ಸಾರಾಂಶ
ಸೊರಬ: ಹಸಿದವರಿಗೆ ಅನ್ನ, ಮಕ್ಕಳಿಗೆ ಶಿಕ್ಷಣ ಕೊಡುವ ಕೆಲಸಕ್ಕಿಂತ ಮುಖ್ಯವಾದದ್ದು ಯಾವುದೂ ಇಲ್ಲ. ಹಾಗಾಗಿ ದೇಶದ ಅಭಿವೃದ್ಧಿಗೆ ಜಾತಿ, ಆಸ್ತಿ, ಧರ್ಮ ಆಧರಿಸಿಲ್ಲ ಬದಲಾಗಿ ಶಿಕ್ಷಣ ಮುಖ್ಯವಾಗಿದೆ. ಆದ್ದರಿಂದ ದೇವಸ್ಥಾನಕ್ಕಿಂತ ಶಾಲೆ ಗಂಟೆ ಹೆಚ್ಚು ಬಾರಿಸಬೇಕು ಎಂದು ಸಚಿವ ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು.ತಾಲೂಕಿನ ಮಾವಲಿ ಗ್ರಾಮದಲ್ಲಿ ಆರಂಭವಾದ ಶ್ರೀ ಕಲ್ಲೇಶ್ವರ ಅಕ್ಕಿ ಗಿರಣಿ ಉದ್ಘಾಟನೆ ಕಾರ್ಯಕ್ರಮ ಅಂಗವಾಗಿ ಹಮ್ಮಿಕೊಂಡ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಶಿಕ್ಷಣ ಸಚಿವನಾಗಿ ಮನಃಪೂರ್ವಕವಾಗಿ ಕೆಲಸ ಮಾಡುತ್ತಿದ್ದೇನೆ. ಗ್ರಾಮೀಣ ಮಕ್ಕಳು ಪಟ್ಟಣದ ವಿದ್ಯಾರ್ಥಿಗಳನ್ನು ಮೀರಿಸುವ ಫಲಿತಾಂಶ ನೀಡಬೇಕು. ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಬೋಧನೆ, ಪರಿಕರಗಳು ಮತ್ತು ಶೈಕ್ಷಣಿಕವಾಗಿ ಉತ್ತಮ ವಾತಾವರಣ ಕಲ್ಪಿಸಲಾಗಿದೆ ಎಂದರು.ತಾಲೂಕಿನಲ್ಲಿ ಕೈಗಾರಿಕೆಗಳು ಅಧಿಕವಾಗಿ ಸ್ಥಾಪನೆಯಾದಲ್ಲಿ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಈ ದೃಷ್ಟಿಯಿಂದ ಮಹಿಳೆಯರು ಬೇರೆಡೆಗೆ ಉದ್ಯೋಗ ಅರಿಸಿ ಹೋಗುವುದನ್ನು ತಪ್ಪಿಸಲು ಮುಂದಿನ ೨ ವರ್ಷದೊಳಗೆ ತಾಲೂಕಿನಲ್ಲಿ ಗಾರ್ಮೆಂಟ್ಸ್ ಸ್ಥಾಪನೆ ಮಾಡಲಾಗುವುದು ಎಂದು ತಿಳಿಸಿದರು.ಶಿಕಾರಿಪುರ ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ನಾಗರಾಜ್ ಗೌಡ, ಶ್ರೀ ಕಲ್ಲೇಶ್ವರ ಅಕ್ಕಿಗಿರಣಿ ಮಾಲೀಕ ಕೆ.ಎಚ್.ಭೋಗರಾಜ್, ಪ್ರಮುಖರಾದ ಸುರೇಶ್ ಬಿಳವಾಣಿ, ಎ.ಎಸ್.ಹೇಮಚಂದ್ರ, ನಿರಂಜನಮೂರ್ತಿ ದೇವತಿಕೊಪ್ಪ, ಶಿವಕುಮಾರ ಕಾಸ್ವಾಡಿಕೊಪ್ಪ, ರೇವತಿ ಭೋಗರಾಜ್, ವಿನುತ್, ಜಗದೀಶ್ ಕುಂಬತ್ತಿ, ಆನಂದಗೌಡ, ಫಯಾಜ್ ಅಹ್ಮದ್ ಉಳವಿ, ಕಾಮತ್ ಕೆರೆಹಳ್ಳಿ, ಅಣ್ಣಪ್ಪ ಕಾಲಘಟ್ಟ, ಸದಾನಂದಗೌಡ ಬಿಳಗಲಿ, ಎಚ್.ಗಣಪತಿ ಹುಲ್ತಿಕೊಪ್ಪ, ಕೆ.ಪಿ.ರುದ್ರಗೌಡ, ಎಂ.ಡಿ.ಶೇಖರ್, ಮಾಲತೇಶ್ ಕೊಡಕಣಿ, ಹನುಮಂತ್ ಹೊಳೆಹೊನ್ನೂರು ಇತರರಿದ್ದರು.
ಸೊರಬ ಶಿರಾಳಕೊಪ್ಪ ಮುಖ್ಯ ರಸ್ತೆ ಕಾಮಗಾರಿ ನಡೆಯುತ್ತಿದೆ. ಮಳೆಗಾಲದೊಳಗೆ ಕಾಮಗಾರಿ ಮುಗಿಯಬೇಕು ಎಂಬುದು ಜನರ ಬೇಡಿಕೆಯಾಗಿದೆ. ಆದರೆ ಕಾಮಗಾರಿ ಬೇಗ ಮುಗಿಯುವುದಕ್ಕಿಂತ ನಿರ್ಮಿಸಿದ ರಸ್ತೆ ಹೆಚ್ಚುಕಾಲ ಚೆನ್ನಾಗಿರಬೇಕು. ಹೀಗಾಗಿ ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಲು ಸೂಚಿಸಿದ್ದೇನೆ. ರಸ್ತೆ ಸಂಚಾರಕ್ಕೆ ತೊಡಕಾಗುವ ವಿದ್ಯುತ್ ಕಂಬ ಹಾಗೂ ಶಿಥಿಲಾವಸ್ಥೆಯಲ್ಲಿರುವ ಮರಗಳ ತೆರವಿಗೆ ಅಧಿಕಾರಿಗಳ ಜತೆ ಮಾತನಾಡಲಾಗಿದೆ
- ಮಧು ಬಂಗಾರಪ್ಪ, ಸಚಿವ