ಸಾರಾಂಶ
ಸಾರ್ವಜನಿಕರು ಕಣ್ಣಿನ ತಪಾಸಣಾ ಶಿಬಿರ ಶಿಬಿರದ ಪ್ರಯೋಜನ ಪಡೆಯಬೇಕು ಎಂದು ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷ ಡಾ. ರಾಜಶೇಖರ ಬಳ್ಳಾರಿ ಹೇಳಿದರು.
ಗದಗ: ಅಂತಾರಾಷ್ಟ್ರೀಯ ಸಾಮಾಜಿಕ ಸೇವಾ ಸಂಸ್ಥೆಯಾದ ರೋಟರಿ ಕ್ಲಬ್ ಗದಗ ಘಟಕ ಈಗಾಗಲೇ ನಿರಂತರವಾಗಿ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರ ಏರ್ಪಡಿಸುತ್ತ ಬಂದಿದ್ದು, ಇದೀಗ ಕಣ್ಣಿನ ತಪಾಸಣಾ ಶಿಬಿರ ಏರ್ಪಡಿಸಿದೆ. ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆಯಬೇಕು ಎಂದು ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷ ಡಾ. ರಾಜಶೇಖರ ಬಳ್ಳಾರಿ ಹೇಳಿದರು.
ನಗರದ ರೋಟರಿ ಐಕೇರ್ ಸೆಂಟರ್‌ನಲ್ಲಿ ರೋಟರಿ ಸಂಸ್ಥೆ ಹಾಗೂ ರೋಟರಿ ಕ್ಲಬ್ ವೆಲ್ಫೇರ್ ಸೊಸೈಟಿ ಸಂಯುಕ್ತಾಶ್ರಯದಲ್ಲಿ ಪ್ರಾರಂಭಿಸಲಾದ ಸೋಮವಾರದಿಂದ ಶುಕ್ರವಾರದವರೆಗೆ ದಿನಾಲು ಸಂಜೆ 5 ರಿಂದ 7ರ ವರೆಗೆ ನಿರಂತರವಾಗಿ ನಡೆಯಲಿರುವ ಕಣ್ಣಿನ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.ಜನಸಾಮಾನ್ಯರಿಗೂ ಈ ಸೌಲಭ್ಯ ಸಿಗಲೆಂಬ ಸದುದ್ದೇಶದಿಂದ ₹20 ಹೆಸರು ನೋಂದಣಿಗೆ ನಿಗದಿಗೊಳಿಸಿದ್ದು, ಕಣ್ಣಿನ ಪರೀಕ್ಷೆಯ ಬಳಿಕ ಆಪರೇಷನ್ ಅಗತ್ಯವಿದ್ದವರಿಗೆ ತಜ್ಞ ವೈದ್ಯರ ಸಲಹೆಯೊಂದಿಗೆ ರೋಟರಿ ಕ್ಲಬ್‌ನಿಂದ ರೋಟರಿ ಐಕೇರ್ ಸೆಂಟರ್‌ನಲ್ಲಿ ಪ್ರತಿ ತಿಂಗಳು ಕೈಗೊಳ್ಳುವ ಉಚಿತ ನೇತ್ರ ಚಿಕಿತ್ಸಾ ಶಿಬಿರದಲ್ಲಿ ಚಿಕಿತ್ಸೆ ನೀಡಲಾಗುವುದು ಎಂದರು.ರೋಟರಿ ಸಂಸ್ಥೆಯ ಅಧ್ಯಕ್ಷ ಡಾ. ರೇವಣಸಿದ್ದೇಶ್ವರ ಉಪ್ಪಿನ ಅಧ್ಯಕ್ಷತೆ ವಹಿಸಿದ್ದರು. ಕ್ಲಬ್ ಕಾರ್ಯದರ್ಶಿ ಸಂತೋಷ ಅಕ್ಕಿ, ಶ್ರೀಧರ ಸುಲ್ತಾನಪೂರ, ಬಾಲಕೃಷ್ಣ ಕಾಮತ್, ಡಾ. ಎಸ್.ಡಿ. ಸಜ್ಜನರ, ಡಾ. ರಾಧಿಕಾ ಬಳ್ಳಾರಿ, ಎಚ್.ಎಸ್. ಪಾಟೀಲ, ಶಿವಾಚಾರ್ಯ ಹೊಸಳ್ಳಿಮಠ, ಅಕ್ಷಯ್ ಶೆಟ್ಟಿ, ಕಾರ್ತಿಕ್ ಮುತ್ತಿನಪೆಂಡಿಮಠ, ಅನೀಲಕುಮಾರ ಹಂದ್ರಾಳ, ಡಾ. ಪ್ರದೀಪ ಉಗಲಾಟ, ವಿಶ್ವನಾಥ ಯಳಮಲಿ, ರುದ್ರೇಶ್ ಬಳಿಗಾರ ಸೇರಿದಂತೆ ಮುಂತಾದವರಿದ್ದರು.