ಸಾರಾಂಶ
ರಾಮನಗರ: ರಾಮನಗರದ ರೇಷ್ಮೆಗೂಡಿನ ಮಾರುಕಟ್ಟೆ ಅಚ್ಚುಕಟ್ಟಾಗಿದ್ದು, ಪಾರದರ್ಶಕವಾಗಿ ನಡೆಯುತ್ತಿದೆ. ಹೈಟೆಕ್ ಮಾರುಕಟ್ಟೆ ಹೆಸರಿನಲ್ಲಿ ಈ ಮಾರುಕಟ್ಟೆಯನ್ನು ಚನ್ನಪಟ್ಟಣಕ್ಕೆ ಸ್ಥಳಾಂತರ ಮಾಡುವುದು ಸರಿಯಲ್ಲ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ರವಿಕುಮಾರ್ ತಿಳಿಸಿದರು.
ನಗರದ ರೇಷ್ಮೆ ಮಾರುಕಟ್ಟೆಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರದಲ್ಲಿಯೇ ಸುಸಜ್ಜಿತವಾದ ಮಾರುಕಟ್ಟೆ ಇದ್ದು, ರೈತರು ಹಾಗೂ ಖರೀದಿದಾರರೇ ಇಲ್ಲಿಗೆ ಬರುತ್ತಾರೆ. ಇಲ್ಲಿಯೇ ರೇಷ್ಮೆ ಮಾರುಕಟ್ಟೆಯನ್ನು ಮುಂದುವರೆಸಬೇಕು. ಇದನ್ನು ಸ್ಥಳಾಂತರ ಮಾಡಬಾರದೆಂದು ಮನವಿ ಮಾಡುತ್ತೇನೆ ಎಂದು ಹೇಳಿದರು.ಚನ್ನಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಹೈಟೆಕ್ ರೇಷ್ಮೆಗೂಡಿನ ಮಾರುಕಟ್ಟೆಗೆ ತೆರಳಲು ಸ್ಥಳೀಯ ರೀಲರ್ಸ್ ಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ, ಈ ವಿಚಾರ ನನಗೆ ಗೊತ್ತಿಲ್ಲ. ಆದರೆ, ರಾಮನಗರ ಮಾರುಕಟ್ಟೆ ಸುಸಜ್ಜಿತವಾಗಿದ್ದು, ಸ್ಥಳಾಂತರದ ಅವಶ್ಯಕತೆ ಇಲ್ಲ. ಚನ್ನಪಟ್ಟಣದಲ್ಲಿ ಹೈಟೆಕ್ ಮಾರುಕಟ್ಟೆ ನಡೆದರೆ ಅಲ್ಲಿಯೂ ಆಸಕ್ತ ರೈತರು ಮತ್ತು ರೀಲರ್ಸ್ ಗಳು ವಹಿವಾಟು ನಡೆಸಲಿ ಎಂದು ಉತ್ತರಿಸಿದರು.
ರೇಷ್ಮೆ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಮಾರುಕಟ್ಟೆ ವಿಶ್ವಾಸಾರ್ಹ ಹೊಂದಿದೆ. ಇಲ್ಲಿ ರೈತರಿಗೆ ಯಾವುದೇ ರೀತಿಯ ಮೋಸ ಆಗುತ್ತಿಲ್ಲ. ರೈತರ ಕಣ್ಣೆದುರಿಗೆ ಮಾರುಕಟ್ಟೆಯಲ್ಲಿ ತನ್ನ ಗೂಡು ಎಷ್ಟು ರೂಪಾಯಿಗೆ ಮಾರಾಟವಾಯ್ತು? ಎಂಬ ನಿಖರ ಮಾಹಿತಿ ಲಭ್ಯವಾಗುತ್ತಿದೆ ಎಂದು ಹೇಳಿದರು.ಈ ಮಾರುಕಟ್ಟೆಯಲ್ಲಿ 2015ಕ್ಕಿಂತ ಮೊದಲ ಈ ವ್ಯವಸ್ಥೆ ಇರಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹಲವು ಬದಲಾವಣೆಯನ್ನು ತರಲಾಗಿದೆ. ನಿತ್ಯ ಪ್ರತಿ ಕೆಜಿಗೆ 400 ರಿಂದ 500 ರು.ಗಳ ಆಸುಪಾಸಿನಲ್ಲಿ ಗೂಡು ಮಾರಾಟವಾಗುತ್ತಿದೆ. ಈ ಹಿಂದೆ ಮಾರುಕಟ್ಟೆಯಲ್ಲಿ ಕೆಜಿಗೆ 1 ಸಾವಿರದಂತೆ ಮಾರಾಟವಾಗಿ ದಾಖಲೆ ನಿರ್ಮಿಸಿತ್ತು. ದೇಶದಲ್ಲಿಯೇ ಈ ಬೆಲೆಗೆ ಎಲ್ಲಿಯೂ ಗೂಡು ಮಾರಾಟವಾಗಿರಲಿಲ್ಲ. ಇದು ಗೂಡು ಬೆಳೆಯುವ ರೈತರಿಗೆ ಅನುಕೂಲವಾಗುತ್ತಿದೆ ಎಂದು ತಿಳಿಸಿದರು.
ದೇಶದಲ್ಲಿ ಅಗತ್ಯದಷ್ಟು ರೇಷ್ಮೆ ಉತ್ಪಾದನೆಯಾಗುತ್ತಿಲ್ಲ. ಹಾಗಾಗಿ ರೇಷ್ಮೆ ಬೆಳೆದ ರೈತರಿಗೆ ಯಾವುದೇ ನಷ್ಟ ಉಂಟಾಗುತ್ತಿಲ್ಲ. ಅಡಿಕೆ ಬೆಳೆಯನ್ನು ಬೆಳೆಗಾರರು ಸ್ಪರ್ಧಾತ್ಮಕವಾಗಿ ಬೆಳೆಯುತ್ತಿದ್ದಾರೋ, ಹಾಗೆಯೇ ರೇಷ್ಮೆಗೂಡು ಬೆಳೆದರೆ ರೈತರಿಗೆ ಹೆಚ್ಚು ಲಾಭವಾಗಲಿದೆ ಎಂದರು.ಮಾರುಕಟ್ಟೆಯಲ್ಲಿನ ಮೂಲಭೂತ ಸಮಸ್ಯೆ ಹಾಗೂ ವಸತಿ ಸಮಸ್ಯೆ ಕುರಿತು ಅಧಿಕಾರಿಗಳು ಹಾಗೂ ರೈತರ ಬಗ್ಗೆ ಚರ್ಚಿಸುತ್ತೇನೆ. ಅದನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡಲಾಗುತ್ತದೆ ಎಂದು ರವಿಕುಮಾರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಾರುಕಟ್ಟೆಯ ಪ್ರಾಂಗಣವನ್ನು ಸುತ್ತು ಹಾಕಿದ ರವಿಕುಮಾರ್, ಮಾರುಕಟ್ಟೆಯಲ್ಲಿ ನಡೆಯುವ ಗೂಡು ವಹಿವಾಟು ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ನಂತರ ಮಾರುಕಟ್ಟೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷರಾದ ಎಸ್. ಆರ್.ನಾಗರಾಜು, ಮುರಳೀಧರ್, ಮಾಜಿ ನಿರ್ದೇಶಕ ಡಿ.ನರೇಂದ್ರ, ಮುಖಂಡ ಪ್ರಸಾದ್ ಗೌಡ ಮತ್ತಿತರರು ಹಾಜರಿದ್ದರು.
19ಕೆಆರ್ ಎಂಎನ್ 1.ಜೆಪಿಜಿರಾಮನಗರದ ರೇಷ್ಮೆ ಮಾರುಕಟ್ಟೆಗೆ ಶುಕ್ರವಾರ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ರವಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.