ಸಾರಾಂಶ
ನಾಡಿನ ಅನೇಕ ಕವಿಗಳು, ಸಾಹಿತಿಗಳು ಹಾಗೂ ಸಾಧಕರ ಪುಸ್ತಕಗಳನ್ನು ಓದಬೇಕು. ಇದರಿಂದ ಉತ್ತಮ ವ್ಯಕ್ತಿತ್ವ ರೂಪುಗೊಳ್ಳಲಿದೆ.
ಬಳ್ಳಾರಿ: ತಾಲೂಕಿನ ಮೋಕಾ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಪ್ರಾಚೀನ, ರಾಷ್ಟ್ರೀಯ, ಅಂತಾರಾಷ್ಟ್ರೀಯ ನಾಣ್ಯ ಮತ್ತು ಶಿಲಾಯುಗದ ಸ್ಮಾರಕಗಳ ಪ್ರದರ್ಶನ ಹಾಗೂ ಪುಸ್ತಕ ಪ್ರದರ್ಶನ ಜರುಗಿತು.
ಪ್ರಾಂಶುಪಾಲ ಡಾ. ಇಸ್ಮಾಯಿಲ್ ಮಕಂದಾರ್ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಪುಸ್ತಕಗಳ ಸ್ನೇಹ ಬೆಳೆಸಬೇಕು. ಪುಸ್ತಕ ಓದುವ ಹವ್ಯಾಸದಿಂದ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳು ವೃದ್ಧಿಗೊಳ್ಳುತ್ತವೆ. ಸ್ವತಂತ್ರವಾಗಿ ಚಿಂತನೆ ಮಾಡುವ ಶಕ್ತಿ ಹೆಚ್ಚುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಕಲಾವತಿ ಬಿ.ಜಿ. ಅವರು, ವಿದ್ಯಾರ್ಥಿಗಳು ಉತ್ತಮ ಅಭಿರುಚಿ ಬೆಳೆಸಿಕೊಳ್ಳಬೇಕು. ನಾಣ್ಯಗಳ ಸಂಗ್ರಹ, ಅಂಚೆಚೀಟಿ ಸಂಗ್ರಹ ಹೀಗೆ ವಿವಿಧ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ನಾಡಿನ ಅನೇಕ ಕವಿಗಳು, ಸಾಹಿತಿಗಳು ಹಾಗೂ ಸಾಧಕರ ಪುಸ್ತಕಗಳನ್ನು ಓದಬೇಕು. ಇದರಿಂದ ಉತ್ತಮ ವ್ಯಕ್ತಿತ್ವ ರೂಪುಗೊಳ್ಳಲಿದೆ ಎಂದರು.
ನಾಣ್ಯ ಸಂಗ್ರಹಕಾರ ಶಾಂತಕುಮಾರ್ ಬಿ. ಗೋಟೂರು ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಮನೋಹರ್ ಸಿ.ಎಂ. ಮಾತನಾಡಿದರು. ಎನ್ಎಸ್‌ಎಸ್ ಅಧಿಕಾರಿ ಬಕಾಡೆ ಪಂಪಾಪತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಪ್ರಾಧ್ಯಾಪಕರಾದ ಡಾ. ಬೋರಯ್ಯ, ಶ್ವೇತಾ, ಅಮಲ್, ಪ್ರವೀಣ ಎ.ಎಂ.ಪಿ., ಆದರ್ಶ ಕೆ.ಎನ್., ಮಹಮದ್ ಅಸ್ಲಾಂ, ಗ್ರಂಥಪಾಲಕ ಪಂಪಾಪತಿ, ಶ್ರೀನಿವಾಸ್, ನವೀನ್, ಹರೀಶ್, ಮನೋಹರ್ ಹಾಗೂ ಆನಂದ್ ಉಪಸ್ಥಿತರಿದ್ದರು.ಸ್ವಾಮಿ ವಿವೇಕಾನಂದರ 161ನೇ ಜಯಂತಿಯ ಯುವ ಸಪ್ತಾಹ ಅಭಿಯಾನದ ಅಂಗವಾಗಿ ಪ್ರಾಚೀನ, ರಾಷ್ಟ್ರೀಯ, ಅಂತಾರಾಷ್ಟ್ರೀಯ ನಾಣ್ಯ ಮತ್ತು ಶಿಲಾಯುಗದ ಸ್ಮಾರಕಗಳ ಪ್ರದರ್ಶನ ಹಾಗೂ ಪುಸ್ತಕಗಳ ಪ್ರದರ್ಶನ ಆಯೋಜಿಸಲಾಗಿತ್ತು.