿಗೆ ಪ್ರವೇಶಾವಕಾಶ ನೀಡಿ, ದಾಖಲಾತಿಗೆ ಅನುವು ಮಾಡಿಕೊಡಲಾಗುವುದು ಎಂದು ಹೇಳಿದರು.

ಹರಿಹರ ತಾಲೂಕಿನ ಕೊಂಡಜ್ಜಿಯ ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ 1ರಿಂದ 10ನೇ ತರಗತಿವರೆಗೆ ಉತ್ತಮ ಶಿಕ್ಷಣವನ್ನು ಮಕ್ಕಳಿಗೆ ನೀಡುತ್ತಿದೆ. ಒಳ್ಳೆಯ ಗುಣಮಟ್ಟದ ಮತ್ತು ಮೌಲ್ಯಯುತ ಶಿಕ್ಷಣ ಒದಗಿಸಲಾಗುತ್ತಿದೆ. ಕಳೆದ ವರ್ಷಕ್ಕಿಂತಲೂ ಈ ಸಾಲಿನಲ್ಲಿ 430ಕ್ಕೂ ಹೆಚ್ಚು ಮಕ್ಕಳು ಅಲ್ಲಿ ಪ್ರವೇಶ ಪಡೆದಿದ್ದಾರೆ. ದಾವಣಗೆರೆಯಲ್ಲಿ ಉತ್ತಮ ಶಿಕ್ಷಣ ಸಂಸ್ಥೆಗಳಿದ್ದರೂ, ನಮ್ಮ ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ಪ್ರವೇಶಾತಿ ಸಂಖ್ಯೆ ಭರ್ತಿಯಾಗಿದ್ದರೂ, ಮಕ್ಕಳಿಗೆ ಪ್ರವೇಶ ಕಲ್ಪಿಸಲು ಸಾಕಷ್ಟು ಪಾಲಕರು ಮನವಿ ಮಾಡುತ್ತಿದ್ದಾರೆ. ಇದು ನಮ್ಮ ಶಾಲೆಯ ಗುಣಮಟ್ಟದ ಶಿಕ್ಷಣಕ್ಕೆ ಸಿಗುತ್ತಿರುವ ಸ್ಪಂದನೆ ಎಂದು ಹರ್ಷ ವ್ಯಕ್ತಪಡಿಸಿದರು.

ದಾವಣಗೆರೆಯಲ್ಲಿ 500ಕ್ಕೂ ಹೆಚ್ಚು ಪೊಲೀಸ್ ಕುಟುಂಬಗಳಿವೆ. ನಮ್ಮೆಲ್ಲಾ ಅಧಿಕಾರಿಗಳು, ಸಿಬ್ಬಂದಿ ಮಕ್ಕಳಿಗೆ ಕಡಿಮೆ ಶುಲ್ಕದಲ್ಲಿ ಉತ್ತಮ ಗುಣಮಟ್ಟದ, ಮೌಲ್ಯಯುತ ಶಿಕ್ಷಣ ಒದಗಿಸಬೇಕೆಂಬ ಸದುದ್ದೇಶದಿಂದ ಜಿಲ್ಲಾ ಕೇಂದ್ರದಲ್ಲೇ ಪೊಲೀಸ್ ವಸತಿ ಗೃಹಗಳ ಸಮೀಪವೇ ಪೊಲೀಸ್ ಚಿಣ್ಣರ ಅಂಗಳ ಸ್ಥಾಪಿಸಿದ್ದೇವೆ. ಆದಷ್ಟು ಬೇಗನೆ ಇಲ್ಲಿಗೆ ಶಿಕ್ಷಕರನ್ನು ಸಹ ನೇಮಕ ಮಾಡಲಿದ್ದೇವೆ. ಮಕ್ಕಳು ಆಡುತ್ತಲೇ, ಆಟೋಟಗಳಿಂದಲೂ ಶಿಕ್ಷಣ ಪಡೆಯಬೇಕೆಂಬ ಕಾರಣಕ್ಕೆ ಸಾಕಷ್ಟು ಸೌಲಭ್ಯ ಕಲ್ಪಿಸಿದ್ದೇವೆ. ಶೀಘ್ರವೇ ಮತ್ತಷ್ಟು ಆಟೋಪಕರಣಗಳನ್ನು ಇಲ್ಲಿಗೆ ಒದಗಿಸುತ್ತೇವೆ ಎಂದು ತಿಳಿಸಿದರು.

ಜೂ.3ರಿಂದ ಕಾರ್ಯಾರಂಭ:

ಪೊಲೀಸ್ ಚಿಣ್ಣರ ಅಂಗಳವು ಜೂ.3ರಿಂದ ಕಾರ್ಯಾರಂಭವಾಗಲಿದೆ. ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೆ ಸಮೀಪದಲ್ಲೇ ಪೊಲೀಸ್ ಚಿಣ್ಣರ ಅಂಗಳ ಇದೆ. ಹರಿಹರ ತಾಲೂಕು ಕೊಂಡಜ್ಜಿ ಸೇರಿದಂತೆ ಇತರೆಡೆ ದೂರ ದೂರಕ್ಕೆ ಹೋಗುವುದು ತಪ್ಪಲಿದೆ. ಅಲ್ಲದೇ, ಕಡಿಮೆ ಶುಲ್ಕದಲ್ಲಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ‍ವು ದೊರೆಯಲಿದೆ. ಶಿಕ್ಷಕ ಸಮೂಹವು ಸಹ ನಮ್ಮ ಇಲಾಖೆ ನಿರೀಕ್ಷೆ ಮತ್ತು ಆಶಯದಂತೆ ನಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ, ಮೌಲ್ಯಯುತ ಶಿಕ್ಷಣ ನೀಡುವ ವಿಶ್ವಾಸವಿದೆ ಎಂದು ಎಸ್‌ಪಿ ಉಮಾ ಪ್ರಶಾಂತ ಹೇಳಿದರು.

ಪೂರ್ವ ವಲಯ ಪೊಲೀಸ್ ಮಹಾನಿರೀಕ್ಷಕ ಡಾ. ಕೆ.ತ್ಯಾಗರಾಜನ್‌, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ.ಸಂತೋಷ, ಜಿ.ಮಂಜುನಾಥ, ಗ್ರಾಮಾಂತರ ಪೊಲೀಸ್ ಉಪಾಧೀಕ್ಷಕ ಪ್ರಶಾಂತ ಸಿದ್ದನಗೌಡ, ನಗರ ಡಿವೈಎಸ್‌ಪಿ ಮಲ್ಲೇಶ ದೊಡ್ಡಮನಿ, ಕೆ.ಎಚ್. ಸೋಮಶೇಖರಪ್ಪ, ಸಂಗೀತಾ ತ್ಯಾಗರಾಜನ್‌, ಅಧಿಕಾರಿ, ಸಿಬ್ಬಂದಿ, ಕುಟುಂಬ ವರ್ಗದವರು ಇದ್ದರು. ಕಾರ್ಯಕ್ರಮದಲ್ಲಿ ಪಲ್ಲವಿ ಪತ್ತಾರ್, ಯತೀಶ್ಚಂದ್ರ ಕಾರ್ಯಕ್ರಮ ನಡೆಸಿಕೊಟ್ಟರು.

- - - -30ಕೆಡಿವಿಜಿ7, 8:

ದಾವಣಗೆರೆ ಪೊಲೀಸ್ ವಸತಿ ಗೃಹಗಳ ಬಳಿ ಪೊಲೀಸ್‌ ಚಿಣ್ಣರ ಅಂಗಳವನ್ನು ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ ಉದ್ಘಾಟಿಸಿದರು. ಐಜಿಪಿ ಡಾ.ತ್ಯಾಗರಾಜನ್‌, ಸಂಗೀತಾ ತ್ಯಾಗರಾಜನ್‌, ಪೊಲೀಸ್ ಅಧಿಕಾರಿ, ಸಿಬ್ಬಂದಿ, ಕುಟುಂಬ ವರ್ಗದವರು ಇದ್ದಾರೆ.