ಸುಪ್ರೀಂಕೋರ್ಟ್ ನಿಗಾದಲ್ಲಿ ಎಸ್ಐಟಿ ತನಿಖೆ ನಡೆಯಲಿ: ಶೈಲಜಾ ಹಿರೇಮಠ

| Published : Apr 29 2024, 01:32 AM IST

ಸುಪ್ರೀಂಕೋರ್ಟ್ ನಿಗಾದಲ್ಲಿ ಎಸ್ಐಟಿ ತನಿಖೆ ನಡೆಯಲಿ: ಶೈಲಜಾ ಹಿರೇಮಠ
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ. ರೇವಣ್ಣ ಮತ್ತು ಗೆದ್ದರೆ ಪ್ರಜ್ವಲ್ ರೇವಣ್ಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.

ಕನ್ನಡಪ್ರಭ ವಾರ್ತೆ ಕೊಪ್ಪಳ

ಹಾಸನ ಜೆಡಿಎಸ್ ಲೋಕಸಭೆ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರಿಂದ ಮೂರು ಸಾವಿರ ಮಹಿಳೆಯರು ಲೈಂಗಿಕ ದೌರ್ಜನ್ಯಕ್ಕೀಡಾಗಿದ್ದು, ಭಾರತದ ಅತಿ ದೊಡ್ಡ ಸೆಕ್ಸ್ ಸ್ಕ್ಯಾಂಡಲ್ ಆಗಿದೆ. ಇಂಥ ಹೀನ ಕೃತ್ಯಕ್ಕಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ. ರೇವಣ್ಣ ಮತ್ತು ಗೆದ್ದರೆ ಪ್ರಜ್ವಲ್ ರೇವಣ್ಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಮಾಧ್ಯಮ ವಕ್ತಾರೆ ಶೈಲಜಾ ಹಿರೇಮಠ ಆಗ್ರಹಿಸಿದರು.

ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಪೆನ್ ಡ್ರೈವ್ ಕಾಮಕಾಂಡವನ್ನು ಎಸ್ಐಟಿ ತನಿಖೆಗೆ ವಹಿಸಿದೆ. ಮಾಜಿ ಪ್ರಧಾನಿ ಕುಟುಂಬದ ಕುಡಿ ಈ ಪ್ರಕರಣದಲ್ಲಿ ಇರುವುದರಿಂದ ಸುಪ್ರೀಂಕೋರ್ಟ್ ನಿಗಾದಲ್ಲಿ ಎಸ್ಐಟಿ ತನಿಖೆ ನಡೆಯಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇವೆ. ಬಿಜೆಪಿ-ಜೆಡಿಎಸ್ ಮೈತ್ರಿಯಾಗಿದ್ದರಿಂದ ಪೆನ್ ಡ್ರೈವ್ ಕಾಮಕಾಂಡ ಬಗ್ಗೆ ರಾಜ್ಯ ಬಿಜೆಪಿ ನಾಯಕರು, ಬಿಜೆಪಿ ಮಹಿಳಾ ನಾಯಕಿಯರು, ಪ್ರಧಾನಿ ಮೋದಿ ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದರು.

ಸಾವಿರಾರು ಮಹಿಳೆಯರು ಸಂತ್ರಸ್ತರಾಗಿರುವ ಸೆಕ್ಸ್ ಸ್ಕ್ಯಾಂಡಲ್ ಕುರಿತು ರಾಷ್ಟ್ರೀಯ ಮಹಿಳಾ ಆಯೋಗ ಇದುವರೆಗೂ ಯಾಕೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಪ್ರಶ್ನೆ ಮಾಡಿದರು. ಆಯೋಗ ನೊಂದ ಮಹಿಳೆಯರಿಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದರು.

ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು, ಬುಲ್ಡೋಜರ್ ಮೂಲಕ ಅಂಥವರ ಮನೆ ಧ್ವಂಸ ಮಾಡಬೇಕು ಎನ್ನುತ್ತಿದ್ದರು. ಯೋಗಿ ಮಾಡಿದಂತೆಯೇ ದೇಶದಾದ್ಯಂತ ಮಾಡಬೇಕು ಎನ್ನುತ್ತಿದ್ದವರು. ಈಗ ಯಾಕೆ ಮಾತನಾಡುತ್ತಿಲ್ಲ ಎಂದು ಕಿಡಿಕಾರಿದರು. ಉಚಿತ ಬಸ್‌ ಪ್ರಯಾಣದಿಂದ ಮಹಿಳೆಯರು ಎಲ್ಲೆಲ್ಲೊ ಹೋಗುತ್ತಾರೆ ಎನ್ನುವ ಬಿಜೆಪಿ ನಾಯಕಿ ಶೃತಿ ಈಗ ಏಕೆ ಮೌನ ವಹಿಸಿರುವುದು ಏಕೆ ಎಂದು ಪ್ರಶ್ನಿಸಿದರು. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಾಲತಿ ನಾಯಕ್, ಜಿಲ್ಲಾ ಉಪಾಧ್ಯಕ್ಷೆ ನಾಗರತ್ನ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜ್ಯೋತಿ ಗೊಂಡಬಾಳ, ರೇಷ್ಮಾ ಖಾಜಾವಲಿ ಇದ್ದರು.