ಸಾರಾಂಶ
ಗದುಗಿನಲ್ಲಿ ಮಹಾಸಭಾದ ಉದ್ದೇಶಿತ ಸಮುದಾಯ ಭವನ ನಿರ್ಮಾಣದ ಕಟ್ಟಡ ಕಾಮಗಾರಿ ತೀವ್ರಗೊಳಿಸಿ ಸಾಧ್ಯವಾದಷ್ಟು ಬೇಗನೆ ಪೂರ್ಣಗೊಳಿಸಬೇಕು
ಗದಗ: ಹಾನಗಲ್ ಕುಮಾರೇಶ್ವರ ಮಹಾಸ್ವಾಮಿಗಳು ಸ್ಥಾಪಿಸಿದ ಅಖಿಲ ಭಾರತ ಲಿಂಗಾಯತ ಮಹಾಸಭಾದ ಉದ್ದೇಶ ಸಾಕಾರಗೊಳ್ಳಲು, ಸಮಾಜ ಸನ್ಮಾರ್ಗದಲ್ಲಿ ಮುನ್ನಡೆಯಲು ಎಲ್ಲ ಒಳಪಂಗಡ ಒಗ್ಗೂಡಿಸಿಕೊಂಡು ಮುನ್ನಡೆಯುವದು ಇಂದಿನ ಪ್ರಮುಖ ಅವಶ್ಯಕತೆಯಾಗಿದೆ ಎಂದು ಹೊಸಳ್ಳಿಯ ಬೂದೀಶ್ವರ ಸಂಸ್ಥಾನಮಠದ ಅಭಿನವ ಬೂದೀಶ್ವರ ಶ್ರೀಗಳು ಹೇಳಿದರು.
ಅವರು ಗುರುವಾರ ಗದಗ ತಾಲೂಕಿನ ಹೊಳ್ಳಿಯ ಬೂದೀಶ್ವರ ಸಂಸ್ಥಾನಮಠದಲ್ಲಿ ಅಖಿಲ ಭಾರತ ಲಿಂಗಾಯತ ಮಹಾಸಭಾ ಗದಗ ಜಿಲ್ಲಾ ಘಟಕದ ಮಾಸಿಕ ಸಭೆ ಹಾಗೂ ನೂತನ ವರ್ಷದ ದಿನದರ್ಶಿಕೆ ಬಿಡುಗಡೆ ಸಮಾರಂಭದ ಸಾನ್ನಿಧ್ಯ ವಹಿಸಿ ದಿನದರ್ಶಿಕೆ ಬಿಡುಗಡೆಗೊಳಿಸಿ ಮಾತನಾಡಿದರು.ಗದುಗಿನಲ್ಲಿ ಮಹಾಸಭಾದ ಉದ್ದೇಶಿತ ಸಮುದಾಯ ಭವನ ನಿರ್ಮಾಣದ ಕಟ್ಟಡ ಕಾಮಗಾರಿ ತೀವ್ರಗೊಳಿಸಿ ಸಾಧ್ಯವಾದಷ್ಟು ಬೇಗನೆ ಪೂರ್ಣಗೊಳಿಸಬೇಕು, ಅದಕ್ಕೆ ಬೇಕಿರುವ ಎಲ್ಲ ರೀತಿಯ ಸಂಪನ್ಮೂಲ ಕ್ರೂಢೀಕರಣ ಮಾಡಿಕೊಂಡು ಸಮಾಜದ ಸದ್ಭಳಕೆ ಉಪಯೋಗ ಮಾಡಿಕೊಳ್ಳಲು ಜಿಲ್ಲಾ ಮತ್ತು ತಾಲೂಕು ಘಟಕಗಳ ಪದಾಧಿಕಾರಿಗಳು ಕಂಕಣ್ಣಬದ್ಧರಾಗಬೇಕು ಎಂದು ಆಶೀರ್ವದಿಸಿದರು.
ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ, ಸದಾಶಿವಯ್ಯ ಮದರಿಮಠ ಮಾತನಾಡಿದರು. ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮುರುಘರಾಜೇಂದ್ರ ಬಡ್ನಿ ವಂದಿಸಿದರು. ಈ ಸಂದರ್ಭದಲ್ಲಿ ಮಹಾಸಭಾದ ರಾಜ್ಯ ಕಾರ್ಯಕಾರಿಣಿ ಸಮಿತಿಯ ಸದಸ್ಯ ಸಂಗನಗೌಡ ಪಾಟೀಲ ಸೇರಿದಂತೆ ಗದಗ ಹಾಗೂ ತಾಲೂಕು ಘಟಕಗಳ ಪದಾಧಿಕಾರಿಗಳು, ಕಾರ್ಯಕಾರಿ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.