ಸಾರಾಂಶ
ರಾಮಮಂದಿರ ನಿರ್ಮಾಣಕ್ಕೂ ಪ್ರತಿಯೊಬ್ಬರು ದೇಣಿಗೆ ನೀಡಿದ್ದಾರೆ. ಅದು ಬಿಜೆಪಿಯವರಿಗೆ ಮಾತ್ರ ಸೀಮಿತವಾಗಿಲ್ಲ. ಹೀಗಾಗಿ ಎಲ್ಲರನ್ನು ಮಂದಿರ ಲೋಕಾರ್ಪಣೆಗೆ ದೇಶದ ಪ್ರತಿಯೊಬ್ಬರನ್ನು ಆಮಂತ್ರಿಸಬೇಕು.
ಕಾರವಾರ:
ಬಿಜೆಪಿಯವರು ನಿಜವಾದ ರಾಮಭಕ್ತರಾಗಿದ್ದರೆ ರಾಮಮಂದಿರವನ್ನು ಪಕ್ಷಾತೀತವಾಗಿ ಲೋಕಾರ್ಪಣೆ ಮಾಡಬೇಕು. ಸಾರ್ವಜನಿಕರಿಗೆ, ಎಲ್ಲ ಪಕ್ಷದವರಿಗೆ ಆಮಂತ್ರಣ ನೀಡಬೇಕು. ಇಲ್ಲದಿದ್ದರೆ ರಾಮನೇ ಅವರನ್ನು ನೋಡಿಕೊಳ್ಳುತ್ತಾನೆ ಎಂದು ಸಚಿವ ಮಂಕಾಳು ವೈದ್ಯ ಹೇಳಿದ್ದಾರೆ.ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸೇರಿದಂತೆ ಕಾಂಗ್ರೆಸ್ ಮುಖಂಡರಿಗೆ ಆಮಂತ್ರಣ ನೀಡದೆ ಇರುವ ಕುರಿತು ಪ್ರಸ್ತಾಪಿಸಿದಾಗ, ಬಿಜೆಪಿಯವರು ಮಾಡೋದೆ ಇದು. ಹಣ ನಮ್ಮದು, ಅಂದರೆ ಸಾರ್ವಜನಿಕರ ಹಣ. ರಾಮಮಂದಿರ ಕಟ್ಟಿದವರು ನಾವು. ವೈಯಕ್ತಿಕವಾಗಿ ನಾನೂ ಹಣ ನೀಡಿದ್ದೇನೆ. ಆದರೆ ಲೋಕಾರ್ಪಣೆಗೆ ಆಮಂತ್ರಣ ನೀಡದಿದ್ದರೆ ಬಿಜೆಪಿಯವರು ಉದ್ದೇಶಪೂರ್ವಕವಾಗಿ ಮಾಡುತ್ತಿದ್ದಾರೆ ಎಂದೇ ತಿಳಿದುಕೊಳ್ಳಬೇಕು. ಅಯೋಧ್ಯೆಗೆ ಕಾಂಗ್ರೆಸ್ ವರಿಷ್ಠರು ಸಹ ಹೋಗಬಹುದು. ರಾಮ ಎಲ್ಲರಿಗೂ ಒಬ್ಬನೇ. ನಾನೂ ಹೋಗಬೇಕೆಂದಿದ್ದೆ. ಆದರೆ ಅಯೋಧ್ಯೆಗೆ ಟಿಕೆಟ್ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಹೋಗಬಹುದು ಎಂದರು.
ರಾಮನಿಗೆ ಮೊದಲ ಆರತಿಯನ್ನು ಪ್ರಧಾನಿ ನರೇಂದ್ರ ಮೋದಿ ಮಾಡಬೇಕು, ಮಾಡಬಾರದು ಎಂದು ಹೇಳುತ್ತಿಲ್ಲ. ಶಾಸ್ತ್ರೋಕ್ತವಾಗಿ ಬ್ರಾಹ್ಮಣರಿಂದ ಪೂಜೆ ಮಾಡಿಸುವುದು ನಮ್ಮ ಸಂಪ್ರದಾಯ. ಅದಕ್ಕಾಗಿಯೇ ದೇವರ ಬಳಿ ಬ್ರಾಹ್ಮಣರನ್ನು ಇಟ್ಟಿದ್ದೇವೆ. ಅದರಲ್ಲೇ ರಾಜಕಾರಣ ಮಾಡಿದರೆ ಏನು ಹೇಳಬೇಕು ಎಂದು ಪ್ರಶ್ನಿಸಿದರು.ಹುಬ್ಬಳ್ಳಿಯಲ್ಲಿ ಕರಸೇವಕರ ಬಂಧನದ ಕುರಿತು ಮಾತನಾಡಿದ ಅವರು, ನ್ಯಾಯಾಲಯದಲ್ಲಿ ಪ್ರಕರಣ ಇದೆ. ನ್ಯಾಯಾಲಯದ ಆದೇಶಕ್ಕೆ ತಲೆಬಾಗುತ್ತೇವೆ. ಆದರೆ ಈಗ ಬಿಜೆಪಿಯವರೇ ತೊಂದರೆ ಕೊಡೋಕೆ ಮಾಡುತ್ತಿದ್ದಾರೆ ಎಂದು ಹೇಳಿದರು.ನಾವು ಅಪ್ಪ-ಅಮ್ಮನನ್ನು ದೇವರಂತೆ ನೋಡುತ್ತೇವೆ. ಸಹಾಯ ಮಾಡಿದವರನ್ನು ಗೌರವದಿಂದ ನೋಡುತ್ತೇವೆ. ಗುರುಗಳನ್ನೂ ದೇವರಂತೆ ಕಾಣುತ್ತೇವೆ ಎಂದು ಸಿದ್ದರಾಮಯ್ಯ ಅವರನ್ನು ದೇವರಿಗೆ ಆಂಜನೇಯ ಹೋಲಿಸಿದ್ದನ್ನು ಖಂಡಿಸಿ ಸಿ.ಟಿ. ರವಿ ಕಿಡಿಕಾರಿದ ವಿಚಾರಕ್ಕೆ ಪ್ರತಿಕ್ರಿಯಿಸಿದರು.