ಪೊಲೀಸ್‌ ಅಧಿಕಾರಿಗಳು ಜನರಿಗೆ ಇನ್ನಷ್ಟು ಹತ್ತಿರವಾಗಲಿ : ಸಿ.ಎನ್. ಬಸವರಾಜಪ್ಪ

| Published : Apr 03 2024, 01:38 AM IST / Updated: Apr 03 2024, 10:25 AM IST

ಪೊಲೀಸ್‌ ಅಧಿಕಾರಿಗಳು ಜನರಿಗೆ ಇನ್ನಷ್ಟು ಹತ್ತಿರವಾಗಲಿ : ಸಿ.ಎನ್. ಬಸವರಾಜಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ವರ್ಷದ 365 ದಿನವೂ ಹಗಲು- ಇರುಳೆನ್ನದೇ ಕಾರ್ಯನಿರ್ವಹಿಸುವ ಪೊಲೀಸ್‌ ಅಧಿಕಾರಿ, ಸಿಬ್ಬಂದಿ ನ್ಯಾಯ, ರಕ್ಷಣೆ ಬಯಸಿ ಬಂದ ಜನರ ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸುವ ಮೂಲಕ, ಅವರಿಗೆ ಇನ್ನಷ್ಟು ಹತ್ತಿರವಾಗಬೇಕು  ಎಂದು ಸಿ.ಎನ್. ಬಸವರಾಜಪ್ಪ ದಾವಣಗೆರೆಯಲ್ಲಿ ಹೇಳಿದ್ದಾರೆ.

 ದಾವಣಗೆರೆ :  ವರ್ಷದ 365 ದಿನವೂ ಹಗಲು- ಇರುಳೆನ್ನದೇ ಕಾರ್ಯನಿರ್ವಹಿಸುವ ಪೊಲೀಸ್‌ ಅಧಿಕಾರಿ, ಸಿಬ್ಬಂದಿ ನ್ಯಾಯ, ರಕ್ಷಣೆ ಬಯಸಿ ಬಂದ ಜನರ ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸುವ ಮೂಲಕ, ಅವರಿಗೆ ಇನ್ನಷ್ಟು ಹತ್ತಿರವಾಗಬೇಕು. ಆಗಲೇ ಇಲಾಖೆ ಮೇಲಿನ ಜನರ ನಂಬಿಕೆ ಮತ್ತಷ್ಟು ಗಟ್ಟಿಯಾಗುತ್ತದೆ ಎಂದು ನಿವೃತ್ತ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಸಿ.ಎನ್. ಬಸವರಾಜಪ್ಪ ಹೇಳಿದರು.

ನಗರದ ಪೊಲೀಸ್ ಕವಾಯಿತು ಮೈದಾನದಲ್ಲಿ ಮಂಗಳವಾರ ಜಿಲ್ಲಾ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಯಾವುದೇ ಜನರಿಗೆ ಸಮಸ್ಯೆ, ಸಂಕಷ್ಟ ಬಂದರೆ ಮೊದಲು ದೇವರನ್ನು ನೆನೆದು, ನಂತರ ಮಾಡುವ ಮೊದಲ ಕೆಲಸವೇ ಪೊಲೀಸರನ್ನು ನಂಬಿ, ಸಹಾಯಕ್ಕೆ ಮೊರೆ ಹೋಗುತ್ತಾರೆ. ಅಂತಹ ಪೊಲೀಸ್ ಸಿಬ್ಬಂದಿಗೆ ಮೇಲಾಧಿಕಾರಿಗಳೂ ಸಕಾಲಕ್ಕೆ, ಸೂಕ್ತವಾಗಿ ಸ್ಪಂದಿಸಬೇಕು ಎಂದರು.

ಪೊಲೀಸ್ ವೃತ್ತಿಯು ಮಹತ್ವದ ಹುದ್ದೆಯಾಗಿದೆ. ಹುಟ್ಟಿನಿಂದ ಮಣ್ಣು ಸೇರುವವರೆಗೂ ಪ್ರತಿಯೊಬ್ಬರೂ ಕಾನೂನು ಚೌಕಟ್ಟಿನಲ್ಲೇ ಬಾಳಬೇಕು. ಪೊಲೀಸ್ ಹುದ್ದೆ ಬ್ರಹ್ಮ ಹುದ್ದೆ ಇದ್ದಂತೆ. ಬ್ರಹ್ಮ ಒಮ್ಮೆ ಮಾತ್ರ ಜನರ ಹಣೆಬರಹ ಬರೆಯಬಹುದು. ಆದರೆ, ಪೊಲೀಸ್ ಇಲಾಖೆಯು ಆ ಹಣೆಬರಹವನ್ನೂ ಅಳಿಸಿ, ಹೊಸದನ್ನು ಬರೆಯಬಹುದು. ಯಾವುದೇ ವ್ಯಕ್ತಿ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದರೆ, ಅಂತಹವರನ್ನು ತಿದ್ದುವಂತಹ ಶಕ್ತಿ ಪೊಲೀಸ್ ಇಲಾಖೆಗೆ ಇದೆ ಎಂದು ತಿಳಿಸಿದರು.

ಸರ್ಕಾರದ ಯಾವುದೇ ಇಲಾಖೆಗಳಲ್ಲಿ ಕೆಲಸ ಮಾಡುವುದಕ್ಕಿಂತಲೂ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವುದು ಅತಿ ಮಹತ್ವದ್ದಾಗಿದೆ. ಜನರನ್ನು ಹತ್ತಿರದಿಂದ ಬಲ್ಲ, ಅಂತಹವರ ಕಷ್ಟಕಾರ್ಪಣ್ಯಕ್ಕೆ ಸ್ಪಂದಿಸುವ ಇಲಾಖೆ ಇದು. ಪೊಲೀಸ್ ಅಧಿಕಾರಿ, ಸಿಬ್ಬಂದಿ ಒಮ್ಮೊಮ್ಮೆ ವೈದ್ಯ, ಎಂಜಿನಿಯರ್‌, ನ್ಯಾಯಾಧೀಶ ಹೀಗೆ ನಾನಾ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುವುದು ಅನಿವಾರ್ಯ. ಆ ಮೂಲಕ ಸಾರ್ವಜನಿಕರು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಹಗಲಿರುಳು ಕೆಲಸ ಮಾಡಬೇಕಾಗುತ್ತದೆ. ಪೊಲೀಸರು ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುತ್ತಾರೆಂಬ, ಸಮಸ್ಯೆ ಪರಿಹರಿಸುತ್ತಾರೆ ಎಂಬ ಭರವಸೆ ಎಲ್ಲರಲ್ಲಿದೆ. ಆ ಭರವಸೆ, ನಂಬಿಕೆಯನ್ನು ಉಳಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಮಾತನಾಡಿ, 2.4.1965 ರಿಂದಲೂ ಏ.2ನೇ ತಾರೀಖನ್ನು ಪ್ರತಿ ವರ್ಷ ರಾಜ್ಯ ಪೊಲೀಸ್ ಧ್ವಜ ದಿನಾಚರಣೆಯಾಗಿ ಆಚರಿಸುತ್ತಿದ್ದೇವೆ. ಇಲಾಖೆಯಲ್ಲಿ ನಿರಂತರ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿದ ಅಧಿಕಾರಿ, ಸಿಬ್ಬಂದಿ ಸೇವೆ ಸ್ಮರಿಸುವ ದಿನವಿದು. ಅಂಥವರ ಕಲ್ಯಾಣವೇ ನಮ್ಮ ಗುರಿ. ಇದು ಅಧಿಕಾರಿ, ಸಿಬ್ಬಂದಿಗೆ ಸ್ಫೂರ್ತಿಯೂ, ಮಾದರಿಯೂ ಆಗಬೇಕು ಎಂದರು.

ನಮ್ಮ ಜಿಲ್ಲೆಗೆ ಪೊಲೀಸ್ ಧ್ವಜಗಳಿಂದ ಬಂದ ಹಣದಲ್ಲಿ ಶೇ.50ರಷ್ಟು ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಕಲ್ಯಾಣ ನಿಧಿಗೆ ಉಳಿದ ಶೇ.50ರಷ್ಟು ಹಣವನ್ನು ಕೇಂದ್ರದ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿಗೆ ಕಳುಹಿಸಲಾಗುವುದು. ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಒಟ್ಟು 19 ಪೊಲೀಸ್ ಅಧಿಕಾರಿ- ಸಿಬ್ಬಂದಿ ನಿವೃತ್ತರಾಗಿದ್ದು, ಅಂತಹವರಿಗೆ ಇಂದು ಗೌರವಿಸಿ ಬೀಳ್ಕೊಡಲಾಗುತ್ತಿದೆ ಎಂದರು.

ಪೂರ್ವ ವಲಯ ಪೊಲೀಸ್ ಮಹಾನಿರೀಕ್ಷಕ ಡಾ. ಕೆ.ತ್ಯಾಗರಾಜನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ.ಸಂತೋಷ, ಬಿ.ಮಂಜುನಾಥ, ನಿವೃತ್ತ ಪೊಲೀಸ್ ಅಧಿಕಾರಿಗಳಾದ ಬಿ.ಬಿ.ಸಕ್ರಿ, ಕೆ.ಪಿ.ಚಂದ್ರಪ್ಪ, ಲೋಕಾಯುಕ್ತ ಎಸ್‌ಪಿ ಕೌಲಾಪುರೆ, ಬಸವರಾಜ, ಲಿಂಗಾರೆಡ್ಡಿ, ಇತರೆ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.

ನಿವೃತ್ತ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಜಿಲ್ಲಾ ಸಶಸ್ತ್ರ ಮೀಸಲು ಪಡೆ ತಂಡ, ನಗರ ಉಪ ವಿಭಾಗ, ಮಹಿಳಾ ಪೊಲೀಸ್ ತಂಡ, ಚನ್ನಗಿರಿ ಉಪ ವಿಭಾಗ, ಗ್ರಾಮಾಂತರ ಉಪ ವಿಭಾಗದ ತಂಡಗಳು ಶಸ್ತ್ರಸಜ್ಜಿತ ಗೌರವ ವಂದನೆ ಸಲ್ಲಿಸಿದವು.