ಸಾರಾಂಶ
ಸವಣೂರು: ಪಟ್ಟಣವನ್ನು ಸ್ವಚ್ಛ ಸುಂದರ ಪಟ್ಟಣವನ್ನಾಗಿಸಲು ಪ್ರತಿಯೊಬ್ಬ ಪ್ರಜೆಗಳು ಪುರಸಭೆ ಸಿಬ್ಬಂದಿಗೆ ಸಹಕಾರ ನೀಡಬೇಕೆಂದು ಶಿಗ್ಗಾಂವ-ಸವಣೂರ ಶಾಸಕ ಯಾಸೀರಅಹ್ಮದಖಾನ ಪಠಾಣ ಹೇಳಿದರು.ಪಟ್ಟಣದ ಶುಕ್ರವಾರ ಪೇಟೆಯಲ್ಲಿ ಪುರಸಭೆ ವತಿಯಿಂದ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನ ಮತ್ತು ತೆರಿಗೆ ವಸೂಲಾತಿ ಅಂದೋಲನ ಕಾರ್ಯಕ್ರಮಕ್ಕೆ ಶಾಸಕ ಯಾಸೀರಅಹ್ಮದಖಾನ ಪಠಾಣ ಕಸ ಗೂಡಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಪುರಸಭೆ ವತಿಯಿಂದ ನಾಗರಿಕರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ದಿಸೆಯಲ್ಲಿ ಸವಣೂರ ಪಟ್ಟಣದ ಪ್ರತಿ ವಾರ್ಡುಗಳಲ್ಲಿ ಪುರಸಭೆಯ ಎಲ್ಲ ಸದಸ್ಯರು, ಸಿಬ್ಬಂದಿಗಳು, ಸಾರ್ವಜನಿಕರ ಸಹಭಾಗಿತ್ವದಲ್ಲಿ ಸ್ವಚ್ಛತೆ ಕಾರ್ಯ ನಡೆಯಲಿದೆ ಎಂದರು.ಸವಣೂರ ಪಟ್ಟಣ ಬಹಳಷ್ಟು ನಿರ್ಲಕ್ಷ್ಯಕ್ಕೆ ಒಳಗಾಗಿ ಯಾವುದೇ ವಾರ್ಡಿಗಳಲ್ಲಿನ ಓಣಿಗಳಿಗೆ ಹೋಗಿ ಗಲೀಜು, ಸ್ವಚ್ಛತೆಯಿಲ್ಲ. ನೀರಿನ ಸಮಸ್ಯೆಯಿದೆ. ಈ ಕುರಿತು ವಿಶೇಷ ಅನುದಾನಕ್ಕೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಈಗಾಗಲೇ ರಾಜ್ಯ ಸರಕಾರ ಸವಣೂರ ಅಭಿವೃದ್ಧಿಗಾಗಿ ೧೦ ಕೋಟಿ ವಿಶೇಷ ಅನುದಾನವನ್ನು ನೀಡಿದೆ ಇದರ ಸದ್ಭಳಿಕೆಯಾಗಬೇಕು.ಅಭಿವೃದ್ಧಿಗಾಗಿ ಕ್ರಿಯಾ ಯೋಜನೆ ತಯಾರಿಸಿದಾಗ ಅವಶ್ಯಕತೆ ಇದ್ದ ಕಡೆ ಅನುದಾನ ಹೋಗುವುದಿಲ್ಲ. ಅವಶ್ಯಕತೆ ಇಲ್ಲದ ಕಡೆಗೆ ಅನುದಾನ ಹರಿದು ಹೋಗುತ್ತದೆ. ಹೀಗಾಗಿ ಸವಣೂರ ಪಟ್ಟಣಕ್ಕೆ ಇಂದು ಜಿಲ್ಲಾಧಿಕಾರಿ ಮತ್ತು ಪಿ.ಡಿ ಅವರ ನೇತೃತ್ವದಲ್ಲಿ ಸ್ವಚ್ಛತಾ ಆಂದೋಲನಾ ಮೂಲಕ ಪಟ್ಟಣದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹೊಸದೊಂದು ಪ್ರಯತ್ನವಾಗಿದೆ ಎಂದರು.ತನ್ನದೇಯಾದ ಇತಿಹಾಸ ಹೊಂದಿರುವ ಸವಣೂರ ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಲಭ್ಯವಿರುವ ಅನುದಾನವನ್ನು ಸದ್ಭಳಕೆ ಮಾಡುವ ಜೊತೆಗೆ ಸರಕಾರಕ್ಕೆ ಇನ್ನು ಹೆಚ್ಚಿನ ಅನುದಾನದ ಬೇಡಿಕೆ ಇಡುವ ಮೊದಲು ಪಟ್ಟಣದ ಮೂಲಭೂತ ಅವಶ್ಯಕತೆಗಳನ್ನು ತಿಳಿದುಕೊಳ್ಳುವುದು ಅವಶ್ಯವಿದೆ ಎಂದರು.ಸಾರ್ವಜನಿಕರು ಪಟ್ಟಣದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ತಮ್ಮ ಆಸ್ತಿಯ ತೆರಿಗೆ ಹಣವನ್ನು ಕಡ್ಡಾಯವಾಗಿ ತುಂಬುವುದು ನಿಮ್ಮ ಜವಾಬ್ದಾರಿಯಾಗಿದೆ. ಸವಣೂರ ಪುರಸಭೆ ತೆರಿಗೆ ವಸೂಲಾತಿಯಲ್ಲಿ ಬಹಳಷ್ಟು ಹಿಂದೆ ಉಳಿದಿದೆ. ಪಟ್ಟದ ಸಮಸ್ತ ನಾಗರಿಕರು ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ತೆರಿಗೆ ತುಂಬಿದಲ್ಲಿ ಮಾತ್ರ ಪಟ್ಟಣದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅನುಕೂಲವಾಗಲಿದೆ ಎಂದರು. ನಂತರ ಸವಣೂರು ಪಟ್ಟಣದ ವಿವಿಧ ವಾರ್ಡುಗಳಲ್ಲಿನ ಕೊಳಚೆ ಪ್ರದೇಶಗಳಿಗೆ ಶಾಸಕ ಯಾಸೀರಅಹ್ಮದಖಾನ ಪಠಾಣ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಯೋಜನಾ ನಿರ್ದೇಶಕರ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಯೋಜನಾ ನಿರ್ದೇಶಕಿ ಮಮತಾ ಹೊಸಗೌಡ್ರ, ಪುರಸಭೆ ಅಧ್ಯಕ್ಷ ಅಲ್ಲಾವುದ್ದೀನ ಮನಿಯಾರ, ತಹಸೀಲ್ದಾರ್ ಭರತರಾಜ್ ಕೆ.ಎನ್., ಪುರಸಭೆ ಮುಖ್ಯಾಧಿಕಾರಿ ನೀಲಪ್ಪ ಹಾದಿಮನಿ, ಮುಖ್ಯ ಎಂಜಿನಿಯರ್ ನಾಗರಾಜ ಮಿರ್ಜಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ. ಮುಲ್ಲಾ, ಪುರಸಭೆ ಸದಸ್ಯರಾದ ಫೀರಅಹ್ಮದ ಗವಾರಿ, ಅಶೋಕ ಮನ್ನಂಗಿ, ಅಜೀಮ್ ಮಿರ್ಜಾ, ಉಮೇಶ ಕಲ್ಮಠ, ಅತಾವುಲ್ಲಾಖಾನ ಪಠಾಣ, ಲಕ್ಷ್ಮಣ ಕನವಳ್ಳಿ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.