- ಅಂಕವೀರರಿಗೆ ದೈವಜ್ಞ ವಿದ್ಯಾಸಿರಿ ಪ್ರಶಸ್ತಿ ಪ್ರದಾನ, ವಿಶೇಷಚೇತನರಿಗೆ ಸಹಾಯಹಸ್ತ ಕಾರ್ಯಕ್ರಮ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ತಮ್ಮ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ಧನದೊಂದಿಗೆ ದೈವಜ್ಞ ವಿದ್ಯಾಸಿರಿ ಪ್ರಶಸ್ತಿ ಪ್ರದಾನ ಹಾಗೂ ವಿಶೇಷಚೇತನರಿಗೆ ಸಹಾಯಹಸ್ತ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ ಕಾರ್ಯ. ಹಿಂದೆಲ್ಲಾ ಇಂತಹ ಕಾರ್ಯಕ್ರಮಗಳು ಬಹಳ ಕಡಿಮೆ ಇರುತ್ತಿದ್ದವು. ಆದರೆ ಇತ್ತೀಚಿಗೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಯಾ ಸಮಾಜ, ಸರ್ಕಾರದ ವತಿಯಿಂದ ಸಹಾಯ ಮಾಡಲಾಗುತ್ತಿದೆ. ಪ್ರತಿಭಾನ್ವಿತ ಮಕ್ಕಳು ಇಂತಹ ಅವಕಾಶಗಳನ್ನು ಪಡೆದುಕೊಳ್ಳಬೇಕು ಎಂದು ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಹೇಳಿದರು.ದೈವಜ್ಞ ಬ್ರಾಹ್ಮಣ ರೇವಣಕರ್ ಪರಿವಾರದಿಂದ ಇಲ್ಲಿನ ದೈವಜ್ಞ ಕಲ್ಯಾಣ ಮಂಟಪದಲ್ಲಿ ಭಾನುವಾರ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.75ಕ್ಕಿಂತ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ದೈವಜ್ಞ ವಿದ್ಯಾಸಿರಿ ಜಿಲ್ಲಾ ಪ್ರಶಸ್ತಿ ಪ್ರದಾನ ಹಾಗೂ ದೈವಜ್ಞ ಸಮಾಜದ ವಿಶೇಷಚೇತನರಿಗೆ ಸಹಾಯಹಸ್ತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮೊಬೈಲ್‌ಗಳ ಬಳಕೆ ಅವಶ್ಯಕತೆಗೆ ಮಾತ್ರ ಬಳಕೆ ಮಾಡಿಕೊಳ್ಳಿರಿ. ಸಮಾಜ ಮಾಡುವ ಸಹಾಯವನ್ನು ಕಾಪಾಡಿಕೊಳ್ಳಬೇಕು. ಮಕ್ಕಳು ಗುರು- ಹಿರಿಯರು, ತಂದೆ- ತಾಯಿಗಳ ಮಾರ್ಗದರ್ಶನದಲ್ಲಿ ಸಂಸ್ಕಾರ, ಸಂಸ್ಕೃತಿ ಕಲಿಯಬೇಕು. ನಮ್ಮ ಮನೆ, ನಮ್ಮ ಶಿಕ್ಷಣ, ನನ್ನ ಮುಂದಿನ ಜೀವನದ ಬಗ್ಗೆ ಯೋಚಿಸಬೇಕು. ಪ್ರಸ್ತುತ ಎಲ್ಲ ರಂಗದಲ್ಲಿಯೂ ಸ್ಪರ್ಧೆ ಇದೆ. ವಿದ್ಯಾರ್ಥಿಗಳು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದರು.
ಸಂಜಯ್ ರೇವಣಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ಈ ನಮ್ಮ ಪರಿವಾರದಿಂದ 2011 ರಿಂದ ಈ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಅಂದು ಬೆರಳೆಣಿಕೆಯಷ್ಟು ಮಕ್ಕಳಿಗೆ ಸನ್ಮಾನಿಸಲಾಗುತ್ತಿತ್ತು. ಅತೀ ಹೆಚ್ಚು ಅಂಕಗಳಿಸಿದರೆ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿಯಲ್ಲಿ ಪ್ರೋತ್ಸಾಹ ಧನ ನೀಡಿ ಪ್ರತಿಭಾ ಪುರಸ್ಕಾರ ನೀಡುತ್ತಾರೆ ಎಂಬ ಖುಷಿ ಮಕ್ಕಳಲ್ಲಿ ಬರುತ್ತಿದೆ. ಈ ಬಾರಿ 40 ಪ್ರತಿಭಾನ್ವಿತ ಮಕ್ಕಳು ಪುರಸ್ಕಾರ ಪಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಅಲ್ಲದೇ ಗೋವಾದ ರೀವಣದಲ್ಲಿರುವ ಶ್ರೀ ವಿಮಲೇಶ್ವರ ದೇವಸ್ಥಾನದ ಅಭಿವೃದ್ಧಿಗೆ, ಭಕ್ತರಿಗೆ ನಿತ್ಯ ಅನ್ನಸಂತರ್ಪಣೆ ಕಾರ್ಯ ನಡೆಸುವ ನಿಟ್ಟಿನಲ್ಲಿ ಕರ್ನಾಟಕದ ನಮ್ಮ ದೈವಜ್ಞ ಬ್ರಾಹ್ಮಣ ರೇವಣಕರ್ ಪರಿವಾರದಿಂದ ಸೇವೆ ಸಲ್ಲಿಸಲು ಮುಂದಾಗಿರುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಮಹಾನಗರ ಪಾಲಿಕೆ ಮಾಜಿ ಸದಸ್ಯ ಎ.ನಾಗರಾಜ ಮಾತನಾಡಿ, ಇಲ್ಲಿ ಪ್ರತಿಭಾ ಪುರಸ್ಕಾರ ಸ್ವೀಕರಿಸಿದ ಮಕ್ಕಳು ಮುಂದಿನ ದಿನಗಳಲ್ಲಿ ಒಳ್ಳೆಯ ವಿದ್ಯಾಭ್ಯಾಸ ಪಡೆದು ರ‍್ಯಾಂಕ್ ಗಳಿಸಿ ಸಮಾಜಕ್ಕೆ ಕೀರ್ತಿ ತರುವಂತಹ ಕೆಲಸವನ್ನು ಮಾಡಬೇಕು. ನಾವೆಲ್ಲಾ ಓದುವಾಗ ಶೇ.35 ಅಂಕ ಗಳಿಸಿದರೆ ಅದು ದೊಡ್ಡ ಸಾಧನೆ ಎನಿಸುತ್ತಿತ್ತು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಾವ ಮಕ್ಕಳು ಕೇಳಿದರೂ ಶೇ.95ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. ಅದರಲ್ಲೂ ಸ್ಪರ್ಧೆ ಇದೆ. ಎಲ್ಲ ಮಕ್ಕಳೂ ಓದಿನ ಕಡೆಗೆ ಹೆಚ್ಚಿನ ಗಮನ ಕೊಡಿ. ನಿಮಗೆ ನಿಮ್ಮ ಸಮಾಜ ಪ್ರೋತ್ಸಾಹ ನೀಡುತ್ತಿದೆ. ನೀವು ಮುಂದಿನ ದಿನಗಳಲ್ಲಿ ಅಧಿಕಾರಿಗಳಾಗಿ ಸಮಾಜಕ್ಕೆ ಏನಾದರೂ ಕೊಡುಗೆ ಕೊಡುವಂತವರಾಗಿ ಎಂದು ಹೇಳಿದರು.ಪರಿವಾರದ ಅಧ್ಯಕ್ಷ ಮಂಜುನಾಥ ಎನ್.ರೇವಣಕರ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಗೋವಾ ರೇವಣದ ಶ್ರೀ ವಿಮಲೇಶ್ವರ ಸಂಸ್ಥಾನದ ಅಧ್ಯಕ್ಷ ರಾಮನಾಥ ಪ್ರಭು ದೇಸಾಯಿ, ಪರಿವಾರದ ಸಂಸ್ಥಾಪಕ, ಗೌರವಾಧ್ಯಕ್ಷರಾದ ಡಾ.ನಲ್ಲೂರು ಅರುಣಾಚಲ ಎನ್. ರೇವಣಕರ್, ದೈವಜ್ಞ ಬ್ರಾಹ್ಮಣ ಸಮಾಜ ಸಂಘದ ಅಧ್ಯಕ್ಷ ಪ್ರಶಾಂತ್ ವಿ.ವೆರ್ಣೇಕರ್, ಮೈಸೂರಿನ ಮೀರಾ ನಾಗೇಶ ರೇವಣಕರ್, ಪರಿವಾರದ ಉಪಾಧ್ಯಕ್ಷ ದೇವಿದಾಸ್ ಸುಬ್ರಾಯ ರೇವಣಕರ್, ನಲ್ಲೂರು ರಾಘವೇಂದ್ರ, ಮದನ್, ಮಾರುತಿ, ರಾಮಚಂದ್ರ, ಮಾರುತಿ, ವಿಜಯ್, ಅಶೋಕ ಸೇರಿದಂತೆ ಪರಿವಾರದ ಕಾರ್ಯಕಾರಿ ಮಂಡಳಿ ಸದಸ್ಯರು, ಇತರರು ಇದ್ದರು. ಸಮಾಜದ 40 ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಪುರಸ್ಕರಿಸಲಾಯಿತು.
- - --31ಕೆಡಿವಿಜಿ32:
ದಾವಣಗೆರೆಯಲ್ಲಿ ದೈವಜ್ಞ ಬ್ರಾಹ್ಮಣ ರೇವಣಕರ್ ಪರಿವಾರದಿಂದ ಆಯೋಜಿಸಿದ ದೈವಜ್ಞ ವಿದ್ಯಾಸಿರಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ಉದ್ಘಾಟಿಸಿದರು.