ಶೇ.60 ಕಮಿಷನ್ ಆರೋಪ ಸಾಬೀತು ಮಾಡಲಿ: ಸಿಎಂ ಸಿದ್ಧರಾಮಯ್ಯ

| Published : Jan 06 2025, 01:01 AM IST

ಸಾರಾಂಶ

ವಿಪಕ್ಷದವರಿಗೆ ಕೇವಲ ಆರೋಪ ಮಾಡುವುದೇ ಕೆಲಸವಲ್ಲ. ದಾಖಲಾತಿಗಳ ಸಮೇತ ಆರೋಪಿಸಿ, ಅದನ್ನು ಸಾಬೀತುಪಡಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸಚಿವ, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿಗೆ ಬಹಿರಂಗ ಸವಾಲು ಹಾಕಿದರು. ದಾವಣಗೆರೆ ಯುವಜನೋತ್ಸವ ಉದ್ಘಾಟಿಸಿ ಮಾತನಾಡಿದರು.

ಎಚ್‌ಡಿಕೆಗೆ ಸಿಎಂ ಸಿದ್ದು ಸವಾಲು । ಆರೋಪ ಮಾಡೋದಲ್ಲ, ಸಾಕ್ಷ್ಯಾಧಾರ, ದಾಖಲೆ ಸಮೇತ ಮಾಡಲಿ । ಒಳಮೀಸಲಿಗೆ ಸರ್ಕಾರ ಬದ್ಧ

ಕನ್ನಡಪ್ರಭ ವಾರ್ತೆ ದಾವಣಗೆರೆ ರಾಜ್ಯ ಸರ್ಕಾರದಲ್ಲಿ ಶೇ.60 ಕಮೀಷನ್ ಪಡೆಯಲಾಗುತ್ತಿದೆಯೆಂದು ಆರೋಪಿಸಿರುವ ವಿಪಕ್ಷದವರಿಗೆ ಕೇವಲ ಆರೋಪ ಮಾಡುವುದೇ ಕೆಲಸವಲ್ಲ. ದಾಖಲಾತಿಗಳ ಸಮೇತ ಆರೋಪಿಸಿ, ಅದನ್ನು ಸಾಬೀತುಪಡಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸಚಿವ, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿಗೆ ಬಹಿರಂಗ ಸವಾಲು ಹಾಕಿದರು. ನಗರದಲ್ಲಿ ಯುವಜನೋತ್ಸವ ಸಮಾರಂಭಕ್ಕೆ ತೆರಳಲು ಬಾಪೂಜಿ ಎಂಬಿಎ ಹೆಲಿಪ್ಯಾಡ್‌ನಲ್ಲಿ ಭಾನುವಾರ ಇಳಿದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ವಿರುದ್ಧ ಆಧಾರವೇ ಇಲ್ಲದೆ ಆರೋಪ ಮಾಡಬಾರದು. ಆರೋಪವನ್ನು ಮಾಡಿದರೆ ಅದನ್ನು ಸಾಬೀತು ಮಾಡಬೇಕು. ದಾಖಲಾತಿಗಳ ಸಮೇತ ಆರೋಪ ಮಾಡಲಿ, ಅದನ್ನು ಸಾಬೀತುಪಡಿಸಲಿ ಎಂದರು. ಪೂರಕ ದಾಖಲೆ ಇಟ್ಟುಕೊಂಡು ಆರೋಪ ಮಾಡಬೇಕು. ವಿಪಕ್ಷಗಳು ತಾವು ಮಾಡಿದ ಆರೋಪ ಸಾಬೀತು ಮಾಡಬೇಕು ಎಂದು ಕಿವಿಮಾತು ಹೇಳಿದರು. ಕೆಎಸ್ಸಾರ್ಟಿಸಿ ಬಸ್‌ ಪ್ರಯಾಣ ದರವನ್ನು ಹಿಂದೆ ಯಾವುದೇ ಸರ್ಕಾರವೂ ಹೆಚ್ಚಿಸಿರಲೇ ಇಲ್ಲವೇ? ಇದೇ ಬಿಜೆಪಿ ಸರ್ಕಾರವಿದ್ದಾಗ, ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗಲೂ ಬಸ್‌ ಪ್ರಯಾಣ ದರ ಹೆಚ್ಚು ಮಾಡಿರಲಿಲ್ಲವೇ? ಕೇಂದ್ರ ಸರ್ಕಾರವು ರೈಲ್ವೆ ಪ್ರಯಾಣ ದರ ಏರಿಕೆ ಮಾಡಿಲ್ಲವೇ? ಎಲ್ಲಾ ಕಾಲದಲ್ಲೂ, ಎಲ್ಲಾ ಸರ್ಕಾರಗಳ ಅವದಿಯಲ್ಲೂ ಬಸ್‌ ಪ್ರಯಾಣ ದರ ಹೆಚ್ಚಳವಾಗಿದೆ ಎಂದು ಬಸ್‌ ಪ್ರಯಾಣ ದರ ಏರಿಕೆ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ನೌಕರರ ವೇತನ, ಡೀಸೆಲ್ ದರ ಏರಿಕೆ, ಹೊಸ ಬಸ್‌ಗಳ ಖರೀದಿ, ಹಣದುಬ್ಬರವೂ ಆಗುತ್ತಲೇ ಇರುತ್ತದೆ. ವರ್ಷಗಳ ಹಿಂದೆ ಬಸ್‌ ಪ್ರಯಾಣ ದರ ಹೆಚ್ಚಿಸಿದ್ದನ್ನು ಬಿಟ್ಚರೆ, ಈಗ ಏರಿಸಲಾಗಿದೆ. ರಾಜ್ಯದ ಸಾರಿಗೆ ನಿಗಮಗಳು ತೊಂದರೆಯಲ್ಲಿವೆಯೆಂಬ ಕಾರಣಕ್ಕೆ ಹಾಗೂ ಬೇಡಿಕೆಯೂ ಇದ್ದುದರಿಂದ ಬಸ್‌ ಪ್ರಯಾಣ ದರ ಏರಿಸಲಾಗಿದೆ. ರೈಲ್ವೆ ಪ್ರಯಾಣ ದರವನ್ನು ಕೇಂದ್ರ ಸರ್ಕಾರ ಹೆಚ್ಚಿಗೆ ಮಾಡಿದೆಯಲ್ಲವೇ ಎಂದು ಪ್ರಶ್ನಿಸಿದರು. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಮುಖ್ಯಮಂತ್ರಿ ಬದಲಾವಣೆಯಂತಹ ವಿಷಯಗಳ ಬಗ್ಗೆ ನಮ್ಮ ಪಕ್ಷದ ವರಿಷ್ಟರು ತೀರ್ಮಾನ ಕೈಗೊಳ್ಳುತ್ತಾರೆ. ಖಾಲಿ ಇರುವ ಸಚಿವ ಸ್ಥಾನಗಳನ್ನು ತುಂಬುವ ಬಗ್ಗೆ ನಮ್ಮ ಪಕ್ಷದ ವರಿಷ್ಟರ ಜೊತೆಗೆ ಚರ್ಚಿಸುತ್ತೇವೆ. ನಾಗೇಂದ್ರ ರಾಜೀನಾಮೆಯಿಂದ ತೆರವಾದ ಸಚಿವ ಸ್ಥಾನವನ್ನು ತುಂಬುವ ಬಗ್ಗೆ ಪಕ್ಷದ ವರಿಷ್ಟರೊಂದಿಗೆ ಚರ್ಚಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.ವಿಶ್ವ ಕನ್ನಡ ಸಮ್ಮೇಳನ ಬಗ್ಗೆ ಪರಿಶೀಲನೆ:ರಾಜ್ಯದ ಬಜೆಟ್‌ ಅನ್ನು ಮಾರ್ಚ್‌ನಲ್ಲಿ ಮಂಡಿಸಲಿದ್ದೇನೆ. ಬಜೆಟ್ ಪೂರ್ವಭಾವಿ ಚರ್ಚೆ ಆರಂಭವಾದ ನಂತರ ದಿನಾಂಕವನ್ನು ತಿಳಿಸುತ್ತೇವೆ. ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸುವಂತೆ ಈ ಹಿಂದೆ ನಾನೇ ಸಿಎಂ ಆಗಿದ್ದಾಗ ಘೋಷಣೆ ಮಾಡಲಾಗಿತ್ತು. ಇದೀಗ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸುವ ಬಗ್ಗೆ ಸಚಿವ ಎಸ್.ಎಸ್‌.ಮಲ್ಲಿಕಾರ್ಜುನ ನೇತೃತ್ವದಲ್ಲಿ ಮನವಿ ಮಾಡಿದ್ದೀರಿ. ಈ ಬಗ್ಗೆ ಪರಿಶೀಲಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು. ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ, ಭೈರತಿ ಸುರೇಶ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಮಾಜಿ ಸಚಿವರಾದ ಎಚ್.ಎಂ.ರೇವಣ್ಣ, ಎಚ್.ಆಂಜನೇಯ ಇತರರು ಇದ್ದರು. ತಾಪಂ, ಜಿಪಂ ಚುನಾವಣೆ, ಒಳಮೀಸಲಿಗೆ ಬದ್ಧ-ಸಿದ್ದುತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಸಲು ನಾವು ಸಿದ್ಧರಿದ್ದೇವೆ. ಆದರೆ, ತಾಪಂ, ಜಿಪಂ ವಿಚಾರ ನ್ಯಾಯಾಲಯದ ಮೆಟ್ಟಿಲೇರಿದ್ದು, ಮೊದಲು ಅಲ್ಲಿ ಇತ್ಯರ್ಥಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ತಾಪಂ, ಜಿಪಂ ಚುನಾವಣೆ ನಡೆಸಲು ನಾವು ತಯಾರಿದ್ದೇವೆ. ಆದರೆ, ಈ ವಿಷಯ ಮೊದಲು ನ್ಯಾಯಾಲಯದಲ್ಲಿಯೇ ಇತ್ಯರ್ಥಗೊಳ್ಳಬೇಕಿದೆ ಎಂದರು. ಒಳಮೀಸಲಾತಿ ನೀಡುವಂತೆ ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಪ್ರಾಯೋಗಿಕ ಮಾಹಿತಿ ಇಲ್ಲದ ಕಾರಣಕ್ಕೆ ನಾಗಮೋಹನ ದಾಸ್‌ ನೇತೃತ್ವದ ಸಮಿತಿ ರಚಿಸಲಾಗಿದೆ. ಒಳಮೀಸಲಾತಿ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಊಟಕ್ಕೆ ಸೇರೋದೇ ತಪ್ಪಾ? ಅದಕ್ಯಾಕೆ ಬಣ್ಣ? ಊಟಕ್ಕೆ ಸೇರುವುದೇ ತಪ್ಪೇ? ರಾಜಕಾರಣಿಗಳು ಒಂದು ಕಡೆ ಊಟಕ್ಕೆ ಸೇರಿದರೆ ಬಣ್ಣ ಕಟ್ಟಲಾಗುತ್ತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ಹೊರಹಾಕಿದರು. ಸಚಿವ ಸತೀಶ ಜಾರಕಿಹೊಳಿ ಮನೆಯಲ್ಲಿ ಹಲವು ಸಚಿವರು ಸೇರಿದ್ದು, ಊಟ ಮಾಡಿದ್ದು ತಪ್ಪೇ ಎಂದರು. ಸತೀಶ ಜಾರಕಿಹೊಳಿ ಮನೆಯಲ್ಲಿ ಯಾವುದೇ ರಾಜಕೀಯ ಚರ್ಚೆಗಳೂ ನಡೆದಿಲ್ಲ. ನಾವು ಊಟಕ್ಕೆ ಸೇರುವುದೇ ತಪ್ಪಾ? ನಾವು ಊಟ ಮಾಡೋದು, ನೀವು ಊಟ ಮಾಡೋದು ಸೇಮ್‌. ಅದರಲ್ಲಿ ತಪ್ಪೇನಿದೆ? ಎಂದರು.