ಸಾರಾಂಶ
ನರಗುಂದ: ಕಳೆದ ಎರಡು ವಾರಗಳಿಂದ ರಾಜ್ಯ ಸರ್ಕಾರ ಮುಸುಕುಧಾರಿ ಮಾತು ಕೇಳಿ ಧರ್ಮಸ್ಥಳದಲ್ಲಿ ಉತ್ಖನನ ನಡೆಸಿ ಹಿಂದೂಗಳ ಪವಿತ್ರ ಕ್ಷೇತ್ರ ಕುರಿತು ಅಪಪ್ರಚಾರ ಮಾಡುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಕ್ಷಮೆ ಕೇಳಬೇಕು ಎಂದು ಶಾಸಕ ಸಿ.ಸಿ. ಪಾಟೀಲ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಮತ್ತು ಎಲ್ಲಾ ಸಚಿವರು ವೀರೇಂದ್ರ ಹೆಗ್ಗಡೆಯವರ, ಶ್ರೀ ಮಂಜುನಾಥ ಸ್ವಾಮಿಯ, ನಾಡಿನ ಜನರ ಕ್ಷಮೆ ಕೇಳಬೇಕು. ಎಡಪಂಥೀಯ ವಿಚಾರಗಳಿಂದ ಪ್ರೇರಿತಗೊಂಡಂತೆ ಇಡೀ ಸನಾತನ ಧರ್ಮದ ಅಪಪ್ರಚಾರ ವಾಗುತ್ತಿದೆ ಎಂದು ಕಿಡಿಕಾರಿದರು.ಡಿಕೆಸಿ ಕಣ್ಣೊರೆಸುವ ತಂತ್ರ: ಹಿಂದೂ ದೇವಾಲಯಗಳನ್ನು, ಸಂಸ್ಕೃತಿಯನ್ನು ಹಾಳು ಮಾಡುವ ಉದ್ದೇಶವನ್ನು ಕಾಂಗ್ರೆಸ್ ಹೊಂದಿದೆ. 15 ದಿನದ ನಂತರ ವಿಧಾನಸಭೆಯಲ್ಲಿ ವಿರೋಧ ಪಕ್ಷ ನಾಯಕ ಆರ್. ಅಶೋಕ, ಶಾಸಕ ಸುನೀಲ ಕುಮಾರ ಧರ್ಮಸ್ಥಳದ ಬಗ್ಗೆ ಪ್ರಸ್ತಾಪಿಸಿದಾಗ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನಾವು ಮಂಜುನಾಥ ಸ್ವಾಮಿ ಪರ ಇದ್ದೇವೆ ಎಂದರು. ವಿಧಾನಸಭೆಯಿಂದ ಹೊರ ಬಂದ ನಂತರ ಇದರ ಹಿಂದೆ ಷಡ್ಯಂತ್ರ ಇದೆ ಎಂದೂ ಅವರು ಹೇಳುತ್ತಾರೆ. ಇವೆಲ್ಲವೂ ಕಣ್ಣೊರೆಸುವ ತಂತ್ರ. ಮುಸುಕುಧಾರಿ ಮಾತು ಕೇಳಿಕೊಂಡು ಮೂರು ಜನ ಐಪಿಎಸ್ ಅಧಿಕಾರಿಗಳ ನೇತೃತ್ವದ ಎಸ್‌ಐಟಿ ರಚನೆ ಮಾಡಿ ಉತ್ಖನನಕ್ಕೆ ಮುಂದಾಗಿರುವುದು ಅಕ್ಷಮ್ಯ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದರ ಹಿಂದೆ ಕೆಲವು ಸಂಘಟನೆಗಳು, ಎಡಪಂಥೀಯ ಶಕ್ತಿಗಳ, ಕೆಲವು ಯುಟ್ಯೂಬರ್ ಗಳಿಂದ ಧರ್ಮಸ್ಥಳಕ್ಕೆ ಕೆಟ್ಟ ಹೆಸರು ಉಂಟು ಮಾಡಿದ್ದಾರೆ. ಧರ್ಮಸ್ಥಳದ ಪರ ಹೇಳಿಕೆ ನೀಡುವವರ ವಿರುದ್ದ ಸಮೀರ ಸೇರಿದಂತೆ ಕೆಲವು ಸಮಾಜಘಾತುಕ ಶಕ್ತಿಗಳು ಅವಹೇಳನಕಾರಿ ಪೋಸ್ಟ್ ಮಾಡಿ ಕಾಮೆಂಟ್ ಮಾಡುವುದನ್ನು ಸಹಿಸಲಾಗದು. ಇಲ್ಲಿನ ವಿಚಾರಗಳು ಮುಸ್ಲಿಂ ದೇಶಗಳಲ್ಲಿ ಅಲ್ ಜಜಿರಾ, ಬಿಬಿಸಿಯಂತಹ ಮಾಧ್ಯಮಗಳಲ್ಲಿ ಬರುವುದು ನೋಡಿದರೆ ಇದರೆ ಹಿಂದೆ ದೊಡ್ಡ ಸಂಚು ಇದೆ ಎಂದು ಆರೋಪಿಸಿದರು.ಸರ್ಕಾರ ಮಾಡದ ಕೆಲಸವನ್ನು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮಾಡಿದೆ. ಇದನ್ನು ರಾಜ್ಯ ಸರ್ಕಾರ ಅರಿಯಬೇಕು. ನಾವು ಸಂಪೂರ್ಣ ಧರ್ಮಸ್ಥಳದ ಪರ ಇದ್ದೇವೆ. ಶೀಘ್ರದಲ್ಲೇ ಧರ್ಮಸ್ಥಳಕ್ಕೆ ಭೇಟಿ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ವಿಶೇಷ ಅನುದಾನ ಎಲ್ಲಿ?: ಶಾಸಕರಿಗೆ ಅನುದಾನ ನೀಡುತ್ತೇವೆ ಎಂದು ಇಲ್ಲಿಯವರೆಗೂ ಅನುದಾನ ನೀಡಿಲ್ಲ. 136 ಶಾಸಕರಿದ್ದರೂ ಅಧಿಕಾರದ ಹಪಾಹಪಿ ಹೋಗಿಲ್ಲ. ರಾಜ್ಯ ಸರ್ಕಾರ ಎಲ್ಲಾ ರಂಗಗಳಲ್ಲಿ ವಿಫಲವಾಗಿದೆ. ಗ್ಯಾರಂಟಿ ಸಮಿತಿ ಅಧ್ಯಕ್ಷರನ್ನು ಸರ್ಕಾರದ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರೋಟೋಕಾಲ್ ರೀತಿಯಲ್ಲಿ ಆದೇಶ ಮಾಡಲಾಗಿದೆ. ತಾಲೂಕು, ಜಿಲ್ಲಾ ಅಧ್ಯಕ್ಷರು, ಹಾಲಿ, ಮಾಜಿ ಕಾಂಗ್ರೆಸ್ ಶಾಸಕರ ಮಕ್ಕಳೇ ಆಗಿದ್ದಾರೆ. ಅತಿವೃಷ್ಟಿಯಿಂದ ಆದ ಬೆಳೆಹಾನಿ ಬಗ್ಗೆ ವಿಧಾನಸಭಾ ಅಧಿವೇಶನದಲ್ಲಿ ಬೆಳೆ ಹಾನಿ ಮಾಡಿಕೊಂಡ ರೈತ ಸಮುದಾಯಕ್ಕೆ ಬೆಳೆ ಹಾನಿ ಪರಿಹಾರ ನೀಡಬೇಕೆಂದು ಗಮನ ಸೆಳೆಯಲಾಗುವುದು ಎಂದು ಹೇಳಿದರು.ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ನೀಲವ್ವ ಒಡ್ಡಿಗೇರಿ, ಉಮೇಶಗೌಡ ಪಾಟೀಲ, ಎಸ್.ಆರ್. ಪಾಟೀಲ, ಶಿವಾನಂದ ಮುತವಾಡ, ಮಲ್ಲಪ್ಪ ಮೇಟಿ, ಚಂದ್ರು ದಂಡಿನ, ಬಾಪುಗೌಡ ತಿಮ್ಮನಗೌಡ್ರ, ಗುರುಪ್ಪ ಆದಪ್ಪನವರ, ಹನಮಂತ ಹವಾಲ್ದಾರ, ಪ್ರಕಾಶಗೌಡ ತಿರಕನಗೌಡ್ರ, ಬಾಬುಗೌಡ ತಿಮ್ಮನಗೌಡ್ರ, ವಿಜಯ ಬೇಲೇರಿ, ಪುರಸಭೆ ಸದಸ್ಯರು, ಸೇರಿದಂತ ಮುಂತಾದವರು ಇದ್ದರು.