ಸಾರಾಂಶ
- ಬಂಜಾರ ಸಾಹಿತ್ಯ ಪರಿಷತ್ತು ಪದಗ್ರಹಣ ಕಾರ್ಯಕ್ರಮದಲ್ಲಿ ರಾಜ್ಯ ಗೌರವಾಧ್ಯಕ್ಷ ಪಿ.ಕೆ.ಖಂಡೋಬಾ ಮನವಿ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಲಿಪಿಯೇ ಇಲ್ಲದ ಬಂಜಾರ ಭಾಷೆಯು ಸುಮಾರು 2 ಸಾವಿರ ವರ್ಷಗಳ ಇತಿಹಾಸ ಹೊಂದಿದೆ. ಇಂತಹ ಭಾಷೆಯನ್ನು ಉಳಿಸಿ, ಬೆಳೆಸುವ ಕೆಲಸವನ್ನು ಸಮಾಜ ಬಾಂಧವರು ಮಾಡಬೇಕು ಎಂದು ಕರ್ನಾಟಕ ಬಂಜಾರ ಸಾಹಿತ್ಯ ಪರಿಷತ್ತು ರಾಜ್ಯ ಗೌರವಾಧ್ಯಕ್ಷ ಪಿ.ಕೆ.ಖಂಡೋಬಾ ಹೇಳಿದರು.ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಕರ್ನಾಟಕ ಬಂಜಾರ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಕರ್ನಾಟಕ ಮಾತ್ರವಲ್ಲದೇ, ದೇಶಾದ್ಯಂತ ಎಲ್ಲ ರಾಜ್ಯಗಳಲ್ಲೂ ನೆಲೆಸಿರುವ ಬಂಜಾರ ಸಮುದಾಯದ ಲಿಪಿ ಇಲ್ಲದ ಭಾಷೆಯನ್ನು ಉಳಿಸಿಕೊಳ್ಳುವ ಕೆಲಸ ಈಗ ಆಗಬೇಕಾಗಿದೆ ಎಂದರು.
ಭಾರತದಲ್ಲಿ ಸುಮಾರು 735ಕ್ಕೂ ಹೆಚ್ಚು ಹಾಗೂ ರಾಜ್ಯದಲ್ಲಿ ಸುಮಾರು 63 ಬುಡಕಟ್ಟು ಜನಾಂಗಗಳಿವೆ. ಆದರೆ, ಯಾವುದೇ ಬುಡಕಟ್ಟು ಸಮುದಾಯವೂ ತನ್ನ ಭಾಷೆಯ ಸಾಹಿತ್ಯ ಪರಿಷತ್ ಹೊಂದಿಲ್ಲ. ಆದರೆ, ಬಂಜಾರ ಸಮುದಾಯವು ಕರ್ನಾಟಕ ಬಂಜಾರ ಸಾಹಿತ್ಯ ಪರಿಷತ್ತು ಮೂಲಕ ಲಂಬಾಣಿ ಭಾಷೆಯನ್ನು ಉಳಿಸಿ, ಬೆಳೆಸುವ ಪ್ರಯತ್ನ ಮಾಡುತ್ತಿರುವುದು ಸಮಾಜದ ಹಿತಕಾಯುವ ಕೆಲಸವಾಗಿದೆ ಎಂದು ತಿಳಿಸಿದರು.ಬಂಜಾರ ಸಾಹಿತ್ಯ ಪರಿಷತ್ತು ಸ್ಥಾಪಿಸಿದ್ದರಿಂದ ನಮ್ಮ ಬಂಜಾರ ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ, ಬೆಳೆಸಿಕೊಂಡು ಹೋಗಲು ಅನುಕೂಲವಾಗುತ್ತದೆ. ಬಂಜಾರ ಭಾಷೆಯಲ್ಲಿ ಅದ್ಭುತವಾದ ಸಾಹಿತ್ಯ ಸಂಪತ್ತಿದೆ. ಮಹಾಕಾವ್ಯ, ಪುರಾಣ ಸಾಹಿತ್ಯವನ್ನೂ ಬಂಜಾರ ಭಾಷೆ ಹೊಂದಿದೆ. ಅಭಿವೃದ್ಧಿ ಕಾರ್ಯಗಳ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳೂ ಪರಿಷತ್‌ಗೆ ಅಗತ್ಯ. ಸಾಹಿತ್ಯ, ಸಂಸ್ಕೃತಿಯ ಉನ್ನತೀಕರಣದ ಕೆಲಸ ವ್ಯವಸ್ಥಿತವಾಗಿ ಆಗಬೇಕು ಎಂದು ಹೇಳಿದರು.
ಪರಿಷತ್ತು ಜಿಲ್ಲಾಧ್ಯಕ್ಷ ವಿಶ್ವ ನಟೇಶ್ ಮಾತನಾಡಿ, ಹಲವಾರು ಅಡೆ ತಡೆಗಳ ಮಧ್ಯೆಯೂ ಬಂಜಾರ ಸಮದಾಯವು ಭಾರತ ದೇಶದ ಬಹುಭಾಗವನ್ನು ಆಳಿರುವಂತಹ ಸಮಾಜವಾಗಿದೆ. ನಮ್ಮ ಸಮುದಾಯದ ಸಂಸ್ಕೃತಿ, ಆಚಾರ ವಿಚಾರಗಳನ್ನು ಉಳಿಸುವ, ಗಟ್ಟಿಗೊಳಿಸುವ ನಿಟ್ಟಿನಲ್ಲಿ ಬಂಜಾರ ಸಾಹಿತ್ಯ ಪರಿಷತ್ತು ಸ್ಥಾಪಿಸಲಾಗಿದೆ. ಬಂಜಾರ ಜನಾಂಗವು ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ಸಂಸ್ಕೃತಿ ಸಮುದಾಯವಾಗಿದೆ ಎಂದರು.ಅಲೆಮಾರಿ ಸಮುದಾಯವೆಂದೇ ಗುರುತಿಸಲ್ಪಡುವ, ಇಂದಿಗೂ ತಾಂಡಾಗಳಲ್ಲಿ, ಕಾಡು-ಮೇಡುಗಳ ಅಂಚಿನಲ್ಲಿ ಬದುಕುವ ಬಂಜಾರ ಸಮುದಾಯ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಔದ್ಯೋಗಿಕವಾಗಿ ಮುಖ್ಯವಾಹಿನಿಗೆ ಬರಬೇಕು. ಸಾವಿರಾರು ವರ್ಷಗಳಿಂದ ಬಂಜಾರ ಸಮುದಾಯದ ಉಳಿಸಿರಾಗಿರುವ ಬಂಜಾರ ಸಮುದಾಯಕ್ಕೆ ಮೌಖಿಕ ಸಾಹಿತ್ಯದ ಬಲ ಹೊಂದಿದೆ. ಈ ಸಮುದಾಯವು ಸಾಕಷ್ಟು ಸಾಹಿತ್ಯ ಕೃಷಿ ಮಾಡಬೇಕಿದೆ ಎಂದು ತಿಳಿಸಿದರು.
ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ಅಧ್ಯಕ್ಷ ಎನ್.ಜಯದೇವ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಮಾಯಕೊಂಡ ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಪರಿಷತ್ತು ರಾಜ್ಯ ಘಟಕ ಅಧ್ಯಕ್ಷ ಶ್ರೀಕಾಂತ ಜಾಧವ್, ಉಪಾಧ್ಯಕ್ಷ ನರಸಿಂಗ ಲಮಾಣಿ, ಹಾಲ್ಯಾ ನಾಯ್ಕ, ಪ್ರಧಾನ ಕಾರ್ಯದರ್ಶಿ ಎಲ್.ಪಿ.ನಾಯ್ಕ ಕಠಾರಿ, ಖಜಾಂಚಿ ಮೋತಿಲಾಲ ರಾಠೋಡ್, ಮುಖಂಡರಾದ ಖಂಡೂ ಬಂಜಾರ, ಉತ್ತಮ ಮೂಡ್, ವಿಜಯ ಜಾಧವ್, ಹನುಮಂತ ನಾಯ್ಕ, ಎಂ.ಉಮೇಶ ನಾಯ್ಕ, ಎಂ.ಡಿ.ನಾಗರಾಜ ಇತರರು ಇದ್ದರು.ಸಮಾರಂಭದಲ್ಲಿ ಕವಿತಾ ನಾಯ್ಕ ಪ್ರಾರ್ಥಿಸಿದರು. ಶಿವಕಾಂತ ನಾಯ್ಕ ಸ್ವಾಗತಿಸಿದರು.
- - -(ಕೋಟ್)
ಹಾಡು ಹಾಡುವ, ಕಾವ್ಯ ಕಟ್ಟುವ, ವಿಮರ್ಶೆ ಮಾಡುವ ಸೃಜನಶೀಲತೆ ಬಂಜಾರ ಸಮುದಾಯದಲ್ಲಿವೆ. ಬಂಜಾರ ಸಮುದಾಯ ಸಮೃದ್ಧ ಹಾಗೂ ಶ್ರೀಮಂತಿಕೆಯಿಂದ ಕೂಡಿರುವ ಜೀವಂತಿಕೆಯ ಸಾಹಿತ್ಯವನ್ನು ಹೊಂದಿದೆ. ಇಂತಹದ್ದನ್ನೆಲ್ಲಾ ಉಳಿಸಿಕೊಳ್ಳುವ ಹೊಣೆಗಾರಿಕೆಯನ್ನು ಬಂಜಾರ ಸಾಹಿತ್ಯ ಪರಿಷತ್ ಮೂಲಕ ಬಂಜಾರ ಸಮುದಾಯ ಬಾಂಧವರು ಮಾಡಬೇಕು.- ಪಿ.ಕೆ.ಖಂಡೋಬಾ, ರಾಜ್ಯ ಗೌರವಾಧ್ಯಕ್ಷ.
- - --16ಕೆಡಿವಿಜಿ5, 6.ಜೆಪಿಜಿ:
ದಾವಣಗೆರೆಯಲ್ಲಿ ಭಾನುವಾರ ಕರ್ನಾಟಕ ಬಂಜಾರ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕವನ್ನು ಕರ್ನಾಟಕ ಬಂಜಾರ ಸಾಹಿತ್ಯ ಪರಿಷತ್ ರಾಜ್ಯ ಗೌರವಾಧ್ಯಕ್ಷ ಪಿ.ಕೆ.ಖಂಡೋಬಾ ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದರು.;Resize=(128,128))
;Resize=(128,128))