ಸಾರಾಂಶ
ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣ ಮತ್ತು ಇಂಟರ್‌ನೆಟ್‌ನಲ್ಲಿ ಬಾಹ್ಯಾಕಾಶದ ವಿಷಯಗಳ ಕುರಿತು ಹೆಚ್ಚಿನ ಚರ್ಚೆ ಮತ್ತು ಹುಡುಕಾಟ ನಡೆಸಿದರೆ ವಿಜ್ಞಾನ ಮತ್ತು ತಂತ್ರಜ್ಞಾನ ಇನ್ನಷ್ಟು ಬೆಳವಣಿಗೆ ಆಗಲಿದೆ ಎಂದು ಆಕಾಶವಾಣಿ ಕೇಂದ್ರದ ನಿರ್ದೇಶಕ ಶರಣಬಸವ ಚೋಳಿನ ಕರೆ ನೀಡಿದರು.
ಧಾರವಾಡ:
ಇಲ್ಲಿನ ಪ್ರಾದೇಶಿಕ ವಿಜ್ಞಾನ ಕೇಂದ್ರ ಹಾಗೂ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಯಶಸ್ವಿಯಾಯಿತು.ಇಸ್ರೋ ನಿವೃತ್ತ ವಿಜ್ಞಾನಿ ಡಾ. ಸುಧಿಂದ್ರ ಬಿಂದಗಿ, ಚಂದ್ರಯಾನ -3ರ ಉಡಾವಣೆ ಮತ್ತು ಉಡಾವಣೆಗೆ ಎದುರಿಸಿದ ಸವಾಲು ಮತ್ತು ಅವುಗಳನ್ನು ಮೀರಿ ಸಫಲವಾದ ಬಗೆ ಹಾಗೂ ಚಂದ್ರಯಾನ-3ರ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ವಿವರಿಸಿದರು. ಜತೆಗೆ ವಿಕ್ರಂ ಲ್ಯಾಂಡರ್ ಬಗ್ಗೆಯೂ ಮಾಹಿತಿ ನೀಡಿದರು.ವಿಶ್ರಾಂತ ಕುಲಪತಿ ಪ್ರೊ. ಬಿ.ಜಿ. ಮೂಲಿಮನಿ, ಭಾರತದ ಬಾಹ್ಯಾಕಾಶ ಸಂಶೋಧನೆಯಲ್ಲಿ ಡಾ. ವಿಕ್ರಂ ಸಾರಾಭಾಯಿ ಪಾತ್ರವು ಮಹತ್ವವಾಗಿದೆ. ನಂತರ ಡಾ. ಎಪಿಜೆ ಅಬ್ದುಲ್ ಕಲಾಂ ಅಂತಹವರ ಕೊಡುಗೆ ಅಪಾರ ಎಂದರು.
ಪ್ರಸ್ತುತ ದಿನಗಳಲ್ಲಿ ಎಲ್ಲ ವಿಭಾಗಗಳಲ್ಲಿ ಸ್ಪರ್ಧೆ ಹೆಚ್ಚಾಗಿದ್ದು ವಿದ್ಯಾರ್ಥಿಗಳು ಆ ಸ್ಪರ್ಧೆ ಜಯಿಸಿ ಉನ್ನತ ಸ್ಥಾನ ಕಂಡುಕೊಂಡು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಉತ್ತಮ ಸಂಶೋಧನೆ ಮಾಡುವತ್ತ ಶ್ರಮವಹಿಸಬೇಕು ಎಂದು ತಿಳಿಸಿದರು.ಆಕಾಶವಾಣಿ ಕೇಂದ್ರದ ನಿರ್ದೇಶಕ ಶರಣಬಸವ ಚೋಳಿನ, ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣ ಮತ್ತು ಇಂಟರ್‌ನೆಟ್‌ನಲ್ಲಿ ಇಂತಹ ವಿಷಯಗಳ ಕುರಿತು ಹೆಚ್ಚಿನ ಚರ್ಚೆ ಮತ್ತು ಹುಡುಕಾಟ ನಡೆಸಿದರೆ ವಿಜ್ಞಾನ ಮತ್ತು ತಂತ್ರಜ್ಞಾನ ಇನ್ನಷ್ಟು ಬೆಳವಣಿಗೆ ಆಗಲಿದೆ. ಈ ನಿಟ್ಟಿನಲ್ಲಿ ಇಂತಹ ಉಪನ್ಯಾಸಗಳ ಸದುಪಯೋಗ ಪಡೆಯಬೇಕೆಂದರು.
ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ವೀರಣ್ಣ ಡಿ. ಬೋಳಿಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ನಡೆಸಲಾಯಿತು. ಸ್ಪರ್ಧೆಯಲ್ಲಿ ಕೆಎಲ್‌ಇ ಪ್ರೌಢಶಾಲೆಯ ಚೇತನಾ ಪಿ. ಖಾನಗೌಡರ, ಶಾಂತಿಸದನದ ಸಮರ್ಥ ಹುಬ್ಬಳ್ಳಿ ಪ್ರಥಮ, ಆರ್‌ಎನ್‌ಎಸ್ ಶಾಲೆಯ ದ್ಯಾಮಪ್ಪ ಮೂಲಿಮನಿ ಮತ್ತು ಪವನ ಶಾಲೆಯ ವಿನಯ ನವಲಗುಂದ ದ್ವಿತೀಯ ಹಾಗೂ ಬಾಲಬಳಗದ ಅಶುತೋಷ ಮತ್ತು ಕಮಲಾಪೂರ ಸರ್ಕಾರಿ ಶಾಲೆಯ ಚನ್ನಮ್ಮ ಕರಿಗಾರ ತೃತೀಯ ಬಹುಮಾನ ಪಡೆದುಕೊಂಡರು.ಈ ವೇಳೆ ಚಂದ್ರಕಾಂತ ಎಫ್. ಚಂಡೂರ, ಉಷಾದೇವಿ ಪ್ರಗುಣನ್, ಮನೋಹರ ಗೋವಿಂದ ರೆಡ್ಡಿ ಇದ್ದರು.