ಯಲ್ಲಾಪುರ: ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡರೆ ಸಿದ್ದಿ ಸಮುದಾಯ ಇನ್ನಷ್ಟು ಬೆಳೆಯಬಹುದು ಎಂದು ಉಚ್ಚ ನ್ಯಾಯಾಲಯದ ಸರ್ಕಾರಿ ವಕೀಲ ಜಯರಾಮ ಸಿದ್ದಿ ಹೇಳಿದರು.

ತಾಲೂಕಿನ ಮಂಚಿಕೇರಿಯ ದೇವರಕಲ್ಲಳ್ಳಿಯ ಬಯಲು ರಂಗ ಮಂದಿರದಲ್ಲಿ ಕರ್ನಾಟಕ ನಾಟಕ ಅಕಾಡೆಮಿ, ಹಾಗೂ ಮಂಚಿಕೇರಿ, ದೇವರಕಲ್ಲಳ್ಳಿ ಸಿದ್ಧಿ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಡೆದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮವನ್ನು ಸಿದ್ದಿಯರ ಸಾಂಪ್ರದಾಯಿಕ ಡಮಾಮಿ ವಾದ್ಯ ನುಡಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣ ಪಡೆದು, ಕಾನೂನಿನ ಅರಿವು ಪಡೆದುಕೊಂಡು ದಾಖಲಾತಿಗಳ ಮೂಲಕ ವ್ಯವಸ್ಥಿತ ಬದುಕನ್ನು ಕಟ್ಟಿಕೊಂಡರೆ ಒಳ್ಳೆಯದು. ಈ ನಿಟ್ಟಿನಲ್ಲಿ ಸಮುದಾಯ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಹೇಳಿದರು.

"ಶಾಲಾ ಶಿಕ್ಷಣದಲ್ಲಿ ರಂಗಭೂಮಿಯ ಪಾತ್ರ " ಕುರಿತು ಉಪನ್ಯಾಸ ನೀಡಿದ ಶಿಕ್ಷಕ ನಾರಾಯಣ ಶೇರಗಾರ, ಶಾಲೆಯ ಎಲ್ಲ ವಿಷಯಗಳಲ್ಲಿ, ಕಲಿಸುವ ಎಲ್ಲ ವಿಷಯಗಳನ್ನು ರಂಗಶಿಕ್ಷಣದ ತಂತ್ರಗಳನ್ನು ಬಳಸಿಕೊಂಡದ್ದೇ ಆದರೆ ಮಕ್ಕಳು ಸುಲಭವಾಗಿ ಕಲಿಯುತ್ತಾರೆ. ಯಾರು ರಂಗ ಶಿಬಿರಗಳಿಗೆ ಬಂದು, ತಮ್ಮ ಶಿಕ್ಷಣವನ್ನು ಮುಂದುವರಿಸಿರುತ್ತಾರೋ ಅವರ ವ್ಯಕ್ತಿತ್ವವೇ ಬದಲಾಗಿರುತ್ತದೆ. ಅವರು ಓದುವ ಪುಸ್ತಕಗಳು ಹವ್ಯಾಸಗಳು, ಸೃಜನಶೀಲತೆ ಇರಬಹುದು, ಅಭಿವ್ಯಕ್ತಿಸುವಂತಹ ಮಾತಿರಬಹುದು, ಪ್ರತಿಯೊಂದು ಬದಲಾಗಿರುತ್ತದೆ ಎಂದರು.

ರಂಗಕರ್ಮಿ ಎಂ.ಕೆ. ಭಟ್ ಯಡಳ್ಳಿ ಮಾತನಾಡಿ, ರಂಗಭೂಮಿಯ ಮೂಲಕ ಒಂದು ವೇದಿಕೆಯನ್ನು ಸೃಷ್ಟಿ ಮಾಡಿಕೊಟ್ಟ ಸೃಜನಶೀಲ ನಿರ್ದೇಶಕ ಚನ್ನಕೇಶವ ಅವರನ್ನು ನೆನಪಿಸಿಕೊಳ್ಳಬೇಕು ಎಂದರು.

ರಂಗಕರ್ಮಿ ವಾಸುಕಿ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ತಾಲೂಕಿನ ಪ್ರಸಿದ್ಧ ಕೀರ್ತನಾಕಾರರೂ, ರಂಗ ನಟರು ಆಗಿರುವ ಭುಜಂಗ ಸಿದ್ದಿ, ಹಿರಿಯ ಜಾನಪದ ಹಾಗೂ ರಂಗ ನಟಿ ಕುಸುಮಾ ಸಿದ್ದಿ, ಪ್ರಸಿದ್ಧ ಚಿತ್ರ ಕಲಾವಿದ ಹಾಗೂ ರಂಗ ನಟ ಸುಭಾಶ್ ಆಚಾರ್ ಹಾಗೂ ಸಮುದಾಯದ ಮೃದಂಗ ವಾದಕ ಶಂಭು ಸಿದ್ದಿ ಅವರನ್ನು ಸನ್ಮಾನಿಸಲಾಯಿತು. ಕಾಡು ಹಕ್ಕಿ ತಂಡದವರು ರಂಗ ಗೀತೆ ಕಾರ್ಯಕ್ರಮ ನಡೆಸಿಕೊಟ್ಟರು. ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ಪರಶುರಾಮ ಗಿರಗೋಲಿ ಸಿದ್ದಿ, ಗಣಪತಿ ಹೆಗಡೆ, ಕೃಷ್ಣ ಸಿದ್ದಿ, ನಾಗ್ಯ ಸಿದ್ದಿ, ಸರಸ್ವತಿ ಸಿದ್ದಿ, ಲಕ್ಷ್ಮೀ ಸಿದ್ದಿ ಹಾಗೂ ಟ್ರಸ್ಟಿನ ಸದಸ್ಯರು ಹಾಜರಿದ್ದರು.


ದಾಕ್ಷಾಯಿಣಿ ಸಿದ್ದಿ ಹಾಗೂ ದೀಪಾ ಸಿದ್ದಿ ಪ್ರಾರ್ಥನಾ ಗೀತೆ ಹಾಡಿದರು. ಲೋಕೇಶ್ ಸಿದ್ದಿ ಕಾರ್ಯಕ್ರಮ ನಿರೂಪಿಸಿದರು. ಗಿರೀಶ್ ಸಿದ್ದಿ ಸ್ವಾಗತಿಸಿದರು. ಉತ್ತರ ಕನ್ನಡ ಜಿಲ್ಲೆಯ ನಾಟಕ ಅಕಾಡೆಮಿ ಸದಸ್ಯರಾದ ಡಾ. ಗೀತಾ ಸಿದ್ದಿ ಪ್ರಾಸ್ತಾವಿಕ ನುಡಿಯನ್ನಾಡಿದರು.